ADVERTISEMENT

ಯಲಚೇನಹಳ್ಳಿ ವಿಸ್ತರಿತ ಮಾರ್ಗದಲ್ಲಿ ಜ.15ರಿಂದ ಮೆಟ್ರೊ ಸಂಚಾರ ಆರಂಭ

ಕನಕಪುರ ಮಾರ್ಗದಲ್ಲಿ ಹೊಸ ಹುರುಪು: ಹೆಚ್ಚುತ್ತಿದೆ ಆಸ್ತಿ ಮೌಲ್ಯ

ಗುರು ಪಿ.ಎಸ್‌
Published 11 ಜನವರಿ 2021, 19:49 IST
Last Updated 11 ಜನವರಿ 2021, 19:49 IST
ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣದ ನೋಟ– ಪ್ರಜಾವಾಣಿ ಚಿತ್ರ : ಅನೂಪ್ ರಾಘ್. ಟಿ.
ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣದ ನೋಟ– ಪ್ರಜಾವಾಣಿ ಚಿತ್ರ : ಅನೂಪ್ ರಾಘ್. ಟಿ.   

ಬೆಂಗಳೂರು: ‘ನಮ್ಮ ಮೆಟ್ರೊ’ದ ಎರಡನೇ ಹಂತದಲ್ಲಿ ಯಲಚೇನಹಳ್ಳಿ– ಸಿಲ್ಕ್‌ ಇನ್‌ಸ್ಟಿಟ್ಯೂಟ್ ವಿಸ್ತರಿತ ಮಾರ್ಗದಲ್ಲಿ (ರೀಚ್‌ 4ಬಿ) ಜ.15ರಿಂದ ಮೆಟ್ರೊ ರೈಲು ಸಂಚಾರ ಆರಂಭವಾಗುತ್ತಿದ್ದು, ಸ್ಥಳೀಯರಲ್ಲಿ ಹೊಸ ಹುರುಪು ಮೂಡಿಸಿದೆ. ನಿಲ್ದಾಣಗಳ ಬಳಿಯ ಅಂಗಡಿಗಳು, ವಸತಿ ಸಮುಚ್ಚಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಹಲವು ನಿರೀಕ್ಷೆಗಳೊಂದಿಗೆ ಮೆಟ್ರೊ ರೈಲನ್ನು ಸ್ವಾಗತಿಸಲು ಸಜ್ಜಾಗಿವೆ.

ಕನಕಪುರ ರಸ್ತೆಯಲ್ಲಿನ 6.29 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಐದು ನಿಲ್ದಾಣಗಳು ಬರಲಿವೆ. ಎಲ್ಲ ನಿಲ್ದಾಣಗಳಲ್ಲಿ ಅಂತಿಮ ಸಿದ್ಧತೆ ಭರದಿಂದ ಸಾಗಿದೆ. ಈ ಮಾರ್ಗದಲ್ಲಿನ ಪಿಲ್ಲರ್‌ಗಳ ನಡುವಣ ಜಾಗವನ್ನು ಸ್ವಚ್ಛಗೊಳಿಸುವುದು, ಆಲಂಕಾರಿಕ ಸಸಿಗಳನ್ನು ನೆಡುವುದು, ಗೇಟ್‌ಗಳಿಗೆ ಬಣ್ಣ ಬಳಿಯುವ ಪ್ರಕ್ರಿಯೆಯೂ ಜೋರಾಗಿ ನಡೆದಿದ್ದರೆ, ಮೆಟ್ರೊ ಸಂಚಾರದಿಂದ ಆಗುವ ಅನುಕೂಲಗಳನ್ನು ಸ್ಥಳೀಯರು ನೆನೆಯುತ್ತಿದ್ದಾರೆ.

ಫಾಲ್ಕನ್‌ಸಿಟಿ, ಗೋಪಾಲನ್‌ ಪರ್ಲ್ಸ್‌, ಗೋಕುಲಂ, ಮಂತ್ರಿ ಸೆರೆನಿಟಿ ಮತ್ತು ಮಂತ್ರಿ ಟ್ರಾಂಕ್ಯುಲ್, ಶೋಭಾ ಫಾರೆಸ್ಟ್‌ ವ್ಯೂ, ನಿತೇಶ್‌ ಎಸ್ಟೇಟ್ಸ್‌ ಎಲ್ಲ ಇದೆ. ಝೆಡ್‌ ಟೋಟಲ್‌ ಎನ್ವಿರಾನ್ಮೆಂಟ್‌ ಸೇರಿದಂತೆ ಹಲವು ವಸತಿ ಅಪಾರ್ಟ್‌ಮೆಂಟ್‌ಗಳು ಇದ್ದು, ಮೆಟ್ರೊ ಸೇವೆಯಿಂದ ಸಾಕಷ್ಟು ಸಮಯ ಉಳಿಯಲಿದೆ ಎಂದು ನಿವಾಸಿಗಳು ಸಂತಸ ವ್ಯಕ್ತಪಡಿಸಿದರು.

ADVERTISEMENT

ಕುಮಾರನ್‌ ಸ್ಕೂಲ್‌, ಕೆಎಸ್‌ಐಟಿ, ಯಲ್ಲಮ್ಮದಾಸಪ್ಪ ಐಟಿ ಕಾಲೇಜು ಸೇರಿದಂತೆ ಹಲವು ಶಾಲಾ–ಕಾಲೇಜುಗಳ ಈ ಮಾರ್ಗದಲ್ಲಿದ್ದು, ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ.

ವಾಜರಹಳ್ಳಿ ನಿಲ್ದಾಣದ ಹೊರ ನೋಟ. ಪ್ರಜಾವಾಣಿ ಚಿತ್ರ: ಅನೂಪ್ ರಾಘ್. ಟಿ.

‘ಬಸ್‌ನಲ್ಲಿ ಹೆಚ್ಚು ದಟ್ಟಣೆ ಇದ್ದರೆ, ಅಟೊಗಳಲ್ಲಿ ಒಬ್ಬರೇ ಕಾಲೇಜಿಗೆ ಹೋಗುವುದಕ್ಕೆ ಆತಂಕವಾಗುತ್ತಿತ್ತು. ಮೆಟ್ರೊ ರೈಲು ಸೇವೆ ಆರಂಭವಾಗಿರುವುದು ಒಂಟಿ ಯುವತಿಯರು ಅಥವಾ ಮಹಿಳೆಯರು ನಿರಾತಂಕವಾಗಿ ಪ್ರಯಾಣ ಮಾಡಬಹುದು’ ಎಂದು ಕಾಲೇಜು ವಿದ್ಯಾರ್ಥಿನಿ ಭಾವನಾ ಹೇಳಿದರು.

ಆಸ್ತಿ ಮೌಲ್ಯ ಹೆಚ್ಚಳ:‘ಈ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಆರಂಭವಾಗುತ್ತದೆ ಎಂದಾಗಲೇ ಕನಕಪುರ ರಸ್ತೆಯಲ್ಲಿ ನಿವೇಶನ ಅಥವಾ ಮನೆಗಳ ಬೆಲೆ ಹೆಚ್ಚಾಗಿತ್ತು. ಸಂಚಾರ ಆರಂಭವಾಗುತ್ತಿರುವುದರಿಂದ ಮೆಟ್ರೊ ನಿಲ್ದಾಣಗಳಿಗೆ ತೀರಾ ಹತ್ತಿರವಿರುವ ಮನೆಗಳ ಬಾಡಿಗೆ ಹೆಚ್ಚಾಗುತ್ತಿದೆ’ ಎಂದು ವಾಜರಹಳ್ಳಿ ನಿವಾಸಿ ನಾರಾಯಣಗೌಡ ಹೇಳಿದರು.

‘ನಮ್ಮ ಮನೆ ‘ಜಿಂಕೆ ಮನೆ’ ಎಂದೇ ಖ್ಯಾತವಾಗಿತ್ತು. ಆದರೆ, ಮೆಟ್ರೊಗಾಗಿ ಜಾಗವನ್ನು ನೀಡಬೇಕಾಯಿತು. ಮನೆ ‘ಆ್ಯಂಟಿಕ್‌ ಪೀಸ್’ ಎಂದು ಹೇಳಿದ್ದರಿಂದ ಚದರ ಅಡಿಗೆ ₹14 ಸಾವಿರದಂತೆ ಪರಿಹಾರ ನೀಡಿದ್ದಾರೆ. ಉಳಿದವರಿಗೂ ಉತ್ತಮ ಪರಿಹಾರ ದೊರೆತಿದೆ. ಮನೆ ಹೋಗಿರುವುದಕ್ಕೆ ಬೇಸರವಿದೆ. ಆದರೆ, ಮೆಟ್ರೊ ರೈಲು ಸಂಚಾರ ಪ್ರಾರಂಭವಾಗಿರುವುದಕ್ಕೆ ಸಂತಸವಿದೆ’ ಎಂದರು.

ಪರೀಕ್ಷಾರ್ಥ ಸಂಚಾರ, ಪರಿಶೀಲನೆ:ವಾಣಿಜ್ಯ ಸಂಚಾರ ಆರಂಭಕ್ಕೆ ನಾಲ್ಕೇ ದಿನಗಳು ಬಾಕಿ ಇರುವುದರಿಂದ ನಿಲ್ದಾಣಗಳಲ್ಲಿ ಸಿದ್ಧತೆ ಜೋರಾಗಿದೆ. ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲ ನೌಕರರಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಕಾರ್ಯ ಸಾಗುತ್ತಿತ್ತು. ಸೋಮವಾರ ಬೆಳಿಗ್ಗೆ ಕೋಣನಕುಂಟೆ ಕ್ರಾಸ್‌ ಮೆಟ್ರೊ ನಿಲ್ದಾಣಕ್ಕೆ ಭೇಟಿ ನೀಡಿದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌, ಪರಿಶೀಲನೆ ನಡೆಸಿ ಸಿಬ್ಬಂದಿಗೆ ಅಗತ್ಯ ಸಲಹೆ–ಸೂಚನೆ ನೀಡಿದರು.

ಸಂಜೆ 4 ಗಂಟೆಯ ವೇಳೆಗೆ ಕೋಣನಕುಂಟೆ ಮೆಟ್ರೊ ನಿಲ್ದಾಣದಿಂದ ಸಿಲ್ಕ್‌ ಇನ್‌ಸ್ಟಿಟ್ಯೂಟ್ ನಿಲ್ದಾಣದವರೆಗೆ ಮೆಟ್ರೊ ರೈಲು ಪರೀಕ್ಷಾರ್ಥ ಸಂಚಾರ ನಡೆಯಿತು.

‘ಹೆಚ್ಚಲಿದೆ ಪಾರ್ಕಿಂಗ್‌ ಸಮಸ್ಯೆ’

‘ಹೊಸ ನಿಲ್ದಾಣಗಳ ಬಳಿ ವಾಹನ ನಿಲುಗಡೆ ಸೌಲಭ್ಯವನ್ನೇ ಕಲ್ಪಿಸಿಲ್ಲ. ಯಲಚೇನಹಳ್ಳಿ ನಿಲ್ದಾಣಕ್ಕೆ ಬರಬೇಕಾಗುತ್ತದೆ. ದ್ವಿಚಕ್ರ ಅಥವಾ ಕಾರುಗಳಲ್ಲಿ ಬಂದು, ನಂತರ ಮೆಟ್ರೊ ರೈಲು ಬಳಸುವವರಿಗೆ ಅನನುಕೂಲವಾಗಲಿದೆ’ ಎಂದು ಕೋಣನಕುಂಟೆ ನಿವಾಸಿ ಎ. ಭಾನು ಹೇಳಿದರು.

‘ನಿಲ್ದಾಣ ನಿರ್ಮಿಸಿದ ಮೆಲೆ ಅದಕ್ಕೆ ಪೂರಕವಾದ ವ್ಯವಸ್ಥೆಯನ್ನು ಬಿಎಂಆರ್‌ಸಿಎಲ್‌ ಕಲ್ಪಿಸಬೇಕಾಗಿತ್ತು. ಆದರೆ, ಇಲ್ಲಿ ಜಾಗವೇ ಇಲ್ಲ. ಫೀಡರ್‌ ಬಸ್‌ ವ್ಯವಸ್ಥೆ ಮಾಡಲಾಗುವುದು ಎಂದು ನಿಗಮ ಹೇಳುತ್ತದೆ. ಆದರೆ, ವಾಹನ ತರುವವರು ಅಲ್ಲಲ್ಲಿಯೇ ನಿಲ್ಲಿಸುವುದರಿಂದ ದಟ್ಟಣೆ ಹೆಚ್ಚಲಿದೆ’ ಎಂದರು.

‘ಮುಖ್ಯವಾಗಿ ಕೋಣನಕುಂಟೆ ಕ್ರಾಸ್‌ ಬಳಿ ಜನ ಮತ್ತು ವಾಹನ ದಟ್ಟಣೆ ಹೆಚ್ಚಲಿದೆ. ಪುಟ್ಟೇನಹಳ್ಳಿ, ಗೊಟ್ಟಿಗೆರೆ ಕಡೆಗೆ ಹೋಗುವವರು ಆಟೊ ಅಥವಾ ಬಸ್‌ಗಳಲ್ಲಿ ಇಲ್ಲಿಗೇ ಬರಬೇಕು. ಅಲ್ಲದೆ, ಇಲ್ಲಿಯೇ ಫೋರಂ ಹೈಪರ್ ಮಾರ್ಟ್‌, ಕನ್ವೆನ್ಷನ್‌ ಸೆಂಟರ್‌ಗಳು ನಿರ್ಮಾಣವಾಗುವುದರಿಂದ ದಟ್ಟಣೆ ಹೆಚ್ಚಾಗಲಿದೆ. ಈ ನಿಲ್ದಾಣದ ಬಳಿ ಕೆಳಸೇತುವೆ ನಿರ್ಮಿಸುವ ಅಗತ್ಯವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.