ADVERTISEMENT

ವಿಕ್ಟೋರಿಯಾ ಆಸ್ಪತ್ರೆಗೆ ಮನ್ಸೂರ್ ಖಾನ್ ದಾಖಲು

ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಎದೆನೋವಿನ ನೆಪ ?

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:29 IST
Last Updated 22 ಜುಲೈ 2019, 19:29 IST
ಮನ್ಸೂರ್
ಮನ್ಸೂರ್   

ಬೆಂಗಳೂರು: ಭಾನುವಾರ ಸಂಜೆಯಿಂದಲೇ ಎದೆ ನೋವು ಎಂದು ಹೇಳುತ್ತಿರುವ ಐಎಂಎ ಸಮೂಹ ಕಂಪನಿ ಮಾಲೀಕ ಮನ್ಸೂರ್ ಖಾನ್‌ ಅವರನ್ನು ಸೋಮವಾರ ಮಧ್ಯಾಹ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಷೇರು ಸಂಗ್ರಹಿಸಿ ವಂಚಿಸಿದ ಬಗ್ಗೆ ದೂರುಗಳು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಮನ್ಸೂರ್ ಖಾನ್‌ ಅವರನ್ನು ಇತ್ತೀಚೆಗಷ್ಟೇ ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಅವರನ್ನು ಕಸ್ಟಡಿಗೆ ಪಡೆದಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಶಾಂತಿನಗರದಲ್ಲಿರುವ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

‘ಎದೆ ನೋಯುತ್ತಿದೆ. ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಿರಿ’ ಎಂದು ಆರೋಪಿ ಪಟ್ಟು ಹಿಡಿದಿದ್ದರು. ಭಾನುವಾರ ಸಂಜೆಯೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದು, ಹೆಚ್ಚಿನ ತಪಾಸಣೆಗಾಗಿ ಅಲ್ಲಿಂದ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ADVERTISEMENT

ಪರೀಕ್ಷೆ ನಡೆಸಿದ ವೈದ್ಯರು, ಯಾವುದೇ ತೊಂದರೆ ಇಲ್ಲವೆಂದು ಹೇಳಿದ್ದರಿಂದ ಮನ್ಸೂರ್ ಖಾನ್ ಅವರನ್ನು ಪುನಃ ಇ.ಡಿ ಕಚೇರಿಗೆ ಕರೆದೊಯ್ದು ವಿಚಾರಣೆ ಮುಂದುವರಿಸಲಾಗಿತ್ತು.ಸೋಮವಾರಮಧ್ಯಾಹ್ನವೂಆರೋಪಿ, ‘ಎದೆನೋವು ಇದೆ.ಆಸ್ಪತ್ರೆಗೆ ದಾಖಲಿಸಿ’→ಎಂದು ಪಟ್ಟು→ಹಿಡಿದಿದ್ದರು. ಇ.ಡಿ ಅಧಿಕಾರಿಗಳು, ಚಿಕಿತ್ಸೆಗಾಗಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಸುತ್ತಲೂ ವಿ.ವಿ.ಪುರ ಠಾಣೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

‘ಮನ್ಸೂರ್ ಖಾನ್ ಆರೋಗ್ಯವಾಗಿರುವುದಾಗಿ ವೈದ್ಯರೇ ವರದಿ ನೀಡಿದ್ದಾರೆ. ಅಷ್ಟಾದರೂ ಅವರು ವಿಚಾರಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಎದೆನೋವಿನ ನೆಪ ಹೇಳುತ್ತಿದ್ದಾರೆ. ಮಂಗಳವಾರ ಅವರ ಕಸ್ಟಡಿ ಅವಧಿ ಮುಗಿಯಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.