ADVERTISEMENT

ಮೆಟ್ರೊ: ಡಿಸೆಂಬರ್‌ ತಿಂಗಳಲ್ಲಿ 2 ಕೋಟಿ ದಾಟಿದ ಪ್ರಯಾಣಿಕರ ಸಂಖ್ಯೆ!

ಮಾರ್ಗ ವಿಸ್ತರಣೆಗೊಂಡ ಬಳಿಕ ದಟ್ಟಣೆ : ರೈಲುಗಳ ಸಂಖ್ಯೆ ಹೆಚ್ಚಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 18:38 IST
Last Updated 10 ಜನವರಿ 2024, 18:38 IST
ಮೆಟ್ರೊ ಪ್ರಯಾಣಿಕರು
ಮೆಟ್ರೊ ಪ್ರಯಾಣಿಕರು   

ಬೆಂಗಳೂರು: ಬೈಯಪ್ಪನಹಳ್ಳಿ–ಕೆ.ಆರ್‌.‍ಪುರ ನಡುವೆ ಬಾಕಿ ಉಳಿದಿದ್ದ ಕಾಮಗಾರಿ ಪೂರ್ಣಗೊಂಡ ಬಳಿಕ ಮೆಟ್ರೊ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಡಿಸೆಂಬರ್‌ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆ 2 ಕೋಟಿ ದಾಟಿದೆ.

ನಿತ್ಯ 6.88 ಲಕ್ಷ ಮಂದಿ ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದಾರೆ. ಕೆಂಗೇರಿ–ವೈಟ್‌ಫೀಲ್ಡ್‌ ಮಾರ್ಗದ ನಡುವೆ ಬಾಕಿ ಉಳಿದಿದ್ದ ಬೈಯಪ್ಪನಹಳ್ಳಿ–ಕೆ.ಆರ್.ಪುರ ನಡುವಿನ ಕಾಮಗಾರಿ ಪೂರ್ಣಗೊಂಡು, ಅಕ್ಟೋಬರ್ 9ರಿಂದ ಸಂಚಾರ ಆರಂಭವಾಗಿದ್ದು ಹಾಗೂ ನೇರಳ ಮಾರ್ಗದಲ್ಲಿ ಕೆಂಗೇರಿ–ಚಲ್ಲಘಟ್ಟ ನಡುವೆ 2.10 ಕಿ.ಮೀ ಕಾಮಗಾರಿ ಪೂರ್ಣಗೊಂಡಿದ್ದರಿಂದ ಪ್ರಯಾಣಿಕರ ಸಂಖ್ಯೆ ಒಮ್ಮೆಲೇ ಹೆಚ್ಚಾಗಿತ್ತು.

ಪ್ರಸ್ತುತ ವಾರಾಂತ್ಯ ಹೊರತುಪಡಿಸಿ ಉಳಿದ ದಿನಗಳಲ್ಲಿ 7 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ನವೆಂಬರ್‌ನಲ್ಲಿ 1.99 ಕೋಟಿ ಜನರು ಪ್ರಯಾಣಿಸಿದ್ದರು. ಡಿಸೆಂಬರ್‌ನಲ್ಲಿ ಮೆಟ್ರೊ ಪ್ರಯಾಣಿಕರ ಸಂಖ್ಯೆ 2.13 ಕೋಟಿಗೆ ತಲುಪಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಡಿಸೆಂಬರ್‌ನಲ್ಲಿ ರಜಾದಿನಗಳು ಹೆಚ್ಚಿದ್ದರಿಂದ ನಿತ್ಯ ಪ್ರಯಾಣಿಸುವವರ ಪ್ರಮಾಣ ಸರಾಸರಿ 7 ಲಕ್ಷಕ್ಕೆ ತಲುಪಿಲ್ಲ. ಜನವರಿಯಲ್ಲಿ ತಲುಪುವ ನಿರೀಕ್ಷೆ ಇದೆ. ಮೆಟ್ರೊ ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ಮಾದಾವರವರೆಗೆ 3.7 ಕಿ.ಮೀ.ವರೆಗಿನ ಕಾಮಗಾರಿ ಮುಕ್ತಾಯಗೊಂಡರೆ ಮತ್ತೆ 50 ಸಾವಿರ ಪ್ರಯಾಣಿಕರು ಮೆಟ್ರೊ ಅವಲಂಬಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೆಚ್ಚಿದ ದಟ್ಟಣೆ: ಮೆಟ್ರೊ ಮಾರ್ಗ ವಿಸ್ತರಣೆಗೊಂಡ ಬಳಿಕ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ವಾರದ ದಿನಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ನೇರಳೆ ಮಾರ್ಗದಲ್ಲಿ ನಿಂತುಕೊಳ್ಳಲೂ ಜಾಗ ಇಲ್ಲದಷ್ಟು ಸಂದಣಿ ಉಂಟಾಗುತ್ತಿದ್ದು, ರೈಲುಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಚೀನಾದ ಸಿಆರ್‌ಆರ್‌ ನಂಜಿಂಗ್‌ ಪುಝೆನ್‌ ಕೊ ಲಿ ಕಂಪನಿಯ 216 ಕೋಚ್‌ಗಳನ್ನು ಬಿಎಂಆರ್‌ಸಿಎಲ್‌ಗೆ ಪೂರೈಕೆ ಮಾಡಲಿದೆ. ಅಲ್ಲಿವರೆಗೆ ರೈಲುಗಳ ಸಂಖ್ಯೆ ಹೆಚ್ಚಿಸುವುದು ಕಷ್ಟ. ಈಗಿರುವ ರೈಲುಗಳೇ ಹೆಚ್ಚು ಟ್ರಿಪ್‌ ಮಾಡುತ್ತಿವೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.