ADVERTISEMENT

ಶಾಸಕ ಭರತ್‌ ರೆಡ್ಡಿ ವಿರುದ್ಧ ತನಿಖೆಗೆ ಅನುಮತಿ ಕೋರಿದ ಲೋಕಾಯುಕ್ತ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 16:24 IST
Last Updated 23 ಏಪ್ರಿಲ್ 2024, 16:24 IST
ನಾರಾ ಭರತ್‌ ರೆಡ್ಡಿ
ನಾರಾ ಭರತ್‌ ರೆಡ್ಡಿ   

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೂ ಮುನ್ನ ₹ 42 ಕೋಟಿಯಷ್ಟು ಹಣ ಸಂಗ್ರಹಿಸಿ, ಬಳಕೆ ಮಾಡಿರುವ ಆರೋಪ ಕುರಿತು ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾ ಭರತ್‌ ರೆಡ್ಡಿ ವಿರುದ್ಧ ತನಿಖೆ ಆರಂಭಿಸಲು ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

ಹಣದ ಅಕ್ರಮ ವರ್ಗಾವಣೆ ಆರೋಪದಡಿ ಭರತ್‌ ರೆಡ್ಡಿ ಮತ್ತು ಸಹಚರರ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಫೆಬ್ರುವರಿ 10ರಂದು ದಾಳಿಮಾಡಿ, ಶೋಧ ನಡೆಸಿದ್ದರು. ಕರ್ನಾಟಕ ಆಂಧ್ರಪ್ರದೇಶದ ಹಲವೆಡೆ ಶೋಧ ನಡೆಸಲಾಗಿತ್ತು. ವಿಧಾನಸಭಾ ಚುನಾವಣೆಗೂ ಮುನ್ನ ₹ 42 ಕೋಟಿ ಸಂಗ್ರಹಿಸಿ, ಬಳಸಿರುವ ಕುರಿತು ಮಾಹಿತಿ ದೊರಕಿದೆ ಎಂದು ಇ.ಡಿ ಹೇಳಿತ್ತು.

ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಭರತ್‌ ರೆಡ್ಡಿ ವಿರುದ್ಧ ತನಿಖೆ ನಡೆಸುತ್ತಿರುವ ಇ.ಡಿ, ಆರೋಪಗಳ ಕುರಿತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಪತ್ರ ಬರೆದಿತ್ತು. ಆ ಬಳಿಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿರುವ ಲೋಕಾಯುಕ್ತದ ಪೊಲೀಸ್‌ ಅಧಿಕಾರಿಗಳು, ತನಿಖೆಗೆ ಅನುಮತಿ ನೀಡುವಂತೆ ಕೋರಿದ್ದಾರೆ.

ADVERTISEMENT

‘ಭರತ್‌ ರೆಡ್ಡಿ ಅಕ್ರಮ ಗಣಿಗಾರಿಕೆ ಮತ್ತು ಕೆಲವು ವಂಚನೆ ಸ್ವರೂಪದ ರಿಯಲ್‌ ಎಸ್ಟೇಟ್‌ ವ್ಯವಹಾರಗಳ ಮೂಲಕ ಹಣ ಸಂಗ್ರಹಿಸಿರುವುದು ಪತ್ತೆಯಾಗಿದೆ. ಆ ಹಣವನ್ನು ವಿಧಾನಸಭಾ ಚುನಾವಣೆಯ ಟಿಕೆಟ್‌ ಪಡೆಯಲು ಹಾಗೂ ಚುನಾವಣೆಯ ಇತರ ವೆಚ್ಚಕ್ಕೆ ಬಳಸಿರುವ ಸಾಧ್ಯತೆಗಳಿವೆ’ ಎಂದು ಇ.ಡಿ ಅನುಮಾನ ವ್ಯಕ್ತಪಡಿಸಿತ್ತು.

‘ಭರತ್‌ ರೆಡ್ಡಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವಂತೆ ಇ.ಡಿ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಆದರೆ, ಸರ್ಕಾರದ ಅನುಮತಿ ಪಡೆಯದೇ ತನಿಖೆ ಆರಂಭಿಸಲು ಅವಕಾಶವಿಲ್ಲ. ಅನುಮತಿ ಕೋರಿ ಪತ್ರ ಬರೆದಿದ್ದೇವೆ. ಅನುಮತಿ ದೊರೆತ ಬಳಿಕ ತನಿಖೆ ಆರಂಭಿಸಲಾಗುವುದು’ ಎಂದು ಲೋಕಾಯುಕ್ತ ಪೊಲೀಸ್‌ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಚುನಾವಣಾ ಆಯೋಗಕ್ಕೂ ಪತ್ರ

ಅಕ್ರಮವಾಗಿ ಗಳಿಸಿದ ಹಣವನ್ನು ಚುನಾವಣಾ ವೆಚ್ಚ ಹಾಗೂ ಮತದಾರರಿಗೆ ಆಮಿಷ ಒಡ್ಡಲು ಬಳಸಿದ ಆರೋಪದ ಮೇಲೆ ನಾರಾ ಭರತ್‌ ರೆಡ್ಡಿ ವಿರುದ್ಧ ತನಿಖೆ ನಡೆಸುವಂತೆ ಇ.ಡಿ ಅಧಿಕಾರಿಗಳು ಕೇಂದ್ರ ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದಾರೆ. ‘ಭರತ್‌ ರೆಡ್ಡಿ ಚುನಾವಣೆಯಲ್ಲಿ ಮಾಡಿರುವ ನೈಜ ವೆಚ್ಚಕ್ಕೂ ಆಯೋಗಕ್ಕೆ ಸಲ್ಲಿಸಿರುವ ಲೆಕ್ಕಕ್ಕೂ ವ್ಯತ್ಯಾಸವಿದೆ. ಭಾರಿ ಪ್ರಮಾಣದ ನಗದನ್ನು ಮತದಾರರಿಗೆ ಆಮಿಷ ಒಡ್ಡಲು ಬಳಸಿರುವುದಕ್ಕೆ ಪುರಾವೆಗಳಿವೆ. ಚುನಾವಣಾ ಭ್ರಷ್ಟಾಚಾರ ಮತದಾರರಿಗೆ ಆಮಿಷ ಒಡ್ಡಿರುವುದು ಮತ್ತು ಚುನಾವಣಾ ವೆಚ್ಚದ ವಿವರಗಳನ್ನು ಸಲ್ಲಿಸಲು ವಿಫಲವಾಗಿರುವ ಆರೋಪದ ಮೇಲೆ ಪ್ರಜಾಪ್ರತಿನಿಧಿ ಕಾಯ್ದೆಯಡಿ ತನಿಖೆ ನಡೆಸಿ ಭರತ್‌ ರೆಡ್ಡಿ ವಿರುದ್ಧ ಕ್ರಮ ಜರುಗಿಸಬೇಕು’ ಎಂಬುದಾಗಿ ಇ.ಡಿ ಅಧಿಕಾರಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ‘ಪಿಟಿಐ’ ಸುದ್ದಿಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.