ADVERTISEMENT

13 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ: ₹ 35.83 ಕೋಟಿ ಅಕ್ರಮ ಆಸ್ತಿ ಪತ್ತೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 16:18 IST
Last Updated 27 ಮಾರ್ಚ್ 2024, 16:18 IST
ಲೋಕಾಯುಕ್ತ
ಲೋಕಾಯುಕ್ತ   

ಬೆಂಗಳೂರು: ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದಡಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 13 ಅಧಿಕಾರಿಗಳ ಮೇಲೆ ಬುಧವಾರ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ₹ 35.83 ಕೋಟಿ ಮೌಲ್ಯದ ಅಕ್ರಮ ಆಸ್ತಿಗಳನ್ನು ಪತ್ತೆಮಾಡಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳ 62 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಈವರೆಗೆ ₹35.77 ಕೋಟಿ ಮೌಲ್ಯದ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು, ₹44.39 ಲಕ್ಷ ನಗದು, ₹2.61 ಕೋಟಿ ಮೌಲ್ಯದ ಚಿನ್ನಾಭರಣ, ₹ 2.56 ಕೋಟಿ ಮೌಲ್ಯದ ವಾಹನಗಳು, ₹ 3.82 ಕೋಟಿ ಮೌಲ್ಯದ ಇತರ ಸ್ವತ್ತುಗಳನ್ನು ತನಿಖಾ ತಂಡಗಳು ಪತ್ತೆ ಮಾಡಿವೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಒಟ್ಟು ₹41.76 ಕೋಟಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಪತ್ತೆ ಮಾಡಲಾಗಿದೆ. 13 ಆರೋಪಿಗಳ ಘೋಷಿತ ಆದಾಯಕ್ಕೆ ಹೋಲಿಸಿದರೆ ₹35.83 ಕೋಟಿ ಮೌಲ್ಯದ ಅಕ್ರಮ ಆಸ್ತಿಗಳಿವೆ ಎಂದು ತನಿಖಾ ಸಂಸ್ಥೆಯ ಪ್ರಕಟಣೆಯಲ್ಲಿ ವಿವರ ನೀಡಲಾಗಿದೆ.

ADVERTISEMENT

ಮಾಗಡಿ ನಗರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ನಾಗರಾಜಪ್ಪ ಬಳಿ ಬರೋಬ್ಬರಿ ₹ 11.13 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಮನೆಯಲ್ಲಿ ₹ 11.50 ಲಕ್ಷ ನಗದು ಸಿಕ್ಕಿದೆ. ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ 50 ಕೊಠಡಿಗಳುಳ್ಳ ಪೇಯಿಂಗ್‌ ಗೆಸ್ಟ್‌ ಕಟ್ಟಡವೂ ಸೇರಿದಂತೆ ಐದು ಮನೆಗಳಿವೆ. ಮಾಲೂರು ತಾಲ್ಲೂಕಿನ ಯೆಟ್ಟಕೋಡಿ ಗ್ರಾಮದಲ್ಲೂ ಒಂದು ಮನೆ ಇದೆ. ತನ್ನ ಹಾಗೂ ಪತ್ನಿಯ ಹೆಸರಿನಲ್ಲಿ, ತಂಗಿ ಮತ್ತು ಅತ್ತೆಯ ಹೆಸರಿನಲ್ಲೂ ಕೃಷಿ ಜಮೀನು ಖರೀದಿಸಿರುವ ದಾಖಲೆಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.

ಬಿಬಿಎಂಪಿ ಯಲಹಂಕ ವಲಯದ ಮುಖ್ಯ ಎಂಜಿನಿಯರ್‌ ರಂಗನಾಥ್‌ ಎಸ್‌.ಪಿ. ಮನೆಯಲ್ಲಿ ₹ 7 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಈ ಅಧಿಕಾರಿ ತಲಾ ಎರಡು ನಿವೇಶನ, ಎರಡು ಮನೆ ಮತ್ತು ಎರಡು ವಾಣಿಜ್ಯ ಸಂಕೀರ್ಣ ಹೊಂದಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ. ಜಯಣ್ಣ ಮನೆಯಲ್ಲಿ ₹ 9.20 ಲಕ್ಷ ನಗದು ಪತ್ತೆಯಾಗಿದೆ. ಕೆಲವು ದಿನಗಳ ಹಿಂದಷ್ಟೇ ವರ್ಗಾವಣೆಯಾಗಿದ್ದು, ಇನ್ನೂ ಸೋಮವಾರಪೇಟೆಯಲ್ಲೇ ಇದ್ದರು.

ಅಬಕಾರಿ ಇಲಾಖೆಯ ಉಡುಪಿ ಉಪ ಆಯುಕ್ತೆ ರೂಪಾ ಎಂ. ಐದು ಮನೆಗಳ ಒಡತಿ. 8 ಎಕರೆ 18 ಗುಂಟೆ ಕೃಷಿ ಜಮೀನು ಕೂಡ ಇದೆ. ಧಾರವಾಡದ ವಲಯ ಅರಣ್ಯಾಧಿಕಾರಿ ಮಹೇಶ್‌ ಚಂದ್ರಯ್ಯ ಹಿರೇಮಠ ಏಳು ನಿವೇಶನ, ಒಂದು ಮನೆ, 27 ಎಕರೆ ಕೃಷಿ ಜಮೀನು ಹೊಂದಿರುವುದು ಪತ್ತೆಯಾಗಿದೆ. ಇವರ ಮನೆಯಲ್ಲಿ ₹ 3 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿಯ ಸಹಾಯಕ ಪ್ರಾದೇಶಿಕ ಅಧಿಕಾರಿ ಷಣ್ಮುಖಪ್ಪ ಭಿಮ್ಷಾ ತೀರ್ಥ 48 ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಮನೆಯಲ್ಲಿ ₹ 2.82 ಲಕ್ಷ ನಗದು ಸಿಕ್ಕಿದೆ. ಬೀದರ್‌ನ ಕಾರಂಜಾ ಯೋಜನೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಕುಮಾರಸ್ವಾಮಿ ಮೂರು ನಿವೇಶನ ಮತ್ತು ನಾಲ್ಕು ಮನೆ ಹೊಂದಿದ್ದಾರೆ. ₹ 20 ಲಕ್ಷ ಬ್ಯಾಂಕ್‌ ಠೇವಣಿಯೂ ಪತ್ತೆಯಾಗಿದೆ.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಚಿಕ್ಕಬಳ್ಳಾಪುರ ಕಾರ್ಯನಿರ್ವಾಹಕ ಎಂಜಿನಿಯರ್‌ ಸದಾಶಿವಯ್ಯ ಮೂರು ಮನೆ ಹೊಂದಿದ್ದಾರೆ. ಕಾರವಾರದ ಕಿರಿಯ ಎಂಜಿನಿಯರ್‌ ಪ್ರಕಾಶ್‌ ರೇವಣ್ಕರ್‌ ಬಳಿ ಐದು ಮನೆ, ಒಂದು ನಿವೇಶನಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.