ADVERTISEMENT

ಮೆಟ್ರೊ ಸಂಚಾರ ವ್ಯತ್ಯಯ ಪ್ರಯಾಣಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 21:10 IST
Last Updated 17 ಮಾರ್ಚ್ 2020, 21:10 IST
ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಪ್ರಯಾಣಿಕರು ಸಿಬ್ಬಂದಿಯ ಜೊತೆ ವಾಗ್ವಾದ ನಡೆಸಿದರು
ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಪ್ರಯಾಣಿಕರು ಸಿಬ್ಬಂದಿಯ ಜೊತೆ ವಾಗ್ವಾದ ನಡೆಸಿದರು   

ಬೆಂಗಳೂರು:‘ನಮ್ಮ ಮೆಟ್ರೊ’ ನೇರಳೆ ಮಾರ್ಗದ ಇಂದಿರಾನಗರ ಮತ್ತು ವಿವೇಕಾನಂದ ರಸ್ತೆ ನಿಲ್ದಾಣದ ನಡುವೆ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಮಂಗಳವಾರ ರಾತ್ರಿ 10.15ರಿಂದ ಎಂ.ಜಿ. ರಸ್ತೆ ಮತ್ತು ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣಗಳ ನಡುವೆ ಮೆಟ್ರೊ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ನಿಗಮವು ಮೊದಲೇ ಈ ಬಗ್ಗೆ ಹೇಳಿದ್ದರೂ, ಪ್ರಯಾಣಿಕರಿಗೆ ಮಾಹಿತಿ ಇರದ ಕಾರಣ, ಕೆಲವರು ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಮೆಜೆಸ್ಟಿಕ್‌ನಿಂದ ಬೈಯಪ್ಪನಹಳ್ಳಿಯವರೆಗೆ ಹೋಗಬೇಕಿತ್ತು. ಕೆಂಪೇಗೌಡ ನಿಲ್ದಾಣದಲ್ಲಿಯೇ ಈ ಬಗ್ಗೆ ಮಾಹಿತಿ ನೀಡಿದ್ದರೆ, ಅಲ್ಲಿಂದಲೇ ಬಸ್‌ ಮೂಲಕ ಬೈಯಪ್ಪನಹಳ್ಳಿಗೆ ಹೋಗುತ್ತಿದ್ದೆವು’ ಎಂದು ರಮೇಶ್‌ ಎಂಬುವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಮೆಜೆಸ್ಟಿಕ್‌ನಲ್ಲಿ ನಮಗೆ ಟಿಕೆಟ್‌ ಕೊಡಲೇ ಬಾರದಿತ್ತು. ಈಗ ಆಟೊದವರು ನಿಗದಿಗಿಂತ ಹೆಚ್ಚು ದುಡ್ಡು ಕೇಳುತ್ತಿದ್ದಾರೆ’ ಎಂದು ಮಂಗಳಾ ಅಸಮಾಧಾನ ವ್ಯಕ್ತಪಡಿಸಿದರು.

ಎಂ.ಜಿ. ರಸ್ತೆ ನಿಲ್ದಾಣದಿಂದ ಇಂದಿರಾನಗರ, ಬೈಯಪ್ಪನಹಳ್ಳಿ, ವಿವೇಕಾನಂದ ರಸ್ತೆಯ ಕಡೆಗೆ ಹೋಗುವವರು ಅನಿವಾರ್ಯವಾಗಿ ಆಟೊ, ಕ್ಯಾಬ್‌ಗಳ ಮೊರೆ ಹೋದರು.

ಬುಧವಾರವೂ ವ್ಯತ್ಯಯ:ಮೈಸೂರು ರಸ್ತೆ ನಿಲ್ದಾಣದಿಂದ ಎಂ.ಜಿ. ರಸ್ತೆಯವರೆಗೆ ಬುಧವಾರ ಬೆಳಿಗ್ಗೆ 5ರಿಂದಲೇ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ. ಆದರೆ, ಎಂ.ಜಿ. ರಸ್ತೆ ನಿಲ್ದಾಣದಿಂದ ಬೈಯಪ್ಪನಹಳ್ಳಿಯವರೆಗೆ 8 ಗಂಟೆಯ ನಂತರ ಸಂಚಾರ ಆರಂಭವಾಗಲಿದೆ ಎಂದು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.