ADVERTISEMENT

ರಿಯಾಯಿತಿ ಪ್ರಮಾಣ ಇಳಿಕೆ: ಪ್ರಯಾಣಿಕರ ಕಿಡಿ

ನಮ್ಮ ಮೆಟ್ರೊ ಸ್ಮಾರ್ಟ್‌ಕಾರ್ಡ್‌ ರಿಯಾಯಿತಿ ಶೇ 15ರಿಂದ ಶೇ 5ಕ್ಕೆ ಇಳಿಸಲು ಮುಂದಾಗಿರುವ ನಿಗಮ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 20:00 IST
Last Updated 9 ಜನವರಿ 2020, 20:00 IST
ಮೆಟ್ರೊ
ಮೆಟ್ರೊ   

ಬೆಂಗಳೂರು: ‘ನಮ್ಮ ಮೆಟ್ರೊ’ ಸ್ಮಾರ್ಟ್‌ ಕಾರ್ಡ್‌ ರಿಯಾಯಿತಿ ಪ್ರಮಾಣವನ್ನು ಶೇ 15ರಿಂದ ಶೇ5ಕ್ಕೆ ಇಳಿಸಲು ಮುಂದಾಗಿರುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ನಿರ್ಧಾರಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ. ತಮ್ಮ ತಪ್ಪುಗಳಿಂದಾದ ನಷ್ಟವನ್ನು ತುಂಬಿಕೊಳ್ಳಲು ಅಧಿಕಾರಿಗಳು ಪ್ರಯಾಣಿಕರ ಮೇಲೆ ಹೊರೆ ಹಾಕಲು ಮುಂದಾಗಿದ್ದಾರೆ ಎಂದೂ ಸಾರ್ವಜನಿಕರು ದೂರಿದ್ದಾರೆ.

‘ರಿಯಾಯಿತಿ ಪ್ರಮಾಣವನ್ನು ಕಡಿತಗೊಳಿಸಿದರೆ ಹೆಚ್ಚು ಜನ ಸ್ಮಾರ್ಟ್‌ಕಾರ್ಡ್‌ ಬದಲು ಟೋಕನ್‌ಗಳನ್ನು ಪಡೆಯಲು ಮುಂದಾಗುತ್ತಾರೆ. ಆಗ, ಹೆಚ್ಚು ಟೋಕನ್‌ ತಯಾರಿಸುವುದರ ಜೊತೆಗೆ, ಅವುಗಳನ್ನು ವಿತರಿಸಲು ಹೆಚ್ಚು ಕೌಂಟರ್‌ಗಳನ್ನು ತೆರೆಯಬೇಕಾಗುತ್ತದೆ. ಹೆಚ್ಚು ಕೌಂಟರ್‌ಗಳನ್ನು ತೆರೆಯುವುದರಿಂದ ಹೆಚ್ಚು ಸಿಬ್ಬಂದಿ ಬೇಕಾಗುತ್ತಾರೆ. ಇದರಿಂದ ನಿಗಮಕ್ಕೆ ಪರೋಕ್ಷವಾಗಿ ನಷ್ಟವೇ ಆಗುತ್ತದೆ’ ಎಂದು ಪ್ರಯಾಣಿಕ ಡಾ. ಎ. ಭಾನು ಹೇಳುತ್ತಾರೆ.

‘ಸರದಿಯಲ್ಲಿ ನಿಲ್ಲುವುದು ತಪ್ಪುತ್ತದೆ ಎಂಬ ಉದ್ದೇಶದಿಂದ ಮಾತ್ರ ಜನ ಸ್ಮಾರ್ಟ್‌ಕಾರ್ಡ್‌ ಖರೀದಿಸಲು ಬಯಸುವುದಿಲ್ಲ. ಸ್ವಲ್ಪ ಲಾಭವಾಗುತ್ತದೆ ಎಂಬ ಉದ್ದೇಶವೂ ಸ್ಮಾರ್ಟ್‌ಕಾರ್ಡ್‌ ಖರೀದಿಯ ಹಿಂದಿರುತ್ತದೆ. ಇದರಿಂದ ಪ್ರಯಾಣಿಕರು ಮತ್ತು ನಿಗಮಕ್ಕೂ ಲಾಭವಾಗುತ್ತದೆ’ ಎಂದು ಅವರು ಹೇಳುತ್ತಾರೆ.

ADVERTISEMENT

‘ಎಲ್ಲ ಮಾರ್ಗಗಳಲ್ಲಿ ಆರು ಬೋಗಿಗಳ ರೈಲುಗಳು ಸಂಚರಿಸುತ್ತಿರುವುದರಿಂದ ₹60 ಕೋಟಿ ನಷ್ಟವಾಗಿದೆ. ಇದನ್ನು ಸರಿದೂಗಿಸಲು ರಿಯಾಯಿತಿ ಪ್ರಮಾಣ ಕಡಿತಗೊಳಿಸಲಾಗುತ್ತಿದೆ ಎಂದು ನಿಗಮ ಕಾರಣ ಕೊಟ್ಟಿದೆ. ಆದರೆ, ಎಲ್ಲ ಮಾರ್ಗಗಳಲ್ಲಿ ಆರು ಬೋಗಿಗಳು ಸಂಚರಿಸಲು ಆರಂಭವಾಗಿ ತಿಂಗಳೂ ಆಗಿಲ್ಲ. ಇಷ್ಟು ಬೇಗ ಅಷ್ಟು ನಷ್ಟ ಹೇಗೆ ಸಂಭವಿಸಿತು’ ಎಂದುರೈಲ್ವೆ ಹೋರಾಟಗಾರ ಸಂಜೀವ ದ್ಯಾಮಣ್ಣನವರ್ ಪ್ರಶ್ನಿಸಿದ್ದಾರೆ.

‘ಮೆಟ್ರೊ ನಿಲ್ದಾಣ ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿ, ಅದರಿಂದ ಶುಲ್ಕ ಸಂಗ್ರಹಿಸುವ ಮೂಲಕ ವರಮಾನ ಸಂಗ್ರಹಿಸಬಹುದು. ಅಲ್ಲದೆ, ಮೆಟ್ರೊ ಪಿಲ್ಲರ್‌ಗಳ ಮೇಲೆ ಜಾಹೀರಾತು ನೀಡಲು ಅವಕಾಶ ಕೊಡುವ ಮೂಲಕವೂ ಆದಾಯ ಗಳಿಸಬಹುದು. ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆಯುಕ್ತರ ಜೊತೆ ಕೂತು ನಿಗಮದ ಅಧಿಕಾರಿಗಳು ಈ ಕುರಿತು ಚರ್ಚಿಸಬಹುದು. ಸರ್ಕಾರದ ಸಂಸ್ಥೆ ಆಗಿರುವುದರಿಂದ ಜಾಹೀರಾತು ಪಡೆಯಲು ಯಾವುದೇ ಅಡ್ಡಿಯಾಗಲಾರದು’ ಎಂದು ಅವರು ಹೇಳಿದರು.

‘ನಿಗಮದ ಈ ನಿರ್ಧಾರದಿಂದ ಟೋಕನ್‌ಗಳ ಬಳಕೆ ಹೆಚ್ಚಾಗಲಿದೆ. ಪ್ರಯಾಣಿಕರು ಇವುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಟೋಕನ್‌ಗಳನ್ನು ಮುದ್ರಿಸಬೇಕು. ಅಲ್ಲದೆ, ಸಿಬ್ಬಂದಿಯು ನಿತ್ಯ ಇವುಗಳ ಲೆಕ್ಕವನ್ನು ಕೊಡಬೇಕಾಗುವುದರಿಂದ ಅವರಿಗೆ ಕೆಲಸದ ಹೊರೆಯೂ ಹೆಚ್ಚುತ್ತದೆ’ ಎಂದು ಪ್ರಯಾಣಿಕ ರಮೇಶ್‌ಕುಮಾರ್‌ ಹೇಳಿದರು.

ಉತ್ತಮ ನಿರ್ಧಾರ:‘ನಮ್ಮ ಮೆಟ್ರೊ ಉತ್ತಮ ಸೇವೆ ನೀಡುತ್ತಿದೆ. ನಿಗಮ ಹೆಚ್ಚು ಸೌಲಭ್ಯ ನೀಡಲು ಅದು ಆರ್ಥಿಕವಾಗಿ ಸಬಲವಾಗಿರಬೇಕು. ರಿಯಾಯಿತಿ ಪ್ರಮಾಣ ಇಳಿಕೆ ಮಾಡಿರುವುದು ಉತ್ತಮ ನಿರ್ಧಾರ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಹೊರೆಯೇನೂ ಆಗುವುದಿಲ್ಲ’ ಎಂದು ಪ್ರಯಾಣಿಕರಾದ ಭಾಗ್ಯಲಕ್ಷ್ಮಿ ಹೇಳಿದರು.

ಜನಪ್ರತಿನಿಧಿಗಳ ಮೌನ: ಅಸಮಾಧಾನ

ರಿಯಾಯಿತಿ ಪ್ರಮಾಣವನ್ನು ಕಡಿತಗೊಳಿಸುವುದಾಗಿ ನಿಗಮ ಹೇಳಿದ ನಂತರವೂ, ಯಾವುದೇ ಜನಪ್ರತಿನಿಧಿ ಮಾತನಾಡಿಲ್ಲ. ಮುಖ್ಯಮಂತ್ರಿ, ಸಚಿವರು, ಬೆಂಗಳೂರಿನ ಸಂಸದರು ಮತ್ತು ಶಾಸಕರು ಮೌನಕ್ಕೆ ಶರಣಾಗಿರುವುದು ಸರಿಯಲ್ಲ ಎಂದು ಸಂಜೀವ ದ್ಯಾಮಣ್ಣನವರ್‌ ಅಸಮಾಧಾನ ವ್ಯಕ್ತಪಡಿಸಿದರು.

‘ನಿಗಮದ ಅಧಿಕಾರಿಗಳು ಮನಬಂದಂತೆ ವರ್ತಿಸುತ್ತಿದ್ದಾರೆ. ಸರ್ಕಾರದ ಹಣದಿಂದ ನಡೆಯುತ್ತಿರುವ ಸಂಸ್ಥೆ ಅದು. ಲಾಭಕ್ಕಿಂತ ಹೆಚ್ಚಾಗಿ ಸೇವೆಯ ಕಡೆಗೆ ಒತ್ತು ನೀಡಬೇಕು. ಅಧಿಕಾರಿಗಳನ್ನು ನಿಯಂತ್ರಿಸುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

***

ಸ್ಮಾರ್ಟ್‌ಕಾರ್ಡ್‌ ರಿಯಾಯತಿ ಪ್ರಮಾಣವನ್ನು ಕಡಿತಗೊಳಿಸಿರುವ ನಿಗಮದ ನಿರ್ಧಾರ ಸರಿಯೇ ?

ಪ್ರತಿಕ್ರಿಯಿಸಿ: 96060–38256

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.