ADVERTISEMENT

ಮಾವು, ಹಲಸು ಮೇಳ

​ಪ್ರಜಾವಾಣಿ ವಾರ್ತೆ
Published 29 ಮೇ 2019, 0:41 IST
Last Updated 29 ಮೇ 2019, 0:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ‘ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳ’ ಲಾಲ್‌ಬಾಗ್‌ನಲ್ಲಿ ಮೇ 30ರಿಂದ ಜೂನ್‌ 6ರವರೆಗೆ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಎಂ.ವಿ.ವೆಂಕಟೇಶ್‌ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇಳವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಆನ್‌ಲೈನ್‌ ಮಾವು ಖರೀದಿ ಪೋರ್ಟಲ್‌ ಹಾಗೂ ವಿಶೇಷ ಅಂಚೆ ಲಕೋಟೆಯನ್ನು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಬಿಡುಗಡೆ ಮಾಡಲಿದ್ದು, ಮಾವು ಮಳಿಗೆ ಹಾಗೂ ಕರ್‌ಸಿರಿ (karsiri) ಬ್ರ್ಯಾಂಡ್‌ನ್ನು ತೋಟಗಾರಿಕೆ ಸಚಿವ ಎಂ.ಸಿ.ಮನಗುಳಿ ಉದ್ಘಾಟಿಸಲಿದ್ದಾರೆ’ ಎಂದರು.

‘ನಗರದ ಗ್ರಾಹಕರಿಗೆ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಮಾವು ಕೈಸೇರಲಿದೆ. ಮೇಳಕ್ಕೆ ಬರಲು ಸಾಧ್ಯವಾಗದವರಿಗೆ ಅಂಚೆ ಮೂಲಕ ಮಾವು ಮನೆಬಾಗಿಲಿಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ’ ಎಂದರು.

ADVERTISEMENT

ಮೇಳದಲ್ಲಿ 112 ಮಾವು ಮಳಿಗೆಗಳು, 10 ಹಲಸಿನ ಮಳಿಗೆಗಳು, ಸಂಸ್ಕರಿತ ಪದಾರ್ಥಗಳಿಗಾಗಿ 9 ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ತಳಿಯ ಮಾವು ಹಾಗೂ 10ಕ್ಕೂ ಹೆಚ್ಚು ತಳಿಯ ಹಲಸು ಇರಲಿವೆ.

‘ರಾಜ್ಯದಲ್ಲಿ 1.8 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಸಲ 14 ಲಕ್ಷ ಟನ್‌ಗಳಷ್ಟು ಇಳುವರಿ ನಿರೀಕ್ಷೆ ಮಾಡಲಾಗಿತ್ತು. ಬರಗಾಲದ ಪರಿಸ್ಥಿತಿ ಇದ್ದ ಕಾರಣ 4 ಲಕ್ಷ ಟನ್‌ಗಳಷ್ಟು ಇಳುವರಿ ಕಡಿಮೆಯಾಗಿದೆ’ ಎಂದರು.

ಏನೇನಿದೆ?
* 112 ಮಾವು, 10 ಹಲಸಿನಮಳಿಗೆ
* ಆನ್‌ಲೈನ್‌ ಮಾವು ಖರೀದಿಗೆ ಅವಕಾಶ
* ಮಾವು ಪರಿಶೀಲನೆಗೆ ತಜ್ಞರ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.