ADVERTISEMENT

‘ನಮ್ಮ ಮೆಟ್ರೊ’ ವರಮಾನ ಶೇ 26ಹೆಚ್ಚಳ

ಸರ್ಕಾರದಿಂದ ಕಡಿಮೆ ಆರ್ಥಿಕ ನೆರವು ಪಡೆಯಲಾಗುತ್ತಿದೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 19:59 IST
Last Updated 15 ಅಕ್ಟೋಬರ್ 2019, 19:59 IST
.
.   

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌)ನ ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ವಹಿವಾಟು ವಿವರ ಪ್ರಕಟಗೊಂಡಿದ್ದು, ಈ ಅವಧಿಯಲ್ಲಿ ‘ನಮ್ಮ ಮೆಟ್ರೊ’ವಾಣಿಜ್ಯ ಸಂಚಾರದಲ್ಲಿ ಶೇ 26ರಷ್ಟು ಪ್ರಗತಿ ಸಾಧಿಸಿದೆ.

2018-19ನೇ ಸಾಲಿನ ಹಣಕಾಸು ವರ್ಷದ ಅಂತ್ಯಕ್ಕೆ ಬಿಎಂಆರ್‌ಸಿಎಲ್‌ಗೆ ವಾಣಿಜ್ಯ ಸಂಚಾರದಿಂದ ₹355 ಕೋಟಿ ವರಮಾನ ಹರಿದು ಬಂದಿದ್ದು, ಕಳೆದ ವರ್ಷ ಈ ಮೂಲದಿಂದ ಬಂದ ವರಮಾನ ₹281 ಕೋಟಿ ಇತ್ತು. ಅಂದರೆ, ಕಾರ್ಯಾಚರಣೆಯಲ್ಲಿ₹83.50 ಕೋಟಿ ಹೆಚ್ಚುವರಿ ನಗದು ಉಳಿತಾಯವಾಗಿದೆ.

ವೆಚ್ಚದಲ್ಲಿ ಏರಿಕೆ:ವಾಣಿಜ್ಯ ಸಂಚಾರದಲ್ಲಿ ವಿದ್ಯುತ್, ನಿರ್ವಹಣೆ ಸೇರಿದಂತೆ ಮತ್ತಿತರ ವೆಚ್ಚಗಳಲ್ಲಿ ಏರಿಕೆಯಾಗಿದೆ. ಸಿಬ್ಬಂದಿ ವೇತನ ಮತ್ತು ವೇತನ ಪರಿಷ್ಕರಣೆ, ಆರು ಬೋಗಿಗಳ ರೈಲುಗಳ ಸಂಚಾರ ಕೂಡ ಈ ವೆಚ್ಚದಲ್ಲೇ ಬರುತ್ತವೆ.

ADVERTISEMENT

ಈ ಮಧ್ಯೆ ಬಿಬಿಎಂಪಿಯು ಹೊರಾಂಗಣ ಜಾಹೀರಾತುಗಳನ್ನು ನಿಷೇಧಿಸಿದೆ. ಆದಾಗ್ಯೂ ಶುಲ್ಕರಹಿತ ವರಮಾನ ₹47 ಕೋಟಿ ಹರಿದು ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 7.59ರಷ್ಟು ಹೆಚ್ಚಳವಾಗಿದೆ.

ದಾಖಲೆ ಪ್ರಯಾಣಿಕರು:2018-19ನೇ ಸಾಲಿನಲ್ಲಿ ಮೆಟ್ರೊದಲ್ಲಿ 2018ರ ಅಕ್ಟೋಬರ್ 17ರಂದು ದಾಖಲೆ ಪ್ರಮಾಣದ ಅಂದರೆ 4,49,401 ಪ್ರಯಾಣಿಕರು ಸಂಚರಿಸಿದ್ದಾರೆ. ಇನ್ನು 2018ರ ಸೆಪ್ಟೆಂಬರ್ 3ರಂದು ಅತಿ ಹೆಚ್ಚು ₹1.40 ಕೋಟಿ ಆದಾಯ ಸಂಗ್ರಹ ಆಗಿದೆ.

ಎರಡು ವರ್ಷಗಳಲ್ಲಿ ಮೆಟ್ರೊ ಪ್ರಯಾಣಿಕರ ಸಂಖ್ಯೆ, ವರಮಾನಎರಡರಲ್ಲೂ ಏರಿಕೆ ಆಗಿದೆ. ಅದೇ ರೀತಿ, ಪ್ರಯಾಣಿಕರನ್ನು ಕೊಂಡೊಯ್ಯುವ ರೈಲುಗಳ ಸಾಮರ್ಥ್ಯ ದುಪ್ಪಟ್ಟಾಗಿದ್ದು, ಮೂರರಿಂದ ಆರು ಬೋಗಿಗಳಿಗೆ ವಿಸ್ತರಣೆ ಆಗಿದೆ. ಇದೆಲ್ಲದರಿಂದಾಗಿ ಸರ್ಕಾರದಿಂದ ಕಡಿಮೆ ಆರ್ಥಿಕ ನೆರವು ಪಡೆಯಲಾಗುತ್ತಿದೆ ಎಂದು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.

ನಷ್ಟದ ಪ್ರಮಾಣ ಶೇ 40
ಈ ನಡುವೆ ನಿಗಮದ ನಷ್ಟದ ಪ್ರಮಾಣವೂ ಶೇ 40ರಷ್ಟು ಹೆಚ್ಚಳವಾಗಿದೆ. ನಿಗಮಕ್ಕೆ 2017-18ರಲ್ಲಿ ₹352.25 ಕೋಟಿ ನಷ್ಟವಾಗಿತ್ತು. ಪ್ರಸಕ್ತ ಸಾಲಿನಲ್ಲಿ ₹498.41 ಕೋಟಿ ನಷ್ಟವಾಗಿದೆ. ಸ್ವತ್ತುಗಳ ಮೌಲ್ಯ ಸವಕಳಿಯಿಂದ ಈ ಪ್ರಮಾಣ ಹೆಚ್ಚಳವಾಗಿದೆ ಎಂದು ನಿಗಮವು ಸ್ಪಷ್ಟಪಡಿಸಿದೆ. ನಿವ್ವಳ ನಗದು ನಷ್ಟದ ಪ್ರಮಾಣ ಕೂಡ ₹29 ಕೋಟಿಯಿಂದ ₹37.58 ಕೋಟಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.