ADVERTISEMENT

ಬಿಬಿಎಂಪಿ ನಿರ್ಲಕ್ಷ್ಯ: ಮೋರಿಯಲ್ಲಿ ಬಿದ್ದು ಸಾವು

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:39 IST
Last Updated 6 ಜುಲೈ 2018, 19:39 IST

ಬೆಂಗಳೂರು: ಹೆಣ್ಣೂರು ಬಂಡೆ ಸಮೀಪದ ಮೇಘನಾಪಾಳ್ಯದ ಮೋರಿಯಲ್ಲಿ ಬಿದ್ದು ಬಿ.ಶೇಖರ್ (45) ಎಂಬುವರು ಮೃತಪಟ್ಟಿದ್ದಾರೆ. 15 ದಿನಗಳ ಬಳಿಕ ಶವ ಪತ್ತೆಯಾಗಿದ್ದು, ಅವರ ಸಾವಿಗೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣವೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಕಸ್ತೂರಿನಗರದ ನಿವಾಸಿ ಶೇಖರ್‌, ಸಹೋದರ ಭಾಸ್ಕರ್ ಜತೆಯಲ್ಲಿ ವಾಸವಿದ್ದರು. ಕೆಲ ವರ್ಷಗಳ ಹಿಂದಷ್ಟೇ ಅವರ ಪತ್ನಿ ತೀರಿಕೊಂಡಿದ್ದರಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಪೊಲೀಸರು ತಿಳಿಸಿದರು.

ಮೋರಿಯಿಂದ ಜುಲೈ 3ರಂದು ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡ ಸ್ಥಳೀಯರು, ಮೋರಿಯಲ್ಲಿ ಇಳಿದು ನೋಡಿದಾಗ ಶವ ಕಂಡಿತು. ಬಳಿಕ, ಠಾಣೆಗೆ ಮಾಹಿತಿ ನೀಡಿದ್ದರು. ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಶವ ಹಸ್ತಾಂತರಿಸಲಾಗಿದೆ. ಘಟನೆ ಸಂಬಂಧ ಸಹೋದರ ದೂರು ನೀಡಿದ್ದಾರೆ ಎಂದು ಪೊಲೀಸರು ವಿವರಿಸಿದರು.

ADVERTISEMENT

‘ಮೇಘನಾಪಾಳ್ಯದ ತಿರುವಿನಲ್ಲಿ 2 ಅಡಿಯ ಮೋರಿ ಇದೆ. ಅದರ ಮೇಲೆ ಸ್ಲ್ಯಾಬ್‌ ಹಾಕಲಾಗಿದೆ. ವಾಹನಗಳ ಓಡಾಟ ಹೆಚ್ಚಿರುವುದರಿಂದ, ಅವುಗಳ ಒತ್ತಡದಿಂದ ಸ್ಲ್ಯಾಬ್‌ ಕಿತ್ತು ಹೋಗಿದೆ. ಅದೇ ಸ್ಥಳದಲ್ಲೇ ಆಯತಪ್ಪಿ ಬಿದ್ದಿದ್ದ ಶೇಖರ್, ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಅವರು ಮೋರಿಯಲ್ಲಿ ಬೀಳುತ್ತಿರುವ ದೃಶ್ಯ, ಘಟನಾ ಸ್ಥಳದ ಸಮೀಪದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ನಿರಂತರವಾಗಿ ಮಳೆ ಸುರಿದಿದ್ದರಿಂದ, ಮೋರಿಯಲ್ಲಿ ಹೆಚ್ಚು ನೀರು ಹರಿದಿತ್ತು. ಅದೇ ಕಾರಣಕ್ಕೆ ದುರ್ವಾಸನೆ ಬಂದಿರಲಿಲ್ಲ. ನೀರು ಹರಿಯುವಿಕೆ ಕಡಿಮೆ ಆಗಿದ್ದರಿಂದ ಜುಲೈ 3ರಂದು ವಾಸನೆ ಬರಲಾರಂಭಿಸಿತ್ತು’ ಎಂದರು.

ಮೋರಿ ನಿರ್ವಹಣೆ ಮಾಡದ ಬಿಬಿಎಂಪಿ: ‘ಮೋರಿ ಮೇಲಿನ ಸ್ಲ್ಯಾಬ್‌ ಕಿತ್ತುಹೋಗಿ ತಿಂಗಳಾದರೂ ಬಿಬಿಎಂಪಿ ಅಧಿಕಾರಿಗಳು, ಹೊಸದಾಗಿಸ್ಲ್ಯಾಬ್‌ ಹಾಕಲು ಯಾವುದೇ ಕ್ರಮ ಕೈಗೊಂಡಿಲ್ಲ. ಅದೇ ಕಾರಣಕ್ಕೆ ಈ ಅವಘಡ ಸಂಭವಿಸಿದೆ’ ಎಂದು ಸ್ಥಳೀಯರು ದೂರಿದರು.

‘ಮೋರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಮೋರಿ ಸ್ವಚ್ಛಗೊಳಿಸಲೆಂದು ಬಿಬಿಎಂಪಿ ಸಿಬ್ಬಂದಿಯೇ ಕೆಲವೆಡೆ ಸ್ಲ್ಯಾಬ್‌ ಕಿತ್ತು ಹಾಕಿದ್ದಾರೆ. ಮೋರಿ ಮೇಲೆ ಮಕ್ಕಳು ಹಾಗೂ ವೃದ್ಧರು ಹೆಚ್ಚು ಓಡಾಡುತ್ತಾರೆ. ಅವರ ಜೀವಕ್ಕೆ ಕುತ್ತು ಬರುವ ಮುನ್ನವೇ ಬಿಬಿಎಂಪಿ ಎಚ್ಚೆತ್ತುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಬಿಬಿಎಂಪಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟೇಶಪ್ಪ, ‘ಮೇಘನಾಪಾಳ್ಯದಲ್ಲಿ ವಾಹನಗಳ ಓಡಾಟ ಹೆಚ್ಚಿದೆ. ಕೆಲ ವಾಹನಗಳು, ಮೋರಿಯ ಮೇಲೆಯೇ ಸಂಚರಿಸುತ್ತವೆ. ಅದೇ ಕಾರಣಕ್ಕೆ ಸ್ಲ್ಯಾಬ್‌ ಕಿತ್ತುಹೋಗಿದೆ’ ಎಂದು ಹೇಳಿದರು.

‘ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗಿದೆ. ಕುಡಿದ ಅಮಲಿನಲ್ಲಿದ್ದ ಶೇಖರ್, ಆಯತಪ್ಪಿ ಬಿದ್ದಿರುವುದಾಗಿ ಸ್ಥಳೀಯರೇ ಹೇಳಿದ್ದಾರೆ’ ಎಂದು ತಿಳಿಸಿದರು.

ನಾಪತ್ತೆ ದೂರು ನೀಡಿದ್ದ ಸಹೋದರ: ಜೂನ್ 21ರಂದು ಮನೆಯಿಂದ ಹೊರಹೋಗಿದ್ದ ಶೇಖರ್ ವಾಪಸ್‌ ಬಂದಿರಲಿಲ್ಲ. ಗಾಬರಿಗೊಂಡಿದ್ದ ಸಹೋದರ ಭಾಸ್ಕರ್, ನಾಪತ್ತೆ ಬಗ್ಗೆ ಹೆಣ್ಣೂರು ಠಾಣೆಗೆ ದೂರು ನೀಡಿದ್ದರು.

ಘಟನೆ ಬಗ್ಗೆ ‘ಸುದ್ದಿಗಾರ’ರೊಂದಿಗೆ ಮಾತನಾಡಿದ ಭಾಸ್ಕರ್, ‘ಸಹೋದರ ಮೋರಿಯಲ್ಲಿ ಬಿದ್ದಿದ್ದನ್ನು ಪೊಲೀಸರೇ ತಿಳಿಸಿದ್ದರು. ಸ್ಥಳಕ್ಕೆ ಹೋಗಿ ಶವ ಗುರುತಿಸಿದೆವು. ಘಟನೆ ಸಂಬಂಧ ಯಾರನ್ನೂ ದೂರಲು ಇಷ್ಟಪಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.