ADVERTISEMENT

ಮೀನಾಕ್ಷಿ ಭಟ್ಟ ಐನಕೈ ಅವರ ಆತ್ಮಕಥೆ ‘ಹರಿವ ನದಿ’ ಬಿಡುಗಡೆ

‘ಕಷ್ಟ ಜಯಿಸಿದ ಬದುಕು ಸ್ಫೂರ್ತಿಯಾಗಲಿ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 21:37 IST
Last Updated 17 ಡಿಸೆಂಬರ್ 2021, 21:37 IST
ಸಿದ್ದಾಪುರದ ಶಂಕರ ಮಠದಲ್ಲಿ ಶುಕ್ರವಾರ ನಡೆದ ‘ಅಮ್ಮನೊಂದಿಗೆ ಒಂದು ದಿನ’ ಕಾರ್ಯಕ್ರಮದಲ್ಲಿ ಮೀನಾಕ್ಷಿ ಭಟ್ಟ ಐನಕೈ ಅವರ ಆತ್ಮಕಥನ ‘ಹರಿವ ನದಿ’ ಪುಸ್ತಕವನ್ನು ಗಾಯಕಿ ಎಚ್.ಆರ್.ಲೀಲಾವತಿ ಬಿಡುಗಡೆ ಮಾಡಿದರು. ವಿಮರ್ಶಕಿ ವಿನಯಾ ವಕ್ಕುಂದ ಹಾಗೂ ಮೀನಾಕ್ಷಿ ಭಟ್ಟ ಐನಕೈ ಇದ್ದಾರೆ –ಪ್ರಜಾವಾಣಿ ಚಿತ್ರ
ಸಿದ್ದಾಪುರದ ಶಂಕರ ಮಠದಲ್ಲಿ ಶುಕ್ರವಾರ ನಡೆದ ‘ಅಮ್ಮನೊಂದಿಗೆ ಒಂದು ದಿನ’ ಕಾರ್ಯಕ್ರಮದಲ್ಲಿ ಮೀನಾಕ್ಷಿ ಭಟ್ಟ ಐನಕೈ ಅವರ ಆತ್ಮಕಥನ ‘ಹರಿವ ನದಿ’ ಪುಸ್ತಕವನ್ನು ಗಾಯಕಿ ಎಚ್.ಆರ್.ಲೀಲಾವತಿ ಬಿಡುಗಡೆ ಮಾಡಿದರು. ವಿಮರ್ಶಕಿ ವಿನಯಾ ವಕ್ಕುಂದ ಹಾಗೂ ಮೀನಾಕ್ಷಿ ಭಟ್ಟ ಐನಕೈ ಇದ್ದಾರೆ –ಪ್ರಜಾವಾಣಿ ಚಿತ್ರ   

ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ): ‘ಸಾಮಾನ್ಯ ಮಹಿಳೆಯೊಬ್ಬಳು ಜೀವನದಲ್ಲಿ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸು ಕಂಡ ಗಾಥೆ ಸಮಾಜದ ಎಲ್ಲ ಮಹಿಳೆಯರಿಗೆ ಸ್ಫೂರ್ತಿ’ ಎಂದು ಖ್ಯಾತ ಗಾಯಕಿ ಎಚ್.ಆರ್.ಲೀಲಾವತಿ ಹೇಳಿದರು.

ಪಟ್ಟಣದ ಶಂಕರಮಠದ ಸಭಾಂಗಣದಲ್ಲಿ ಶುಕ್ರವಾರ ಸಂಸ್ಕೃತಿ ಸಂಪದ ಆಯೋಜಿಸಿದ್ದ ‘ಅಮ್ಮನೊಂದಿಗೆ ಒಂದು ದಿನ’ ಕಾರ್ಯಕ್ರಮದಲ್ಲಿ ಮೀನಾಕ್ಷಿ ಭಟ್ಟ ಐನಕೈ ಅವರ ಆತ್ಮಕಥೆ ‘ಹರಿವ ನದಿ’ ಬಿಡುಗಡೆಗೊಳಿಸಿ ಮಾತನಾಡಿದರು.

‘ತಾಯಿ ಎಂಬುದು ಪ್ರೀತಿ ಸೂಚಕ. ಪ್ರೀತಿ ಹಂಚುವ ಯಾರನ್ನೇ ಆದರೂ ತಾಯಿ ಎಂದು ಪರಿಗಣಿಸಬಹುದು. ಮೀನಾಕ್ಷಿ ಭಟ್ ಅವರದು ವಿಶಾಲ ಹೃದಯದ ತಾಯಿ ಪ್ರೀತಿ’ ಎಂದು ಶ್ಲಾಘಿಸಿದರು. ಆತ್ಮಕಥೆಯ ಕುರಿತು ಪರಿಚಯಿಸಿದ ವಿಮರ್ಶಕಿ ವಿನಯಾ ವಕ್ಕುಂದ, ‘ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರ ಬದುಕಿನ ಚಿತ್ರಣ ಕಟ್ಟಿಕೊಡುವ ಪ್ರಯತ್ನದಲ್ಲಿ ಹರಿವ ನದಿ ಯಶಸ್ವಿಯಾಗಿದೆ. ಯಾತನೆಯ ಕಥನ ಇದಲ್ಲ. ಹೆಣ್ಣಿನ ಜೀವನವೂ ನದಿಯಂತೆ ಎಂಬುದನ್ನು ಪ್ರಾಮಾಣಿಕವಾಗಿ ಅಕ್ಷರರೂಪದಲ್ಲಿ ಅಚ್ಚೊತ್ತಲಾಗಿದೆ’ ಎಂದರು.

ADVERTISEMENT

‘ಅನುಭವಿಸಿದ ಶೋಷಣೆ, ಯಾತನೆಯ ಕುರಿತಾದ ಆರೋಪಗಳಿಲ್ಲದೆ ಜೀವನ ಕಥನ ಸಾಗಿದ ನಿರೂಪಣೆ ಅದ್ಭುತ. ಜಗತ್ತನ್ನು ಸಿದ್ಧಮಾನದಂಡದ ಹೊರತಾಗಿಯೂ ನೋಡುವ ವಿಚಾರವನ್ನು ಬಿತ್ತರಿಸಿದೆ’ ಎಂದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೀನಾಕ್ಷಿ ಭಟ್ಟ ಐನಕೈ ಹಾಗೂಲೇಖಕಿ ಭಾರತಿ ಹೆಗಡೆ ಉಪಸ್ಥಿತರಿದ್ದರು.

ಶಿವಮೊಗ್ಗದ ಸುರೇಖಾ ಹೆಗಡೆ ಮತ್ತು ತಂಡದವರು ‘ಅಮ್ಮನ ಹಾಡು’ಗಳನ್ನು ಹಾಡಿದರು. ‘ಐರಾವತ’ ತಾಳಮದ್ದಲೆ ಪ್ರಸಂಗ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.