–ಪ್ರಾತಿನಿಧಿಕ ಚಿತ್ರ
–ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಆರೋಗ್ಯ ಸಂಸ್ಥೆಗಳಲ್ಲಿ ವೈದ್ಯಕೀಯ ಉಪಕರಣಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಗೆ ‘ಇ–ಉಪಕರಣ’ ತಂತ್ರಾಂಶವನ್ನು ಅನುಷ್ಠಾನಗೊಳಿಸುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಆರೋಗ್ಯ ಸಂಸ್ಥೆಗಳಲ್ಲಿರುವ ವೈದ್ಯಕೀಯ ಉಪಕರಣಗಳ ಪರಿಣಾಮಕಾರಿ ನಿರ್ವಹಣೆ ಹಾಗೂ ನೈಜ ಸಮಯದಲ್ಲಿ ಮೇಲ್ವಿಚಾರಣೆಗೆ ಈ ತಂತ್ರಾಂಶವು ಸಮಗ್ರ ಡಿಜಿಟಲ್ ಪರಿಹಾರವಾಗಲಿದೆ. ಈ ತಂತ್ರಾಂಶದ ನೆರವಿನಿಂದ ಉಪಕರಣಗಳ ದಾಸ್ತಾನು ನಿರ್ವಹಣೆ, ದೂರುಗಳ ನಿರ್ವಹಣೆ, ಉಪಕರಣಗಳ ಕಾರ್ಯಕ್ಷಮತೆ ಪತ್ತೆ ಹಚ್ಚುವಿಕೆ, ಸೇವಾ ಇತಿಹಾಸ ನಿರ್ವಹಣೆಯೂ ಸಾಧ್ಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಎಲ್ಲ ಆರೋಗ್ಯ ಸಂಸ್ಥೆಗಳು ಪ್ರಸ್ತುತ ಅಸ್ತಿತ್ವದಲ್ಲಿರುವ ವೈದ್ಯಕೀಯ ಉಪಕರಣಗಳ ಹೆಸರು, ಮಾದರಿ, ತಯಾರಕರ ವಿವರ, ಕ್ರಮ ಸಂಖ್ಯೆ, ಪೂರೈಕೆದಾರರ ವಿವರ, ‘ವಾರಂಟಿ’ ವಿವರ, ಉಪಕರಣಗಳ ಚಿತ್ರ ಸೇರಿ ಇತರ ವಿವರಗಳನ್ನು ಇ–ಉಪಕರಣ ತಂತ್ರಾಂಶದಲ್ಲಿ ನಮೂದಿಸಬೇಕು. ಆರೋಗ್ಯ ಸೌಲಭ್ಯ ನೋಂದಣಿ (ಎಚ್‌ಎಫ್‌ಆರ್ ಐಡಿ) ಆಧಾರದ ಮೇಲೆ, ಆರೋಗ್ಯ ಇಲಾಖೆಯಿಂದ ನೀಡಲಾದ ಬಳಕೆದಾರ ಐ.ಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ದಾಸ್ತಾನು ವಿವರಗಳನ್ನು ನವೀಕರಿಸಬೇಕು ಎಂದು ಸೂಚಿಸಲಾಗಿದೆ.
ಆರೋಗ್ಯ ಸಂಸ್ಥೆಗಳು ವೈದ್ಯಕೀಯ ಉಪಕರಣಗಳ ಬೇಡಿಕೆಗಳನ್ನು ಇ-ಉಪಕರಣ ತಂತ್ರಾಂಶದ ಮೂಲಕವೇ ಸಲ್ಲಿಸಬೇಕು. ಯಾವುದೇ ದೋಷಪೂರಿತ ಅಥವಾ ಸ್ಥಗಿತಗೊಂಡ ಉಪಕರಣಗಳಿಗೆ ಸಂಬಂಧಿಸಿದ ದೂರುಗಳನ್ನು ಇ-ಉಪಕರಣ ತಂತ್ರಾಂಶದಲ್ಲಿ ಸಲ್ಲಿಸಬೇಕು. ಇಲಾಖೆಯಿಂದ ಅಥವಾ ಸ್ಥಳೀಯವಾಗಿ ಖರೀದಿಸುವ ವೈದ್ಯಕೀಯ ಉಪಕರಣಗಳನ್ನು ಸಂಸ್ಥೆಗಳು ಇ-ಉಪಕರಣ ತಂತ್ರಾಂಶದ ಮೂಲಕವೇ ಕಡ್ಡಾಯವಾಗಿ ಸ್ವೀಕರಿಸಬೇಕು ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.