ADVERTISEMENT

ಮೀಟರ್‌ ಬಡ್ಡಿ ದಂಧೆ; ಆನೇಕಲ್ ಕೃಷ್ಣಪ್ಪ ಬಂಧನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 19:00 IST
Last Updated 7 ಡಿಸೆಂಬರ್ 2018, 19:00 IST

ಬೆಂಗಳೂರು: ಮೀಟರ್‌ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪದಡಿ ಆನೇಕಲ್‌ ಕೃಷ್ಣಪ್ಪನನ್ನು (54) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಾರ್ವಜನಿಕರಿಗೆ ಸಾಲ ಕೊಟ್ಟು ಶೇ 10ರಷ್ಟು ಬಡ್ಡಿ ಪಡೆಯುತ್ತಿದ್ದ ಆರೋಪಿಯ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಸಿಸಿಬಿ ಪೊಲೀಸರು, ಆತನನ್ನು ಬಂಧಿಸಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡರು.

‘ಹಲವು ವರ್ಷಗಳಿಂದ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಕೃಷ್ಣಪ್ಪ, ಸಾಲಗಾರರಿಂದ ಭದ್ರತೆಗಾಗಿ ಖಾಲಿ ಚೆಕ್ ಹಾಗೂ ಮನೆ, ನಿವೇಶನದ ದಾಖಲೆಗಳನ್ನು ಪಡೆಯುತ್ತಿದ್ದ. ಸಾಲಗಾರರು ಮೀಟರ್ ಬಡ್ಡಿ ಹಾಗೂ ಅಸಲು ಸಮೇತ ಸಾಲ ತೀರಿಸಿದರೂ ಖಾಲಿ ಚೆಕ್ ಹಾಗೂ ದಾಖಲೆಗಳನ್ನು ಆರೋಪಿ ವಾಪಸ್‌ ಕೊಡುತ್ತಿರಲಿಲ್ಲ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ADVERTISEMENT

‘ಸಾಲಗಾರರ ಮನೆ ಬಳಿ ಹೋಗಿ ಗಲಾಟೆ ಮಾಡುತ್ತಿದ್ದ ಆರೋಪಿ, ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಆತನ ಕಿರುಕುಳದಿಂದ ಬೇಸತ್ತ ಸಾರ್ವಜನಿಕರು, ದೂರು ಕೊಟ್ಟಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.