ADVERTISEMENT

ಅವಧಿಗೂ ಮುನ್ನ ಮಾರುಕಟ್ಟೆಗೆ ಮಾವು

ರೈತರ ಮೊಗದಲ್ಲಿ ಸಂತಸ * ಹವಾಮಾನ ವೈಪರೀತ್ಯ ಕಾಡದಿದ್ದರೆ ಬರಲಿದೆ ಭಾರಿ ಫಸಲು

ಕಲಾವತಿ ಬೈಚಬಾಳ
Published 16 ಫೆಬ್ರುವರಿ 2019, 20:09 IST
Last Updated 16 ಫೆಬ್ರುವರಿ 2019, 20:09 IST
ಮಾವು
ಮಾವು   

ಬೆಂಗಳೂರು:ಮಾವಿನ ಮರಗಳು ಅವಧಿಗೆ ಮುನ್ನ ಹೂ ಬಿಟ್ಟಿದ್ದರಿಂದ ಈಗಾಗಲೇ ಮಾರುಕಟ್ಟೆಗೆ ಮಾವು ಬಂದಿದ್ದು, ರೈತರಿಗೆ ಉತ್ತಮ ಲಾಭ ತಂದುಕೊಡುವ ಭರವಸೆ ಮೂಡಿಸಿದೆ.

ಮಾರ್ಚ್‌ ವೇಳೆಗೆ ಬರಬೇಕಿದ್ದ ಮಾವು,ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ಫೆಬ್ರುವರಿ ಆರಂಭದಲ್ಲಿಯೇ ಮಾರುಕಟ್ಟೆ ಪ್ರವೇಶಿಸಿದೆ. ಕಳೆದ ಬಾರಿ ಮಾವಿನ ಮರಗಳು ತಡವಾಗಿ ಹೂಬಿಟ್ಟಿದ್ದರಿಂದ ಮೇ ತಿಂಗಳಿನಲ್ಲಿ ಬರಬೇಕಿದ್ದ ಹಣ್ಣು ಜೂನ್‌ ವೇಳೆಗೆ ಕೈ ಸೇರಿದ್ದವು.

ರಾಜ್ಯದಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ಪ್ರದೇಶಗಳಲ್ಲಿ ಪೈಕಿ ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಧಾರವಾಡ ಜಿಲ್ಲೆ ಅಗ್ರಸ್ಥಾನ ಪಡೆದಿವೆ.

ADVERTISEMENT

‘ಅವಧಿಗೂ ಮುನ್ನವೇ ಮಾವು ಬಂದಿದ್ದರಿಂದ ರೈತರಿಗೆ ಉತ್ತಮ ಲಾಭ ದೊರೆಯಲಿದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ಹಣ್ಣಿಗೆ ಕೆ.ಜಿಗೆ ಸುಮಾರು ₹100 ರಿಂದ ₹150ರವರೆಗೆ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ₹90 ರಿಂದ ₹100ರ ತನಕ ದರ ಸಿಗುತ್ತಿದೆ. ಸೀಜನ್‌ ಉದ್ದಕ್ಕೂ ಹಣ್ಣಿನ ಗುಣಮಟ್ಟ
ಕಾಯ್ದುಕೊಂಡು ಹೋಗುವುದು ಸವಾಲಿನ ಕೆಲಸ’ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಎಡಿಎಚ್‌ಓ ಲಲಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಸದ್ಯ, ಸೇಂದೂರಾ ತಳಿಯ ಮಾವು ಮಾರುಕಟ್ಟೆ ಪ್ರವೇಶಿಸಿದ್ದು, ಮಾರ್ಚ್‌ ಮೊದಲ ವಾರದಲ್ಲಿ ರಸಪೂರಿ, ಆಪೂಸುಹಾಗೂ ಬಾದಾಮಿ ತಳಿಯ ಹಣ್ಣುಗಳು ಬರಲಿವೆ. ಬೇರೆ ಬೇರೆ ತಳಿಯ ಮಾವು ಏಕಕಾಲದಲ್ಲಿ ಹೂ ಬಿಡುವುದಿಲ್ಲ. ಹಾಗಾಗಿ, ಹಂತಹಂತವಾಗಿ ಒಂದೊಂದು ಬಗೆಯ ಮಾವು ಗ್ರಾಹಕರ ಕೈ ಸೇರಲಿವೆ.

ಹವಾಮಾನದ ಮೇಲೆ ನಿರ್ಧಾರ: ‘ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದ ವಿವಿಧೆಡೆ ಅಕಾಲಿಕವಾಗಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದ್ದು, ಕೆಲವೆಡೆ ಮಾವಿನ ಮರಗಳ ಹೂವು ಉದುರಿದೆ. ಮಾವಿನ ಮರಗಳು ಹೂ ಬಿಟ್ಟಿದ್ದರೂ, ಹೂ ಕಾಯಿ ಆಗುವವರೆಗೆ ಹವಾಮಾನ ಏರುಪೇರಾಗದೇ ಇದ್ದರೆ ಮಾತ್ರ ರೈತರಿಗೆ ಲಾಭ. ಹವಾಮಾನ ಪೂರಕವಾಗಿದ್ದರೆ ಎಕರೆಗೆ ಅಂದಾಜು 10ರಿಂದ 25 ಟನ್‌ ಇಳುವರಿ ನಿರೀಕ್ಷಿಸಬಹುದು. ಇಬ್ಬನಿ ಸುರಿದು ಚಳಿ ಹೆಚ್ಚಾಗಿ, ನಡುವೆ ಮಳೆ ಸುರಿದರೆ ಫಸಲು ಕಡಿಮೆಯಾಗುತ್ತದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು.

‘ಅಕ್ಟೋಬರ್‌ ಮಾವು ಹೂವು ಬಿಟ್ಟರೆ ಏಪ್ರಿಲ್‌ ಹೊತ್ತಿಗೆ ಕೊಯ್ಲಿಗೆ ಬರುತ್ತದೆ. ಆಗ ಕೆಜಿ ಮಾವಿಗೆ ₹ 150 ಬೆಲೆ ಸಿಗುತ್ತದೆ. ವಿದೇಶದ ಗ್ರಾಹಕರು ಹೆಚ್ಚು ಬೇಡಿಕೆ ಸಲ್ಲಿಸುತ್ತಾರೆ. ಮೇ ನಂತರ ಗ್ರಾಹಕರು ಹೆಚ್ಚು ಬೇಡಿಕೆ ಸಲ್ಲಿಸುತ್ತಾರೆ. ಮೇ ನಂತರ ಪಾಕಿಸ್ತಾನ, ಪಶ್ಚಿಮ ಬಂಗಾಳದಲ್ಲೂ ಮಾವು ಬೆಳೆ ಹೆಚ್ಚಾಗುತ್ತದೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರದ ಮಾವು ಬೆಳೆಗಾರ ವಿಜಯರಾಮರೆಡ್ಡಿ.

ಈ ಬಾರಿ ಉತ್ತಮ ಇಳುವರಿಯಾದರೆ ಗುಣಮಟ್ಟದ ಹಣ್ಣುಗಳನ್ನು ವಿದೇಶಗಳಿಗೆ ರಫ್ತು ಮಾಡಬಹುದು. ಕಳೆದ ಬಾರಿ ಅಕಾಲಿಕ ಮಳೆ ಹಾಗೂ ನಿಫಾ ವೈರಸ್‌ನ ಹಾವಳಿಯಿಂದಾಗಿ ರಫ್ತು ಪ್ರಮಾಣ ಕುಸಿತ ಕಂಡಿತ್ತು.

22 ದೇಶಗಳಿಗೆ ರಾಜ್ಯದ ಮಾವು ರಫ್ತಾಗುತ್ತದೆ. ಅತಿ ಹೆಚ್ಚು ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಕತಾರ್‌ (ಪ್ರಥಮ), ಅಮೆರಿಕ (ದ್ವಿತೀಯ), ಸೌದಿ ಅರೇಬಿಯಾ (ತೃತೀಯ) ಪ್ರಮುಖವಾಗಿವೆ. ಕಡಿಮೆ ಆಮದು ಮಾಡಿಕೊಳ್ಳುವ ದೇಶ ಆಸ್ಟ್ರಿಯಾ.

ಅಂಕಿಅಂಶ

* ಮಾವು ಬೆಳೆಯುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ 3ನೇ ಸ್ಥಾನ(2015-16ರ ತೋಟಗಾರಿಕೆ ಇಲಾಖೆ ಸಮೀಕ್ಷಾ ವರದಿ)


1 ಲಕ್ಷ ಹೆಕ್ಟೇರ್‌

ರಾಜ್ಯದಲ್ಲಿ ಮಾವು ಬೆಳೆಯುವ ಒಟ್ಟು ಪ್ರದೇಶ


50,000ಕ್ಕೂ ಅಧಿಕ

ರಾಜ್ಯದ ಮಾವು ಬೆಳೆಗಾರರ ಸಂಖ್ಯೆ


ಶೇಕಡ 80

ಹೂ ಬಿಟ್ಟ ಮರಗಳು


8 ರಿಂದ 10 ಲಕ್ಷ ಟನ್‌

ಇಳುವರಿ ನಿರೀಕ್ಷೆ


* ಎಲ್ಲೆಲ್ಲಿ ಯಾವ ತಳಿಯ ಮಾವು

ಕೋಲಾರ– ಬಾದಾಮಿ (ಶೇ 40), ತೋತಾಪುರಿ (ಶೇ20),ಬೇನಿಷ್ (ಶೇ 10), ಮಲ್ಲಿಕಾ, ನೀಲಂ (ಶೇ 5),

ರಾಮನಗರ– ಬಾದಾಮಿ (ಶೇ 80), ಸೇಂದೂರಾ (ಶೇ 10), ರಸಪೂರಿ, ಮಲ್ಲಿಕಾ (ಶೇ 5)

ಹಾವೇರಿ, ಬೆಳಗಾವಿ, ಧಾರವಾಡ– ಬಾದಾಮಿ (ಶೇ 95), ಇತರೆ (ಶೇ 5)

ಮಾವಿಗೆ ಹೂಜಿ ನೊಣಗಳ ಬಾಧೆ

ಹವಾಮಾನ ವೈಪರೀತ್ಯದಿಂದ ಮಾವಿಗೆ ಸಣ್ಣ ಪ್ರಮಾಣದಲ್ಲಿ ಹೂಜಿ ನೊಣಗಳ ಬಾಧೆ ಹೆಚ್ಚಿ ಕಾಯಿಗಳು ಉದುರುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.

‘ಇದೀಗ, ಕೆಲವು ಮರಗಳು ಚೆನ್ನಾಗಿ ಹೂ ಬಿಟ್ಟಿವೆ. ಇನ್ನೂ ಕೆಲವು ಮರಗಳಲ್ಲಿ ಕಾಯಿ ಬಿಟ್ಟಿದ್ದು, ಹೂಜಿ ನೊಣಗಳ ಬಾಧೆ ಆರಂಭವಾಗಿದೆ. ಮೋಡ ಕವಿದ ವಾತಾವರಣದಿಂದಾಗಿ ಮಾವಿಗೆ ಈ ರೋಗ ತಗುಲಿದೆ. ಜೋರಾಗಿ ಮಳೆ ಸುರಿದರೆ ಇಳುವರಿ ಕುಂಠಿತಗೊಳ್ಳುವ ಸಾಧ್ಯತೆ ಇದೆ’ ಎಂದು ಹಾವೇರಿ ಮಾವು ಬೆಳೆಗಾರ ಪಂಪಾಪತಿ ಉಪಾಸ್ಯೆ ಆತಂಕ ವ್ಯಕ್ತಪಡಿಸಿದರು.

*ಸಣ್ಣ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಶೇ 0.3 ರಷ್ಟು ಮರಗಳಿಗೆ ಹಾನಿಯಾಗಿದೆ. ಹೂಜಿ ನೊಣ ಬಾಧೆ ತಡೆಯಲು ಕೀಟನಾಶಕ ಸಿಂಪಡಿಸಲು ರೈತರಿಗೆ ಸೂಚಿಸಲಾಗಿದೆ

- ಬಾಲಕೃಷ್ಣ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

*ರಫ್ತು ಪ್ರಮಾಣ ಹೆಚ್ಚಳದ ಬಗ್ಗೆ ಬೆಳೆಗಾರರಲ್ಲಿ ಉತ್ತೇಜನ, ಜಾಗೃತಿ ಮೂಡಿಸಲು ಕಳೆದ ವರ್ಷದಿಂದ ಕಲ್ಟರ್‌ ತರಬೇತಿ ಶಿಬಿರ ನಡೆಸಲಾಗುತ್ತಿದೆ

- ಲಲಿತಾ, ಎಡಿಎಚ್‌ಓ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.