ADVERTISEMENT

ಆರೋಗ್ಯ, ವ್ಯಾಪಾರ ಎರಡಕ್ಕೂ ಕತ್ತರಿ!

ನಮ್ಮ ಮೆಟ್ರೊ: ಜಯದೇವ ಜಂಕ್ಷನ್‌ ಮೇಲ್ಸೇತುವೆಯ ಲೂಪ್‌ ನೆಲಸಮ ಕಾಮಗಾರಿ

ಗುರು ಪಿ.ಎಸ್‌
Published 27 ಜುಲೈ 2019, 19:46 IST
Last Updated 27 ಜುಲೈ 2019, 19:46 IST
ಜಯದೇವ ಮೇಲ್ಸೇತುವೆ ಬಳಿ ಮೆಟ್ರೊ ಕಾಮಗಾರಿ ನಡೆಯುತ್ತಿದೆ –ಪ್ರಜಾವಾಣಿ ಚಿತ್ರ
ಜಯದೇವ ಮೇಲ್ಸೇತುವೆ ಬಳಿ ಮೆಟ್ರೊ ಕಾಮಗಾರಿ ನಡೆಯುತ್ತಿದೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಮ್ಮ ಮೆಟ್ರೊ ಎತ್ತರಿಸಿದ ರಸ್ತೆ ಕಾಮಗಾರಿಯಿಂದಾಗಿ ಜಯದೇವ ಜಂಕ್ಷನ್‌ ಪ್ರದೇಶದಲ್ಲಿ ವಾಯುಮಾಲಿನ್ಯ– ಶಬ್ದಮಾಲಿನ್ಯ ಸಮಸ್ಯೆ ಹೆಚ್ಚುತ್ತಿದೆ. ಇದರಿಂದಾಗಿ ವ್ಯಾಪಾರ–ವಹಿವಾಟಿಗೂ ಕತ್ತರಿ ಬಿದ್ದಿದೆ ಎಂದು ಸ್ಥಳೀಯರು ದೂರಿದ್ದಾರೆ.

‘ನಮ್ಮ ಮೆಟ್ರೊ’ ಎರಡನೇ ಹಂತದ ಗೊಟ್ಟಿಗೆರೆ– ನಾಗವಾರ ಮಾರ್ಗ ಹಾಗೂ ಆರ್‌.ವಿ.ರಸ್ತೆ– ಬೊಮ್ಮಸಂದ್ರ ಎತ್ತರಿಸಿದ ಮಾರ್ಗಗಳು ಜಯದೇವ ಜಂಕ್ಷನ್‌ ಬಳಿ ಸಂಧಿಸಲಿವೆ. ಗೊಟ್ಟಿಗೆರೆ–ನಾಗವಾರ ಎತ್ತರಿಸಿದ ಮಾರ್ಗದ ಪಿಲ್ಲರ್‌ಗಳ ಅಳವಡಿಕೆ ಕಾಮಗಾರಿ ಸುಮಾರು ಏಳು ತಿಂಗಳಿನಿಂದ ಪ್ರಗತಿಯಲ್ಲಿದೆ.

ಕಾಮಗಾರಿ ಪರಿಣಾಮ ಬಿಟಿಎಂ ಲೇಔಟ್‌, ಜಯನಗರ ಮತ್ತು ಬನ್ನೇರುಘಟ್ಟ ರಸ್ತೆಯಲ್ಲಿ ವಾಹನ ದಟ್ಟಣೆಯೂ ಮಿತಿಮೀರಿದೆ.ಗ್ರಾಹಕರಿಲ್ಲದೆ ಹಲವು ಮಳಿಗೆಗಳು ಬಾಗಿಲು ಬಂದ್‌ ಮಾಡಿವೆ. ರಾತ್ರಿ 10 ಗಂಟೆಯ ನಂತರವೂ ಕಾಮಗಾರಿ ನಡೆಸುವುದರಿಂದ ಯಂತ್ರಗಳ ಶಬ್ದ ಸಹಿಸಲಾಗದೆ, ಸ್ಥಳೀಯರು ಮನೆ ಬದಲಾಯಿಸುತ್ತಿದ್ದಾರೆ. ದೂಳಿನ ಸಮಸ್ಯೆ ತಡೆಯಲಾಗದೆ ಮುಖಗವಸು ಹಾಕಿಕೊಂಡು ಓಡಾಡುವುದು ಅನಿವಾರ್ಯವಾಗಿದೆ.

ADVERTISEMENT

ನಿರ್ಮಾಣವೂ, ಧ್ವಂಸವೂ!: ‘ಜಯದೇವ ಮೇಲ್ಸೇತುವೆ ನಿರ್ಮಾಣ ವೇಳೆ ಸುಮಾರು ನಾಲ್ಕು ವರ್ಷ ತೊಂದರೆ ಅನುಭವಿಸಿದೆವು. ಈಗ ಮೆಟ್ರೊ ಕಾಮಗಾರಿಗಾಗಿ ಮೇಲ್ಸೇತುವೆಯನ್ನು ಕೆಡವಲಿದ್ದಾರೆ. ಈಗ ಮತ್ತೆ ತೊಂದರೆ ಅನುಭವಿಸಬೇಕಿದೆ’ ಎಂದು ಔಷಧ ವ್ಯಾಪಾರಿ ದೀಪು ಹೇಳಿದರು.

‘ಈ ಪ್ರದೇಶದಲ್ಲಿ ಮೆಟ್ರೊ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ದೂಳಿನ ಸಮಸ್ಯೆ, ಸಂಚಾರ ದಟ್ಟಣೆ ಸಹಿಸಲು ಆಗುತ್ತಿಲ್ಲ. ವ್ಯಾಪಾರವು ಶೇ 40ರಷ್ಟು ಕಡಿಮೆಯಾಗಿದೆ’ ಎಂದು ಅವರು ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.

ಆಗಸ್ಟ್‌ 15ಕ್ಕೆ ಪೂರ್ಣ?: ಜಯದೇವ ಜಂಕ್ಷನ್‌ ಬಳಿ ಗೊಟ್ಟಿಗೆರೆ– ನಾಗವಾರ ಮಾರ್ಗದ ಕಾಮಗಾರಿ ಸಲುವಾಗಿ ಜಯದೇವ ಫ್ಲೈ ಓವರ್‌ನ ಬನ್ನೇರುಘಟ್ಟ ರಸ್ತೆಯಿಂದ ಸಿಲ್ಕ್‌ಬೋರ್ಡ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಲೂಪ್‌ ಅನ್ನು ಕೆಡವಲು ಬಿಎಂಆರ್‌ಸಿಎಲ್‌ ಸಿದ್ಧತೆ ನಡೆಸಿದೆ. ಆಗಸ್ಟ್‌ 15ರ ವೇಳೆಗೆ ಈ ನೆಲಸಮ ಕಾಮಗಾರಿ ಮುಕ್ತಾಯವಾಗಲಿದೆ ಎಂದು ನಿಗಮದ ಅಧಿಕಾರಿಗಳು ಹೇಳುತ್ತಾರೆ.

‘ಕಾಮಗಾರಿ ಶೀಘ್ರವಾಗಿ ಮುಗಿಸಬೇಕೆಂದರೆ ಹಗಲು–ರಾತ್ರಿ ಕೆಲಸ ಮಾಡುವುದು ಅನಿವಾರ್ಯ. ರಾತ್ರಿಯೂ ಯಂತ್ರಗಳನ್ನು ಬಳಸಬೇಕಾಗುತ್ತದೆ’ ಎಂದು ನಿಗಮದ ಅಧಿಕಾರಿಗಳು ಹೇಳುತ್ತಾರೆ.

ವರ್ತಕರ ನೋಟಿಸ್‌ಗೆ ಉತ್ತರಿಸದ ಬಿಎಂಆರ್‌ಸಿಎಲ್‌

‘ಕಳೆದ ಡಿಸೆಂಬರ್‌ನಲ್ಲಿ ನಾವು ಇಲ್ಲಿ (ಜಯದೇವ ಮೇಲ್ಸೇತುವೆ ಬಳಿ) ಮಳಿಗೆಯನ್ನು ಸ್ಥಳಾಂತರಿಸಿದೆವು. ಆದರೆ, ಬಿಎಂಆರ್‌ಸಿಎಲ್‌ನವರು ಯಾವುದೇ ನೋಟಿಸ್‌ ನೀಡದೆ, ಮಾಹಿತಿ ನೀಡದೆ ಅಂಗಡಿಯ ಮುಂದೆ ಬ್ಯಾರಿಕೇಡ್‌ ತಂದು ಹಾಕಿದರು. ಗ್ರಾಹಕರು ಬಾರದೆ, ನಮಗೆ ತುಂಬಾ ನಷ್ಟವಾಗಿದೆ’ ಎಂದು ಶ್ರೀಗುರು ಮೆಡಿಕಲ್ಸ್‌ನ ಮಾಲೀಕ ಬಿ.ಯು. ರಾಜೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಮ್ಮ ಜಾಗದಲ್ಲಿ ಬ್ಯಾರಿಕೇಡ್‌ ಹಾಕಿಲ್ಲ ಎಂದು ನಿಗಮದವರು ಉತ್ತರ ಕೊಡುತ್ತಾರೆ. ಆದರೆ, ಅಂಗಡಿ ಮುಂದೆ 9 ಅಡಿ ಅಗಲದ ಬ್ಯಾರಿಕೇಡ್‌ ಹಾಕಿದರೆ ಗ್ರಾಹಕರು ಹೇಗೆ ಬರುತ್ತಾರೆ. ನಷ್ಟವಾಗಿದೆ ಎಂದು ದೂರಿ ಕಳೆದ ಮಾರ್ಚ್‌ನಲ್ಲಿಯೇ ವಕೀಲರ ಮೂಲಕ ನೋಟಿಸ್‌ ನೀಡಿದ್ದೇವೆ. ಈವರೆಗೆ ಉತ್ತರ ಬಂದಿಲ್ಲ’ ಎಂದು ಅವರು ಹೇಳಿದರು.

‘ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ. ಅವರ ಅಂಗಡಿಯವರೆಗೂ ಬೈಕ್‌ ಅಥವಾ ಕಾರು ಹೋಗಬೇಕು ಎಂದು ಬಯಸಿದರೆ ಅದು ಸರಿಯಲ್ಲ. ಪಾದಚಾರಿ ಮಾರ್ಗವಿದ್ದು, ಜನ ಓಡಾಡಲು ತೊಂದರೆಯಿಲ್ಲ. ಅವರ ನೋಟಿಸ್‌ಗೆ ಶೀಘ್ರ ಉತ್ತರ ಕಳುಹಿಸಲಾಗುವುದು’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಹೇಳಿದರು.
**

ದೂಳಿನಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಗಮನಕ್ಕೆ ಬಂದಿದೆ. ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು

- ಅಜಯ್‌ ಸೇಠ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ

**
ಕಾಮಗಾರಿ ಪ್ರಾರಂಭವಾದ ನಂತರ ವ್ಯಾಪಾರ ಶೇ 50ರಷ್ಟು ಕಡಿಮೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಉದ್ಘಾಟನೆಗೊಂಡಿದ್ದ ಜಿಮ್‌ ಪೌಡರ್‌ ಮಾರಾಟ ಮಳಿಗೆಯನ್ನು 4 ತಿಂಗಳಲ್ಲಿ ಮುಚ್ಚಲಾಗಿದೆ.

- ನಿರಂಜನ್‌ ಕುಮಾರ್‌, ಔಷಧ ವ್ಯಾಪಾರಿ

**
ದೂಳು ನಿಯಂತ್ರಣಕ್ಕೆ ಬಿಎಂಆರ್‌ಸಿಎಲ್‌ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಕಸ ಸ್ವಚ್ಛಗೊಳಿಸಿ, ದೂಳು ನಿಯಂತ್ರಿಸಲು ನೀರು ಹಾಕಬೇಕಿತ್ತು.

- ಗಣೇಶ್‌, ಸೈಕಲ್‌ ಅಂಗಡಿ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.