ADVERTISEMENT

ದಾಬಸ್‌ಪೇಟೆವರೆಗೆ ಮೆಟ್ರೊ: ಎಸ್‌.ಆರ್‌.ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 22:31 IST
Last Updated 18 ಜನವರಿ 2020, 22:31 IST
   

ಬೆಂಗಳೂರು: ‘ದಾಬಸ್‌ಪೇಟೆ ಆಹಾರ ಉತ್ಪಾದನೆ ಮತ್ತು ಕೈಗಾರಿಕಾ ಪ್ರದೇಶವಾಗಿದ್ದು, ‘ನಮ್ಮ ಮೆಟ್ರೊ’ ಸೇವೆಯನ್ನು ಅಲ್ಲಿಯವರೆಗೂ ವಿಸ್ತರಿಸುವ ಚಿಂತನೆ ಇದೆ’ ಎಂದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌ ಹೇಳಿದ್ದಾರೆ.

‘ತುಮಕೂರು ರಸ್ತೆಯಲ್ಲಿ ಮೆಟ್ರೊ ವಿಸ್ತರಣೆ ಕಾರ್ಯ ನಡೆಯುತ್ತಿದೆ.ಕೆಲವು ಗ್ರಾಮಗಳಲ್ಲಿ ಇದಕ್ಕೆ ವಿರೋಧವಿದೆ. ಇದೇ 28ರಂದು ಗ್ರಾಮಸ್ಥರ ಸಭೆ ಕರೆದು, ಕಾಮಗಾರಿ ಕುರಿತಂತೆ ಅವರ ಮನವೊಲಿಸಲಾಗುವುದು’ ಎಂದು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕೈಗೆತ್ತಿಕೊಂಡಿರುವ ಉತ್ತರ–ದಕ್ಷಿಣ ಕಾರಿಡಾರ್‌ನ ರೀಚ್‌–3ಸಿ ವಿಸ್ತರಣೆಯ ಮಾರ್ಗವು ನಾಗಸಂದ್ರ ಮೆಟ್ರೊ ನಿಲ್ದಾಣದಿಂದ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದವರೆಗೆ (ಬಿಐಇಸಿ) ಇರಲಿದೆ. ಈ ಕಾಮಗಾರಿಯು 2021ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

ADVERTISEMENT

ಬಿಐಇಸಿಯಿಂದ ದಾಬಸ್‌ಪೇಟೆಯವರೆಗೆ 40 ಕಿ.ಮೀ.ದೂರವಿದೆ. ಇಲ್ಲಿಯವರೆಗೆ ಮೆಟ್ರೊ ಮಾರ್ಗ ವಿಸ್ತರಣೆಯಾದರೆ, ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಗಲಿದ್ದು, ಪ್ರಯಾಣಿಕರ ಸಮಯವೂ ಉಳಿಯಲಿದೆ ಎಂದರು.

‘ಆರು ಬೋಗಿಗಳ ಮತ್ತೆರಡು ರೈಲು’
ಬೆಂಗಳೂರು:
‘ನಮ್ಮ ಮೆಟ್ರೊ’ ಹಸಿರು ಮಾರ್ಗದಲ್ಲಿ ಮೂರು ಬೋಗಿಗಳ ಮತ್ತೆರಡು ರೈಲುಗಳನ್ನು ಆರು ಬೋಗಿಗಳನ್ನಾಗಿ ಪರಿವರ್ತಿಸಲಾಗಿದ್ದು, ಜ.20ರಿಂದ ಇವು ಸಂಚಾರ ಆರಂಭಿಸಲಿವೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಹೇಳಿದೆ.

ಈ ಮೂಲಕ ಒಟ್ಟು 18 ಆರು ಬೋಗಿಗಳ ರೈಲುಗಳು ಈ ಮಾರ್ಗದಲ್ಲಿ ಸಂಚರಿಸಲಿವೆ. ಈ ಆರು ಬೋಗಿಗಳ ರೈಲುಗಳು ಭಾನುವಾರ ಹೊರತುಪಡಿಸಿ ನಿತ್ಯ 137 ಸುತ್ತು ಸಂಚರಿಸಲಿದ್ದು, ಶೇ 97ರಷ್ಟು ಸುತ್ತಿನ ಪ್ರಯಾಣವನ್ನು ಇವು ಒಳಗೊಂಡಿರಲಿವೆ ಎಂದು ನಿಗಮ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.