ADVERTISEMENT

ರಿಚಾರ್ಜ್‌ ಮಾಡಿಸಲು ಪ್ರಯಾಣಿಕರ ಪರದಾಟ

‘ನಮ್ಮ ಮೆಟ್ರೊ’ ಸ್ಮಾರ್ಟ್‌ಕಾರ್ಡ್ ಕನಿಷ್ಠ ಮೊತ್ತ ಹೆಚ್ಚಿಸಿದರು– ಸಿಬ್ಬಂದಿ ಕಡಿತಗೊಳಿಸಿದರು!

ಪ್ರವೀಣ ಕುಮಾರ್ ಪಿ.ವಿ.
Published 4 ಏಪ್ರಿಲ್ 2019, 19:49 IST
Last Updated 4 ಏಪ್ರಿಲ್ 2019, 19:49 IST
   

ಬೆಂಗಳೂರು: ‘ನಮ್ಮ ಮೆಟ್ರೊ’ ಸ್ಮಾರ್ಟ್‌ಕಾರ್ಡ್‌ನಲ್ಲಿ ಕನಿಷ್ಠ ₹ 50 ಮೊತ್ತವಿಲ್ಲದಿದ್ದರೆ ಪ್ರಯಾಣಕ್ಕೆ ಅವಕಾಶ ನಿರಾಕರಿಸುವ ನಿಯಮ ಜಾರಿಗೊಳಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌), ಅದಕ್ಕೆ ಪೂರಕವಾ‌ಗಿ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸುವ ಬದಲು ಕಡಿತಗೊಳಿಸಿದೆ. ಸಿಬ್ಬಂದಿ ಕಡಿತದಿಂದಾಗಿ ಪ್ರಯಾಣಿಕರು ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ.

ಈ ಹಿಂದೆ ‘ನಮ್ಮ ಮೆಟ್ರೊ’ ಪಾವತಿ ಪ್ರದೇಶದ ಗೇಟ್‌ಗಳ ಪಕ್ಕದಲ್ಲಿರುವ ಗ್ರಾಹಕರ ಸೇವಾ ಘಟಕಗಳಲ್ಲೂ ಸ್ಮಾರ್ಟ್‌ಕಾರ್ಡ್‌ಗಳಿಗೆ ರಿಚಾರ್ಜ್‌ ಮಾಡಿಸಿಕೊಳ್ಳುವುದಕ್ಕೆ ಅವಕಾಶವಿತ್ತು. ಆದರೆ, ಫೆಬ್ರುವರಿ ತಿಂಗಳಿಂದ ಈ ಸೌಕರ್ಯವನ್ನೂ ಹಿಂದಕ್ಕೆ ಪಡೆಯಲಾಗಿದೆ. ಹಾಗಾಗಿ ಪ್ರಯಾಣಿಕರು ಸ್ಮಾರ್ಟ್‌ಕಾರ್ಡ್‌ಗೆ ರಿಚಾರ್ಜ್‌ ಮಾಡಿಕೊಳ್ಳಲು ಟಿಕೆಟ್‌ ಕೌಂಟರ್‌ಗೆ ತೆರಳಬೇಕಾಗಿದೆ.

‘ಬೈಯಪ್ಪನಹಳ್ಳಿ ಮೆಟ್ರೊನಿಲ್ದಾಣದಲ್ಲಿ ಪಶ್ಚಿಮ ಹಾಗೂ ಪೂರ್ವ ದಿಕ್ಕುಗಳಲ್ಲಿ ಟಿಕೆಟ್‌ ಕೌಂಟರ್‌ಗಳಿವೆ. ಇತ್ತೀಚೆಗೆ ಸಿಬ್ಬಂದಿ ಕಡಿತದ ನೆಪದಲ್ಲಿ ಪಶ್ಚಿಮ ದಿಕ್ಕಿನ ಕೌಂಟರ್‌ ಮುಚ್ಚಲಾಗಿದೆ. ಪಶ್ಚಿಮ ದಿಕ್ಕಿನ ಮೂಲಕ ನಿಲ್ದಾಣ ಪ್ರವೇಶಿಸುವ ಪ್ರಯಾಣಿಕರು ಸ್ಮಾರ್ಟ್‌ಕಾರ್ಡ್‌ನಲ್ಲಿ ₹ 50 ಇಲ್ಲದಿದ್ದರೆ, ರಿಚಾರ್ಜ್‌ ಮಾಡಿಸಲು ಒಂದು ಹಂತ ಕೆಳಕ್ಕೆ ಇಳಿದು, ಪೂರ್ವ ದಿಕ್ಕಿನ ಕೌಂಟರ್‌ಗೆ ತೆರಳಬೇಕು’ ಎಂದು ಪ್ರಯಾಣಿಕರೊಬ್ಬರು ದೂರಿದರು.

ADVERTISEMENT

‘ತ್ವರಿತ ಸೇವೆ ಒದಗಿಸುವ ಉದ್ದೇಶದಿಂದ ಸ್ಮಾರ್ಟ್‌ಕಾರ್ಡ್‌ನಲ್ಲಿ ₹ 50 ಕನಿಷ್ಠ ಮೊತ್ತ ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳುತ್ತಾರೆ. ಇಲ್ಲಿ ನೋಡಿದರೆ ನಾವು ರಿಚಾರ್ಜ್ ಮಾಡಿಸಲು ವೃಥಾ ಅಲೆದಾಡುವ ಪರಿಸ್ಥಿತಿ ಇದೆ’ ಎಂದು ಮೆಟ್ರೊ ಪ್ರಯಾಣಿಕ ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.

ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೊನಿಲ್ದಾಣದಲ್ಲಿ ಪಶ್ಚಿಮ ದ್ವಾರ, ಚಿಕ್ಕಲಾಲ್‌ಬಾಗ್‌ ಕಡೆಯ ಪ್ರವೇಶ ದ್ವಾರ ಹಾಗೂ ಕೆಎಸ್‌ಆರ್‌ಟಿಸಿ ನಿಲ್ದಾಣದ ಕಡೆಯ ಪ್ರವೇಶದ್ವಾರಗಳ ಬಳಿ ಇರುವ
ಟಿಕೆಟ್‌ ಕೌಂಟರ್‌ಗಳಲ್ಲಿ ಪ್ರತಿ ಪಾಳಿಯಲ್ಲಿ ತಲಾ ಇಬ್ಬರು ಸಿಬ್ಬಂದಿ ಇರುತ್ತಿದ್ದರು. ಈಗ ಕೇವಲ ಒಬ್ಬ ಸಿಬ್ಬಂದಿ ಇರುತ್ತಾರೆ.

ಸಿಬ್ಬಂದಿ ಕಡಿತದಿಂದ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವುದಕ್ಕೆ ಸಮಸ್ಯೆ ಆಗಿದೆ ಎಂಬುದನ್ನು ಇಲ್ಲಿ ಕಾರ್ಯ
ನಿರ್ವಹಿಸುವ ಸಿಬ್ಬಂದಿಯೂ ಒಪ್ಪಿಕೊಳ್ಳುತ್ತಾರೆ.

ನಗದು ಸ್ವೀಕರಿಸಿ ರಿಚಾರ್ಜ್‌

ಕೆಲವು ಕೌಂಟರ್‌ಗಳಲ್ಲಿ ನಗದು ಸ್ವೀಕರಿಸಿ ರಿಚಾರ್ಜ್‌ ಮಾಡುವ ವ್ಯವಸ್ಥೆ ಮಾತ್ರ ಇದೆ. ಡೆಬಿಟ್ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸಿ ರಿಚಾರ್ಜ್‌ ಮಾಡುವುದಕ್ಕೆ ಬೇಕಾದ ಸ್ವೈಪಿಂಗ್ ಯಂತ್ರಗಳು ಎಲ್ಲ ಟಿಕೆಟ್‌ ಕೌಂಟರ್‌ಗಳಲ್ಲಿ ಇಲ್ಲ.

‘ಹೊಸಹಳ್ಳಿ ಮೆಟ್ರೊನಿಲ್ದಾಣದಲ್ಲಿ ಪಶ್ಚಿಮ ಹಾಗೂ ಪೂರ್ವ ದ್ವಾರಗಳ ಬಳಿ ಟಿಕೆಟ್‌ ಕೌಂಟರ್‌ಗಳಿವೆ. ಆದರೆ, ಪೂರ್ವ ದಿಕ್ಕಿನ ಟಿಕೆಟ್‌ ಕೌಂಟರ್‌ನಲ್ಲಿ ಸ್ವೈಪಿಂಗ್‌ ಯಂತ್ರ ಇಲ್ಲ’ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

‘ನಾನು ಮಂಗಳವಾರ ತುರ್ತಾಗಿ ಎಂ.ಜಿ.ರಸ್ತೆಗೆ ಹೋಗಬೇಕಿತ್ತು. ನನ್ನ ಬಳಿ ಇದ್ದ ಮೆಟ್ರೊ ಸ್ಮಾರ್ಟ್‌ಕಾರ್ಡ್‌ನಲ್ಲಿ ₹ 50 ಇರಲಿಲ್ಲ. ನನ್ನ ಬಳಿ ಹೆಚ್ಚು ಹಣವೂ ಇರಲಿಲ್ಲ. ಡೆಬಿಟ್‌ ಕಾರ್ಡ್‌ ಬಳಸಿ ರಿಚಾರ್ಜ್‌ ಮಾಡಿಸಿಕೊಳ್ಳೋಣವೆಂದರೆ ಪೂರ್ವ ದ್ವಾರದ ಬಳಿಯ ಟಿಕೆಟ್‌ ಕೌಂಟರ್‌ನಲ್ಲಿ ಬಳಿ ಸ್ವೈಪಿಂಗ್‌ ಯಂತ್ರವೂ ಇರಲಿಲ್ಲ’ ಎಂದುಪ್ರಯಾಣಿಕರಾದ ಜ್ಯೋತಿ ದೂರಿದರು.

‘ಡೆಬಿಟ್‌ ಕಾರ್ಡ್‌ ಬಳಸಿ ರೀಚಾರಜ್‌ ಮಾಡಿಸಿಕೊಳ್ಳಬೇಕಾದರೆ ಪಶ್ಚಿಮ ದಿಕ್ಕಿನ ಕೌಂಟರ್‌ಗೆ ಹೋಗಬೇಕು ಎಂದು ಸಿಬ್ಬಂದಿ ತಿಳಿಸಿದರು. ಈ ಸಲುವಾಗಿ ನಾನು ಪೂರ್ವ ಪ್ರವೇಶ ದ್ವಾರದ ಮೆಟ್ಟಿಲು ಇಳಿದು ಪಶ್ಚಿಮ ದ್ವಾರದ ಮೂಲಕ ಮತ್ತೆ ಮೆಟ್ಟಿಲು ಹತ್ತಿ ಅಲ್ಲಿನ ಕೌಂಟರ್‌ನಲ್ಲಿ ರಿಚಾರ್ಜ್‌ ಮಾಡಿಸಿಕೊಳ್ಳಬೇಕಾಯಿತು’ ಎಂದು ತಮಗಾದ ಅನುಭವವನ್ನು ಅವರು ವಿವರಿಸಿದರು.

‘ಯಾವುದೇ ಹೊಸ ನಿಯಮಗಳನ್ನು ಜಾರಿಗೊಳಿಸುವುದಕ್ಕೆ ಮುನ್ನ ಅದರಿಂದ ಪ್ರಯಾಣಿಕರಿಗೆ ಏನೆಲ್ಲ ತೊಂದರೆ ಆಗುತ್ತದೆ ಎಂಬುದರತ್ತಲೂ ಬಿಎಂಆರ್‌ಸಿಎಲ್‌ ಗಮನ ಹರಿಸಬೇಕು. ಸ್ಮಾರ್ಟ್‌ಕಾರ್ಡ್‌ನಲ್ಲಿ ₹ 50 ಕನಿಷ್ಠ ಮೊತ್ತ ಇರಬೇಕು ಎಂಬುದನನ್ನು ಕಡ್ಡಾಯಗೊಳಿಸುವ ಮುನ್ನ, ಅದಕ್ಕೆ ರಿಚಾರ್ಜ್‌ ಮಾಡಲು ಅಗತ್ಯವಿರುವ ಸ್ವೈಪಿಂಗ್‌ ಯಂತ್ರಗಳನ್ನು ಎಲ್ಲ ಕೌಂಟರ್‌ಗಳಲ್ಲೂ ಅಳವಡಿಸಬೇಕಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಕೈಕೊಡುವ ಯಂತ್ರ: ‘ಡಿಜಿಟಲ್‌ ಪಾವತಿ ಬಗ್ಗೆ ಜಾಗೃತಿ ಹೆಚ್ಚಿದ ಬಳಿಕ ಬಹುತೇಕ ಪ್ರಯಾಣಿಕರು ಸ್ಮಾರ್ಟ್‌ಕಾರ್ಡ್‌ಗಳಿಗೆ ಡೆಬಿಟ್‌ ಕಾರ್ಡ್‌ ಬಳಸಿಯೇ ರಿಚಾರ್ಜ್‌ ಮಾಡಿಸಿಕೊಳ್ಳುತ್ತಾರೆ. ಅನೇಕ ನಿಲ್ದಾಣಗಳಲ್ಲಿ ಸ್ವೈಪಿಂಗ್‌ ಯಂತ್ರ ಪದೇ ಪದೇ ಕೈ ಕೊಡುತ್ತದೆ. ಮತ್ತೊಂದು ಕೌಂಟರ್‌ಗೆ ಹೋಗಿ ರಿಚಾರ್ಜ್‌ ಮಾಡಿಸಿಕೊಳ್ಳುವಂತೆ ಸಿಬ್ಬಂದಿ ಪುಕ್ಕಟೆ ಸಲಹೆ ನೀಡುತ್ತಾರೆ. ಇದರಿಂದಲೂ ಪ್ರಯಾಣಿಕರು ಎಷ್ಟು ಕಿರಿಕಿರಿ ಅನುಭವಿಸುತ್ತಾರೆ ಎಂಬುದು ನಿಗಮದ ಅಧಿಕಾರಿಗಳಿಗೆ ತಿಳಿದಿದೆಯೇ’ ಎಂದು ಪ್ರಶ್ನಿಸುತ್ತಾರೆ ಪ್ರಯಾಣಿಕ ಮಂಜುನಾಥ್‌.

‘ನಮ್ಮ ಮೆಟ್ರೊ’ ಸ್ಮಾರ್ಟ್‌ಕಾರ್ಡ್‌ ಗೋಳು

‘ನಮ್ಮ ಮೆಟ್ರೊ’ ಸ್ಮಾರ್ಟ್‌ಕಾರ್ಡ್‌ ಬಳಸಿ ಪ್ರಯಾಣಿಸಬೇಕಾದರೆ ಅದರಲ್ಲಿ ಕನಿಷ್ಠ ₹ 50 ಮೊತ್ತ ಇರಲೇಬೇಕೆಂಬ ನಿಯಮದಿಂದ ನಿಮಗೆ ತೊಂದರೆ ಆಗಿದೆಯೇ. ಹಾಗಿದ್ದರೆ ನಿಮ್ಮ ಅನುಭವವನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಳ್ಳಿ. ನಮ್ಮ ಮೆಟ್ರೊ ಸೇವೆಯನ್ನು ಇನ್ನಷ್ಟು ಉತ್ತಮಪಡಿಸಲು ನಿಮ್ಮ ಸಲಹೆಗಳನ್ನೂ ‘ವಾಟ್ಸ್‌ ಆ್ಯಪ್‌’ ಮೂಲಕ ಕಳುಹಿಸಿ.

9513322930

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.