ADVERTISEMENT

ಮಲೆನಾಡಿಗರ ನಿದ್ದೆಗೆಡಿಸಿದ ಸರ್ಕಾರಗಳ ನಡೆ: ಮಲೆನಾಡು, ಕರಾವಳಿ ಜನಪರ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 14:52 IST
Last Updated 12 ಆಗಸ್ಟ್ 2024, 14:52 IST
<div class="paragraphs"><p>ವಯನಾಡ್ ದುರಂತ</p></div>

ವಯನಾಡ್ ದುರಂತ

   

– ‍ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.

ಬೆಂಗಳೂರು: ಮಳೆಯಿಂದ ಆದ ಅನಾಹುತಕ್ಕೆ ಮಲೆನಾಡಿಗರೇ ಕಾರಣ ಎಂಬ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಲುವು ಮಲೆನಾಡಿಗರು ಮತ್ತು ಕರಾವಳಿಯ ಕೃಷಿಕರ ನಿದ್ದೆಗೆಡಿಸಿದೆ ಎಂದು ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟದ ಸಭೆಯಲ್ಲಿ ಅವರು ಮಾತನಾಡಿ, ‘ಮಾರಕ ಅರಣ್ಯ ಕಾಯ್ದೆಯಿಂದ ಮಲೆನಾಡು ಹಾಗೂ ಕರಾವಳಿಯ ಕೃಷಿಕರು ಭಯದ ವಾತಾವರಣದಲ್ಲಿ ಬದುಕು ನಡೆಸುತ್ತಿದ್ದರು. ಅರಣ್ಯವಾಸಿಗಳ ಬಗ್ಗೆ ಸದನದಲ್ಲಿ ಇತ್ತೀಚೆಗೆ ತೆಗೆದುಕೊಂಡ ನಿರ್ಣಯದಿಂದ ನಿಟ್ಟುಸಿರು ಬಿಡುವಂತಾಗಿತ್ತು. ಈಗ ಅತಿ ಮಳೆಯಿಂದ ಉಂಟಾಗಿರುವ ಅನಾಹುತಕ್ಕೆ ಮಲೆನಾಡಿಗರನ್ನು ರಾಜ್ಯ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳು ಹೊಣೆ ಮಾಡುತ್ತಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರವು ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಅರಣ್ಯ ಪ್ರದೇಶ ಎಂದು ಘೋಷಿಸಲು ಕರಡು ಪ್ರತಿ ಸಿದ್ಧಪಡಿಸಿರುವುದು ಮಲೆನಾಡಿಗರನ್ನು ಆತಂಕಕ್ಕೆ ಸಿಲುಕಿಸಿದೆ’ ಎಂದರು.

ಮಲೆನಾಡಿಗರು ಬದುಕಿಗಾಗಿ ಮಾಡಿಕೊಂಡ ಒತ್ತುವರಿಯಿಂದ, ಕೃಷಿಯಿಂದ ಭೂಕುಸಿತ ಉಂಟಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವೈಜ್ಞಾನಿಕವಾಗಿ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿ, ಅಣೆಕಟ್ಟು, ಸೇತುವೆಗಳ ನಿರ್ಮಾಣ, ಪೈಪ್‌ ಅಳವಡಿಕೆಗಳಿಂದ ಅತಿ ಹೆಚ್ಚು ಭೂಕುಸಿತ ಸಂಭವಿಸಿದೆ ಎಂದು ವಿವರಿಸಿದರು.

ಕರಾವಳಿ ಮತ್ತು ಮಲೆನಾಡಿನ ಶಾಸಕರು, ಸಂಸದರು ಈ ಬಗ್ಗೆ ಧ್ವನಿ ಎತ್ತಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರು ಮಲೆನಾಡಿನಲ್ಲಿ ಎರಡು ದಿನ ವಾಸ್ತವ್ಯ ಹೂಡಿ ಸ್ಥಳೀಯರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಕೃಷಿಕರಿಗೆ ಪ್ರೋತ್ಸಾಹ ನೀಡಬೇಕು. ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಮೂಲ ಅರಣ್ಯ ಕಾಯ್ದೆಯನ್ನು ತಿದ್ದುಪಡಿ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಡ ತರುವ ವಿಚಾರದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪದಾಧಿಕಾರಿಗಳಾದ ಕಣದಮನೆ ಜಗದೀಶ್, ತ್ರಿಮೂರ್ತಿ, ಕಾಳ್ಯ ಸಂತೋಷ್, ಮಂಜುನಾಥ್ ಮೂಡ್ಲು, ಗುತ್ತುಳಿಕೆ ಕೇಶವ, ರಾಜ್‍ಕುಮಾರ್ ಹೆಗ್ಡೆ, ಅವಿನಾಶ್, ಪ್ರಶಾಂತ್ ಬಂಡ್ಲಪುರ, ಆದೇಶ, ಚೇತನ್ ಹಿಂಬ್ರವಳ್ಳಿ, ಶುಭಕೃತ್ ಹೆಗ್ಡೆ, ಶಶಿಕ್ ಹೊಸಕೊಪ್ಪ, ಸುಬ್ರಮಣ್ಯ ಹರವರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.