ADVERTISEMENT

ಮೆಟ್ರೊ ನಿಲ್ದಾಣಕ್ಕೆ ಇನ್ಫೊಸಿಸ್‌ ಹೆಸರು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 19:58 IST
Last Updated 20 ಸೆಪ್ಟೆಂಬರ್ 2019, 19:58 IST
   

ಬೆಂಗಳೂರು: ‘ನಮ್ಮ ಮೆಟ್ರೊ’ದ ಎರಡನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಎಲೆಕ್ಟ್ರಾನಿಕ್‌ ಸಿಟಿ ನಿಲ್ದಾಣವನ್ನು ‘ಇನ್ಫೊಸಿಸ್‌ ಫೌಂಡೇಷನ್‌ ಕೋನಪ್ಪನ ಅಗ್ರಹಾರ ಮೆಟ್ರೊ ನಿಲ್ದಾಣ’ ಎಂದು ಬದಲಿಸಲು ರಾಜ್ಯ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ.

ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್‌) ಇನ್ಫೊಸಿಸ್‌ ಪ್ರತಿಷ್ಠಾನವು ಈ ನಿಲ್ದಾಣವನ್ನು ಅಭಿವೃದ್ಧಿ ಪಡಿಸಿದೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದ ದಿನದಿಂದ 30 ವರ್ಷಗಳವರೆಗೆ ನಿಲ್ದಾಣವನ್ನು ಇದೇ ಹೆಸರಿನಿಂದ ಕರೆಯಲಾಗುತ್ತದೆ. ₹200 ಕೋಟಿ ವೆಚ್ಚದಲ್ಲಿ ಇನ್ಫೊಸಿಸ್‌ ಈ ನಿಲ್ದಾಣವನ್ನು ನಿರ್ಮಾಣ ಮಾಡಲಿದೆ.

ಮೆಟ್ರೊ ಎರಡನೇ ಹಂತದಲ್ಲಿ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಎಲೆಕ್ಟ್ರಾನಿಕ್‌ ಸಿಟಿ ಮೆಟ್ರೊ ಮಾರ್ಗ ನಿರ್ಮಾಣಗೊಳ್ಳಲಿದೆ. ಒಟ್ಟು 16 ನಿಲ್ದಾಣಗಳು ಈ ಮಾರ್ಗದಲ್ಲಿ ನಿರ್ಮಾಣಗೊಳ್ಳಲಿವೆ. 18.8 ಕಿ.ಮೀ. ಉದ್ದದ ಈ ಮಾರ್ಗ ನಿರ್ಮಾಣಕ್ಕೆ ಒಟ್ಟು ₹5,744 ಕೋಟಿ ವೆಚ್ಚವಾಗಲಿದೆ.

ADVERTISEMENT

ಮೆಟ್ರೊ– ಬಿಬಿಎಂಪಿ ಅಧಿಕಾರಿ ಜತೆ ಚರ್ಚೆ

ಮೆಟ್ರೊ ಕಾಮಗಾರಿಯಿಂದ ವಾಹನ ಚಾಲಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ಶಾಸಕ ರಾಮಲಿಂಗಾ ರೆಡ್ಡಿ ಶುಕ್ರವಾರ ಚರ್ಚೆ ನಡೆಸಿದರು.

ಬಿಟಿಎಂ ಲೇಔಟ್‌ ಕ್ಷೇತ್ರದಲ್ಲಿ ಮೆಟ್ರೊ ಕಾಮಗಾರಿಯಿಂದ ರಸ್ತೆ ಹಾಳಾಗಿರುವುದನ್ನು ಪರಿಶೀಲಿಸಿದ ಬಳಿಕ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

‘ಸಿಲ್ಕ್ ಬೋರ್ಡ್, ಬನ್ನೇರುಘಟ್ಟ ರಸ್ತೆ ಹಾಗೂ ಬಿಟಿಎಂ ಲೇಔಟ್‌ನ ಪ್ರಮುಖ ರಸ್ತೆಗಳು ಹಾಳಾಗಿವೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಮತ್ತು ರಸ್ತೆಗಳನ್ನು ದುರಸ್ತಿಗೊಳಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.