ADVERTISEMENT

ಉಪನಗರ ರೈಲು: ಗುತ್ತಿಗೆಯಿಂದ ಹಿಂದೆ ಸರಿದ ಎಲ್‌ ಆ್ಯಂಡ್‌ ಟಿ

ಇತ್ತೀಚೆಗೆ ಕಾಮಗಾರಿ ಸ್ಥಗಿತಗೊಳಿಸಿದ್ದ ಗುತ್ತಿಗೆದಾರರು * ₹ 650 ಕೋಟಿ ಪರಿಹಾರಕ್ಕೆ ಮೊರೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 15:52 IST
Last Updated 1 ಆಗಸ್ಟ್ 2025, 15:52 IST
<div class="paragraphs"><p>ಉಪನಗರ ರೈಲು:</p></div>

ಉಪನಗರ ರೈಲು:

   

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಕಾಮಗಾರಿಯನ್ನು ಇತ್ತೀಚೆಗೆ ಸ್ಥಗಿತಗೊಳಿಸಿದ್ದ ಎಲ್‌ ಆ್ಯಂಡ್‌ ಟಿ ಕಂಪನಿಯು ಇದೀಗ ಗುತ್ತಿಗೆಯಿಂದಲೇ ಹಿಂದಕ್ಕೆ ಸರಿದಿದೆ. ಇಲ್ಲಿಯವರೆಗೆ ಆಗಿರುವ ನಷ್ಟವನ್ನು ಕೆ–ರೈಡ್‌ ನೀಡಬೇಕು ಎಂದು ವಾಣಿಜ್ಯ ನ್ಯಾಯಾಲಯದ ಮೆಟ್ಟಿಲು ಹತ್ತಿದೆ.

 2022ರಿಂದ ಇಲ್ಲಿಯವರೆಗೆ ಭರವಸೆಗಳು ಮಾತ್ರ ಸಿಕ್ಕಿವೆ. ಜಮೀನು ಹಸ್ತಾಂತರ ಪ್ರಕ್ರಿಯೆಯನ್ನು ಕೂಡ ಸಂಪೂರ್ಣವಾಗಿ ಮಾಡಿಲ್ಲ. ಇದರಿಂದ ಕಾರಿಡಾರ್‌ 2ಕ್ಕೆ ಸಂಬಂಧಿಸಿದಂತೆ ₹ 500 ಕೋಟಿ ನಷ್ಟ ಉಂಟಾಗಿದೆ. ಕಾರಿಡಾರ್‌–4ಕ್ಕೆ ಸಂಬಂಧಿಸಿದಂತೆ ₹ 150 ಕೋಟಿ ನಷ್ಟವಾಗಿದೆ ಎಂದು ಎಲ್‌ ಆ್ಯಂಡ್‌ ಟಿ ತಿಳಿಸಿದೆ.

ADVERTISEMENT

ಕಾರಿಡಾರ್‌–2 (ಚಿಕ್ಕಬಾಣಾವರ–ಬೈಯಪ್ಪನಹಳ್ಳಿ) ಕಾಮಗಾರಿ 2022ರ ಡಿಸೆಂಬರ್‌ನಲ್ಲಿ ಆರಂಭವಾಗಿತ್ತು. ಕಾರಿಡಾರ್‌–4ರ (ಕೆಂಗೇರಿ–ವೈಟ್‌ಫೀಲ್ಡ್‌) ಟೆಂಡರ್‌ ಪ್ರಕ್ರಿಯೆ 2023ರ ಡಿಸೆಂಬರ್‌ನಲ್ಲಿ ನಡೆಯಿತು. ಎರಡೂ ಕಾರಿಡಾರ್‌ಗಳನ್ನು ನಿರ್ಮಿಸಲು ಎಲ್‌ ಆ್ಯಂಡ್‌ ಟಿ ಕಂಪನಿ ಗುತ್ತಿಗೆ ಪಡೆದಿತ್ತು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸರಿಯಾದ ಬೆಂಬಲ ಸಿಗದೇ ಕಾಮಗಾರಿ ವಿಪರೀತ ನಿಧಾನವಾಗಿ ಸಾಗುತ್ತಿತ್ತು. ಮೂರು ತಿಂಗಳ ಹಿಂದೆ ಕಾಮಗಾರಿಯನ್ನು ಎಲ್‌ ಆ್ಯಂಡ್‌ ಟಿ ಸ್ಥಗಿತಗೊಳಿಸಿತ್ತು. ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಮತ್ತು ಯಂತ್ರೋಪಕರಣಗಳನ್ನು ಅಲ್ಲಿಂದ ಸ್ಥಳಾಂತರ ಮಾಡಿತ್ತು. ನಷ್ಟ ಪರಿಹಾರ ನೀಡಲು ಕ್ರಮ ಕೈಗೊಳ್ಳಿ, ಒಪ್ಪಂದವನ್ನು ರದ್ದುಗೊಳಿಸಿ ಎಂದು ಎಲ್‌ ಆ್ಯಂಡ್ ಟಿ ಅಧಿಕಾರಿಗಳು ಆಗಲೇ ಕೆ–ರೈಡ್‌ಗೆ ಪತ್ರ ಬರೆದಿದ್ದರು.

ಹೊಡೆತ: ‘ಎಲ್‌ ಆ್ಯಂಡ್ ಟಿ ಕಂಪನಿಯು ಕಾಮಗಾರಿಯಿಂದ ಹಿಂದಕ್ಕೆ ಸರಿದಿರುವ ಸಂಗತಿಯು ಬೆಂಗಳೂರಿನ ಜನರಿಗೆ ನಿರಾಸೆಯನ್ನು ಉಂಟು ಮಾಡಿದೆ. ಕೋಲ್ಕತ್ತ, ಮುಂಬೈ ಸಹಿತ ಹಲವು ನಗರಗಳಲ್ಲಿ ಉಪನಗರ ರೈಲು ಯೋಜನೆಯನ್ನು ರೈಲ್ವೆಯೇ ನಡೆಸುತ್ತಿದೆ. ಆದರೆ, ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆ ಶುರುವಾಗುವ ಹೊತ್ತಿಗೆ ರಾಜ್ಯ ಸರ್ಕಾರವೂ ಒಳಗೊಳ್ಳಬೇಕು ಎಂದು ನಿಯಮ ಮಾಡಲಾಗಿತ್ತು. ಈ ಯೋಜನೆ ಜಾರಿ ಮಾಡಲು ಕೆ–ರೈಡ್‌ ಎಂಬ ಹೊಸ ಸಂಸ್ಥೆಯನ್ನು ಆರಂಭಿಸಲಾಗಿತ್ತು. ಕೇಂದ್ರ, ರಾಜ್ಯ ಸರ್ಕಾರಗಳ ಹೊಯ್ದಾಟದ ನಡುವೆ ಸಿಲುಕಿ ಯೋಜನೆ ಜಾರಿಯಾಗದಂತಾಗಿದೆ’ ಎಂದು ರೈಲ್ವೆ ಹೋರಾಟಗಾರ ಕೆ.ಎನ್‌. ಕೃಷ್ಣಪ್ರಸಾದ್‌ ಬೇಸರ ವ್ಯಕ್ತಪಡಿಸಿದರು.

‘ಬೆಂಗಳೂರಿನ ಶಾಸಕರು, ಸಂಸದರು ಮಾತ್ರವಲ್ಲ ಸಚಿವರು, ಮುಖ್ಯಮಂತ್ರಿ, ರೈಲ್ವೆ ಸಚಿವರೂ ಇದಕ್ಕೆ ಹೊಣೆ. ಯಾರಿಗೂ ಬಿಎಸ್‌ಆರ್‌ಪಿ ಬಗ್ಗೆ ಕಾಳಜಿ ಇರಲಿಲ್ಲ’ ಎಂದು ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ ಸಂಸ್ಥಾಪಕ ರಾಜಕುಮಾರ್‌ ದುಗರ್‌ ಆರೋಪಿಸಿದರು.

‘ಒಪ್ಪಂದ ಯಾಕೆ ರದ್ದಾಯಿತು ಎಂಬುದನ್ನು ತಿಳಿದು ಸಮಸ್ಯೆ ಬಗೆಹರಿಸಬೇಕು. ಎಲ್ ಆ್ಯಂಡ್‌ ಟಿಯವರೇ ಕಾಮಗಾರಿ ಮುಂದುವರಿಸಲು ಇಲ್ಲವೇ ಟೆಂಡರ್‌ ಕರೆದು ಕೂಡಲೇ ಬೇರೆಯವರಿಗೆ ನೀಡಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು. ನಗರಕ್ಕೆ ಬಹಳ ಅಗತ್ಯವಾದ ಯೋಜನೆಯ ಸ್ಥಿತಿ ಈ ರೀತಿ ಆಗಬಾರದು’ ಎಂದು ಅವರು ಆಗ್ರಹಿಸಿದರು.

ಪ್ರತಿಕ್ರಿಯೆ ನೀಡದ ಅಧಿಕಾರಿಗಳು

‘ನಮಗೆ ಪ್ರತಿಕ್ರಿಯಿಸುವ ಅಧಿಕಾರ ಇಲ್ಲ. ವ್ಯವಸ್ಥಾಪಕ ನಿರ್ದೇಶಕರಿಂದಲೇ ಮಾಹಿತಿ ಪಡೆಯಿರಿ’ ಎಂದು ಕೆ–ರೈಡ್‌ನ ಅಧಿಕಾರಿಗಳು ಪ್ರತಿಕ್ರಿಯಿಸಿದರು. ವ್ಯವಸ್ಥಾಪಕ ನಿರ್ದೇಶಕರಾಗಿರುವ ಎನ್‌. ಮಂಜುಳಾ ಅವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.