ADVERTISEMENT

ಆರೋಪಿ ವಿರುದ್ಧ ಮತ್ತೊಂದು ಎಫ್‌ಐಆರ್

ಮಣಿಪಾಲ್ ಗ್ರೂಪ್‌ಗೆ ವಂಚಿಸಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 19:46 IST
Last Updated 17 ಆಗಸ್ಟ್ 2019, 19:46 IST

ಬೆಂಗಳೂರು: ‘ಮಣಿಪಾಲ್ ಎಜುಕೇಷನ್ ಹಾಗೂ ಮೆಡಿಕಲ್ ಗ್ರೂಪ್‌’ಗೆ ₹62 ಕೋಟಿ ವಂಚಿಸಿದ
ಪ್ರಕರಣದಲ್ಲಿ ಜೈಲು ಸೇರಿರುವ ಸಂದೀಪ್ ಗುರುರಾಜ್ ಹಾಗೂ ಇತರರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ.

‘ನಾರ್ಥ್ ಟೆಕ್ನಾಲಜಿ ಇಂಡಿಯಾ ಕಂಪನಿಯ ಸಹ ಸಂಸ್ಥಾಪಕ ಶ್ರೀಕುಮಾರ್ ಸುಂದರಮೂರ್ತಿ, ಸಂದೀಪ್ ಗುರುರಾಜ್ ಹಾಗೂ ಇತರರು, ನಕಲಿ ದಾಖಲೆ ಸೃಷ್ಟಿಸಿ ವಂಚಿಸಿ ಜೀವಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಸೌರಭ್ ಕುಮಾರ್ ಸಿಂಗ್ ಎಂಬುವರು ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದರು. ನ್ಯಾಯಾಲಯದ ನಿರ್ದೇಶನದಂತೆ ದೂರು ದಾಖಲಿಸಿಕೊಳ್ಳಲಾಗಿದೆ’
ಎಂದು ಪೊಲೀಸರು ಮಾಹಿತಿ ನೀಡಿದರು.

‘ದೂರುದಾರ ಸೌರಭ್ ಕುಮಾರ್ ಸಿಂಗ್ ಹಾಗೂ ಆರೋಪಿ ಶ್ರೀಕುಮಾರ್ ಸೇರಿಕೊಂಡು ಪಾಲುದಾರಿಕೆ
ಯಲ್ಲಿ ನಾರ್ಥ್ ಟೆಕ್ನಾಲಜಿ ಇಂಡಿಯಾ ಕಂಪನಿ ಆರಂಭಿಸಿದ್ದರು. ದೂರುದಾರರೇ ₹5 ಲಕ್ಷ ಹೂಡಿಕೆ
ಮಾಡಿ ಉತ್ತಮ ಲಾಭ ಬರುವಂತೆ ಮಾಡಿದ್ದರು. ಈ ಬಗ್ಗೆ ದೂರಿನಲ್ಲಿ ಹೇಳಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ADVERTISEMENT

‘ದೂರುದಾರರು ರಾಜೀನಾಮೆ ನೀಡಿದ ರೀತಿಯಲ್ಲೇ 2015ರ ಡಿಸೆಂಬರ್ 31ರಂದು ನಕಲಿ
ಪತ್ರ ಸಿದ್ಧಪಡಿಸಿದ್ದ ಆರೋಪಿಗಳು, ಸಂದೀಪ್ ಗುರುರಾಜ್‌ನನ್ನು ಕಂಪನಿಯ ನಿರ್ದೇಶಕನಾಗಿ
ನೇಮಿಸಿಕೊಂಡಿದ್ದರು. ಅದನ್ನು ಪ್ರಶ್ನಿಸಿದ ದೂರುದಾರರಿಗೇ ಜೀವ ಬೆದರಿಕೆ ಸಹ ಹಾಕಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿ ಶ್ರೀಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಂದೀಪ್ ಗುರುರಾಜ್‌ನನ್ನು ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.