ADVERTISEMENT

ಮನ್ಸೂರ್ ಖಾನ್ ವಿಚಾರಣಾಧೀನ ಕೈದಿ ‘7305’

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 20:06 IST
Last Updated 1 ಆಗಸ್ಟ್ 2019, 20:06 IST

ಬೆಂಗಳೂರು: ‘ಐಎಂಎ ಸಮೂಹ’ ಕಂಪನಿ ಮಾಲೀಕ ಮನ್ಸೂರ್ ಖಾನ್‌, ವಿಚಾರಣಾಧೀನ ಕೈದಿ ’7305‘ ಆಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿ ಕಸ್ಟಡಿಗೆ ಪಡೆದಿದ್ದ ಮನ್ಸೂರ್ ಖಾನ್‌ ಅವರನ್ನು ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅದರಂತೆ ಮಧ್ಯಾಹ್ನವೇ ಆರೋಪಿಯನ್ನು ಜೈಲಿಗೆ ಕರೆತಂದು ಬಿಡಲಾಯಿತು.

‘ಆರೋಪಿ ಸಮೇತ ಜೈಲಿಗೆ ಬಂದಿದ್ದ ಇ.ಡಿ ಅಧಿಕಾರಿಗಳು, ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿದರು. ಆರೋಪಿಯನ್ನು ಜೈಲಿನ ಅಧಿಕಾರಿಗಳ ವಶಕ್ಕೆ ಒಪ್ಪಿಸಿದರು’ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.

ADVERTISEMENT

‘ಜೈಲಿಗೆ ಬರುವ ಆರೋಪಿಗಳಿಗೆ ನಿಯಮಾವಳಿ ಪ್ರಕಾರ ಒಂದೊಂದು ನಂಬರ್‌ ಕೊಡಲಾಗುತ್ತದೆ. ಅದರಂತೆ ಮನ್ಸೂರ್ ಖಾನ್ ಅವರಿಗೂ ‘7305’ ಸಂಖ್ಯೆ ನೀಡಲಾಗಿದೆ. ಇದು ಆರೋಪಿಯ ದಾಖಲಾತಿ ಸಂಖ್ಯೆ’ ಎಂದು ಹೇಳಿವೆ.

ವೈದ್ಯಕೀಯ ಪರೀಕ್ಷೆ: ಆರೋಪಿಯನ್ನು ಕಾರಾಗೃಹದಲ್ಲಿ ದಾಖಲಿಸಿಕೊಂಡ ಅಧಿಕಾರಿಗಳು, ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು.

‘ಯಾವುದೇ ಆರೋಪಿ ಜೈಲಿಗೆ ಬಂದರೆ, ಮೊದಲಿಗೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಅದರಂತೆ ಮನ್ಸೂರ್ ಖಾನ್ ಅವರನ್ನು ಜೈಲಿನಲ್ಲಿರುವ ಆಸ್ಪತ್ರೆಯ ವೈದ್ಯರೇ ತಪಾಸಣೆ ನಡೆಸುತ್ತಿದ್ದಾರೆ. ಅದರ ವರದಿ ಬಂದ ನಂತರವೇ ಅವರನ್ನು ಜೈಲಿನ ಸೆಲ್‌ನಲ್ಲಿ ಇರಿಸಬೇಕೋ ಅಥವಾ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಬೇಕೋ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.