ADVERTISEMENT

ಪ್ರತಿ 2 ಕಿ.ಮೀ ವ್ಯಾಪ್ತಿಗೂ ಮೆಟ್ರೊ: ನಾಲ್ಕು ಹೊಸ ಮಾರ್ಗಗಳಿಗೆ ಪ್ರಸ್ತಾವ

ನಾಲ್ಕು ಹೊಸ ಮೆಟ್ರೊ ಮಾರ್ಗಗಳಿಗೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 23:45 IST
Last Updated 16 ಮಾರ್ಚ್ 2023, 23:45 IST
ಮೆಟ್ರೊ ರೈಲು
ಮೆಟ್ರೊ ರೈಲು   

ಬೆಂಗಳೂರು: ಮುಂದಿನ 10 ವರ್ಷಗಳಲ್ಲಿ ನಗರದ ಎಲ್ಲಾ ಪ್ರದೇಶದಲ್ಲೂ ಎರಡು ಕಿಲೋ ಮೀಟರ್ ವ್ಯಾಪ್ತಿಗೆ ಮೆಟ್ರೊ ರೈಲು ಸಂಪರ್ಕ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ನಾಲ್ಕು ಹೊಸ ಮೆಟ್ರೊ ರೈಲು ಮಾರ್ಗಗಳನ್ನು ಪ್ರಸ್ತಾಪಿಸಿದೆ.

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (ಫಿಕ್ಕಿ) ಹೊಸ ನಾಲ್ಕು ಯೋಜನೆಗಳ ಬಗ್ಗೆ ಕ್ರಿಯಾಯೋಜನೆ ಸಿದ್ಧಪಡಿಸಿದೆ. 2032ರ ವೇಳೆಗೆ ಅನುಷ್ಠಾನಗೊಳಿಸಲು ಶಿಫಾರಸು ಮಾಡಿದೆ. ಇದರಲ್ಲಿ ಎರಡು ಹೊಸ ಮಾರ್ಗ ಮತ್ತು ಎರಡು ವಿಸ್ತರಿತ ಮಾರ್ಗಗಳಿವೆ.

ಪ್ರಸ್ತಾವನೆಯ ಪ್ರಕಾರ, ಎಂ.ಜಿ.ರಸ್ತೆಯಿಂದ ಹಳೇ ವಿಮಾನ ನಿಲ್ದಾಣ ರಸ್ತೆ ಮೂಲಕ ಮಾರತಹಳ್ಳಿ ಮಾರ್ಗವಾಗಿ ವೈಟ್‌ಫೀಲ್ಡ್‌ ಸಂಪರ್ಕಿಸುವ ಮಾರ್ಗ, ನಾಗವಾರದಿಂದ ಥಣಿಸಂದ್ರ ಮಾರ್ಗವಾಗಿ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮತ್ತೊಂದು ಮಾರ್ಗವನ್ನು ಪ್ರಸ್ತಾಪಿಸಲಾಗಿದೆ.

ADVERTISEMENT

ವೈಟ್‌ಫೀಲ್ಡ್‌ ತನಕ ನಿರ್ಮಾಣವಾಗಿರುವ ಮಾರ್ಗವನ್ನು ಕಾಟಂನಲ್ಲೂರು ಮಾರ್ಗವಾಗಿ ಹೊಸಕೋಟೆಗೆ, ಬನ್ನೇರುಘಟ್ಟ ರಸ್ತೆಯ ಮಾರ್ಗವನ್ನು ಜಿಗಣಿಗೆ ವಿಸ್ತರಿಸುವ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.

ಈ ನಾಲ್ಕು ಮಾರ್ಗಗಳ ನಿರ್ಮಾಣಕ್ಕೆ ₹27 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಹಳೇ ವಿಮಾನ ನಿಲ್ದಾಣ ರಸ್ತೆಯ ಮಾರ್ಗಕ್ಕೆ ₹9,600 ಕೋಟಿ, ನಾಗವಾರ–ವಿಮಾನ ನಿಲ್ದಾಣ ಮಾರ್ಗಕ್ಕೆ ₹10 ಸಾವಿರ ಕೋಟಿ, ಹೊಸಕೋಟೆ ಮಾರ್ಗಕ್ಕೆ ₹2500 ಕೋಟಿ, ಬನ್ನೇರುಘಟ್ಟ–ಜಿಗಣಿ ಮಾರ್ಗಕ್ಕೆ ₹4,800 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಿದೆ.

ಸದ್ಯ 56 ಕಿಲೋ ಮೀಟರ್ ಮೆಟ್ರೊ ರೈಲು ಮಾರ್ಗವಿದ್ದು, ಶೀಘ್ರವೇ 40 ಕಿಲೋ ಮೀಟರ್‌ ಮಾರ್ಗವನ್ನು ಸೇರ್ಪಡೆ ಮಾಡಲು ಸರ್ಕಾರ ಉದ್ದೇಶಿಸಿದೆ. ಅಲ್ಲದೇ ಸಿಲ್ಕ್ ಬೋರ್ಡ್‌ನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವು 58.19 ಕಿಲೋ ಮೀಟರ್ ಇದ್ದು, 2025ಕ್ಕೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.

ಮೂರನೇ ಹಂತದಲ್ಲಿ (ಕೆಂಪಾಪುರ–ಜೆ.ಪಿ.ನಗರ ನಾಲ್ಕನೇ ಹಂತ, ಮಾಗಡಿ ರಸ್ತೆ–ಕಡಬಗೆರೆ, ಸರ್ಜಾಪುರ–ಹೆಬ್ಬಾಳ) 81 ಕಿಲೋ ಮೀಟರ್ ಉದ್ದದ ಮಾರ್ಗ 2028ರ ವೇಳೆಗೆ ಸಾರ್ವಜನಿಕರಿಗೆ ಲಭ್ಯವಾಗುವ ಅಂದಾಜಿದೆ. ಅದರ ಜತೆಗೆ ಈಗ ಸರ್ಕಾರ ಪ್ರಸ್ತಾಪಿಸಿರುವ ಹೊಸ ನಾಲ್ಕು ಯೋಜನೆಗಳು 56 ಕಿಲೋ ಮೀಟರ್ ಮಾರ್ಗವನ್ನು ಹೊಂದಿವೆ.

ಬಿಡದಿ, ಮಾಗಡಿ ಸೇರಿದಂತೆ ಬೆಂಗಳೂರಿನ ಹೊರವಲಯದ ಚಿಕ್ಕ ನಗರಗಳಿಗೂ ಮೆಟ್ರೊ ಸೌಲಭ್ಯ ಕಲ್ಪಿಸುವ ಪ್ರಸ್ತಾಪವನ್ನೂ ಸರ್ಕಾರ ಮಾಡಿದೆ. ಈ ಎಲ್ಲಾ ಮೆಟ್ರೊ ಮಾರ್ಗಗಳು ಆರಂಭವಾದರೆ ಮುಂದಿನ ದಶಕದಲ್ಲಿ ನಗರದ ಎಲ್ಲಾ ಪ್ರದೇಶಕ್ಕೂ ಒಂದರಿಂದ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮೆಟ್ರೊ ರೈಲು ಪ್ರಯಾಣಿಕರಿಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.