ADVERTISEMENT

ಗುಡ್ಡದಹಳ್ಳಿಯಲ್ಲಿ ಅವಘಡ: ಅಕ್ರಮ ರಿಫಿಲ್ಲಿಂಗ್ ವೇಳೆ ಸ್ಫೋಟ, ಬಾಲಕ ಸಾವು

ಶೆಡ್ ಮಾಲೀಕ ರಮೇಶ್, ರಿಯಾಕತ್ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 21:22 IST
Last Updated 5 ಮಾರ್ಚ್ 2023, 21:22 IST
ಮಹೇಶ್
ಮಹೇಶ್   

ಬೆಂಗಳೂರು: ಶೆಡ್‌ವೊಂದರಲ್ಲಿ ಅಡುಗೆ ಅನಿಲ ಅಕ್ರಮ ರಿಫಿಲ್ಲಿಂಗ್ ವೇಳೆ ಸ್ಫೋಟ ಸಂಭವಿಸಿದ್ದು, ರಸ್ತೆಯಲ್ಲಿ ಆಟವಾಡುತ್ತಿದ್ದ 11 ವರ್ಷದ ಬಾಲಕ ಮಹೇಶ್ ಎಂಬಾತ ಮೃತಪಟ್ಟಿದ್ದಾನೆ.

‘ಮೃತ ಮಹೇಶ್, ಯಾದಗಿರಿ ಜಿಲ್ಲೆಯ ರಾಮಸಮುದ್ರದ ಮಲ್ಲಪ್ಪ ಹಾಗೂ ಸರಸ್ವತಿ ದಂಪತಿಯ ಮಗ. ಕೆಲಸ ಹುಡುಕಿಕೊಂಡು ಕೆಲ ವರ್ಷಗಳ ಹಿಂದೆಯೇ ದಂಪತಿ ಬೆಂಗಳೂರಿಗೆ ಬಂದಿದ್ದರು. ಗುಡ್ಡದಹಳ್ಳಿಯಲ್ಲಿ ವಾಸವಿದ್ದರು. ಬಾಲಕ ಮಹೇಶ್, ಚೋಳನಾಯಕನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ’ ಎಂದು ಹೆಬ್ಬಾಳ ಪೊಲೀಸರು ಹೇಳಿದರು.

‘ಗುಡ್ಡದಹಳ್ಳಿಯಲ್ಲಿರುವ ರಮೇಶ್ ಎಂಬುವರಿಗೆ ಸೇರಿದ್ದ ಶೆಡ್‌ ಬಾಡಿಗೆ ಪಡೆದಿದ್ದ ರಿಯಾಕತ್ ಎಂಬಾತ, ಅಕ್ರಮವಾಗಿ ಅಡುಗೆ ಅನಿಲ ರಿಫಿಲ್ಲಿಂಗ್ ಮಾಡುತ್ತಿದ್ದ. ಶೆಡ್‌ ಪಕ್ಕದ ಮನೆಯಲ್ಲಿ ಪೋಷಕರ ಜೊತೆ ಮಹೇಶ್ ವಾಸವಿದ್ದ’ ಎಂದು ತಿಳಿಸಿದರು.

ADVERTISEMENT

‘ಭಾನುವಾರ ಬೆಳಿಗ್ಗೆ ಮನೆ ಎದುರು ಮಹೇಶ್ ಆಟವಾಡುತ್ತಿದ್ದ. ಆಗಾಗ, ಮನೆ ಪಕ್ಕದ ಶೆಡ್‌ ಎದುರಿನ ರಸ್ತೆಗೂ ಹೋಗಿ ಬರುತ್ತಿದ್ದ. ಬೆಳಿಗ್ಗೆ ಶೆಡ್‌ಗೆ ಬಂದಿದ್ದ ರಿಯಾಕತ್, ದೊಡ್ಡ ಸಿಲಿಂಡರ್‌ನಿಂದ ಸಣ್ಣ ಸಿಲಿಂಡರ್‌ಗೆ ಅಕ್ರಮವಾಗಿ ಅಡುಗೆ ಅನಿಲ ರಿಫಿಲ್ಲಿಂಗ್ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿತ್ತು’ ಎಂದು ಹೇಳಿದರು.

‘ಸ್ಫೋಟದ ರಭಸಕ್ಕೆ ಹಾರಿದ್ದ ಸಿಲಿಂಡರ್, ಮಹೇಶ್‌ಗೆ ತಾಗಿತ್ತು. ಅದರ ಜೊತೆ ಬೆಂಕಿಯೂ ಹೊತ್ತಿಕೊಂಡಿತ್ತು. ಇದರಿಂದಾಗಿ ತೀವ್ರ ಗಾಯಗೊಂಡು ಬಾಲಕ ಮೃತಪಟ್ಟಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ಆರೋಪಿ ಪರಾರಿ: ‘ಸ್ಫೋಟದ ಸಂದರ್ಭದಲ್ಲಿ ಶೆಡ್‌ನಲ್ಲಿದ್ದವರಿಗೆ ಯಾವುದೇ ತೊಂದರೆ ಆಗಿಲ್ಲ. ಅವಘಡದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಶೆಡ್ ಮಾಲೀಕ ರಮೇಶ್ ಹಾಗೂ ರಿಯಾಕತ್ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅಕ್ರಮ ರಿಫಿಲ್ಲಿಂಗ್‌ನಿಂದ ಸ್ಫೋಟ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಸಿಲಿಂಡರ್ ಹಾರಿಬಿದ್ದಿದ್ದು ಹೇಗೆ? ಹಾಗೂ ಬೆಂಕಿ ಹೊತ್ತಿಕೊಂಡಿದ್ದು ಹೇಗೆ? ಎಂಬುದು ತನಿಖೆಯಿಂದ ತಿಳಿಯಬೇಕಿದೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರೂ ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ’ ಎಂದು ತಿಳಿಸಿದರು.

ಪೊಲೀಸರು ವಿಫಲ: ನಾಗರಿಕರ ದೂರು

‘ಜನವಸತಿ ಪ್ರದೇಶದಲ್ಲಿಯೇ ಕೆಲವರು ಅಕ್ರಮವಾಗಿ ರಿಫಿಲ್ಲಿಂಗ್ ಮಾಡುತ್ತಿದ್ದಾರೆ. ಇದನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ’ ಎಂದು ಗುಡ್ಡದಹಳ್ಳಿ ನಿವಾಸಿಗಳು ದೂರಿದರು.

‘ಅಕ್ರಮ ರಿಫಿಲ್ಲಿಂಗ್ ದಂಧೆಯಿಂದಲೇ ಇಂದು ಮಹೇಶ್ ಮೃತಪಟ್ಟಿದ್ದಾನೆ. ತಪ್ಪಿತಸ್ಥರನ್ನು ಬಂಧಿಸಿ, ಕಠಿಣ ಕ್ರಮ ಕೈಗೊಳ್ಳಬೇಕು. ದಂಧೆ ನಡೆಸುತ್ತಿರುವವರನ್ನು ಹಿಡಿದು, ಜೈಲಿಗಟ್ಟಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.