ADVERTISEMENT

ಮೆಟ್ರೊ ಕಾಮಗಾರಿ ಕಿರಿಕಿರಿ: ನಿವಾಸಿಗಳ ಪ್ರತಿಭಟನೆ

ಮಧ್ಯರಾತ್ರಿ ಅಲುಗಾಡಿದ ಕಟ್ಟಡಗಳು, : ಸುಲ್ತಾನ್‌ ನಗರ ನಿವಾಸಿಗಳ ಆತಂಕ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 20:42 IST
Last Updated 27 ಡಿಸೆಂಬರ್ 2020, 20:42 IST

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಕಂಟೋನ್ಮೆಂಟ್‌ ನಿಲ್ದಾಣದಿಂದ ಶಿವಾಜಿನಗರದವರೆಗೆ ಸುರಂಗ ಮಾರ್ಗ ಕೊರೆಯುವ ಕಾಮಗಾರಿ ನಡೆಯುತ್ತಿದ್ದು, ದೊಡ್ಡ ಶಬ್ದ ಬರುತ್ತಿದೆಯಲ್ಲದೆ, ಕಟ್ಟಡಗಳು ಅಲುಗಾಡಿದ ಅನುಭವ ಆಗುತ್ತಿದೆ ಎಂದು ಆರೋಪಿಸಿ, ಸುಲ್ತಾನ್‌ ನಗರದ ನಿವಾಸಿಗಳು ಶನಿವಾರ ಮಧ್ಯರಾತ್ರಿ ಪ್ರತಿಭಟನೆ ನಡೆಸಿದರು.

ಮದಿನಾ ಮೈದಾನದ ಬಳಿಯ ಧನಕೋಟಿ ರಸ್ತೆಯ ಸುಲ್ತಾನ್‌ನಗರ ನಿವಾಸಿಗಳು ಶನಿವಾರ ಮಧ್ಯರಾತ್ರಿ 2 ಗಂಟೆಯವರೆಗೆ ನಿದ್ದೆ ಮಾಡಿಲ್ಲ. ಸುರಂಗ ಕೊರೆಯುವ ಯಂತ್ರಗಳಿಂದ ಬರುವ ಶಬ್ದ ನಿದ್ರಾಭಂಗಕ್ಕೆ ಕಾರಣವಾಗುತ್ತಿದೆ. ಅಲ್ಲದೆ, ಕಟ್ಟಡಗಳು ಅಲುಗಾಡಿದ ಅನುಭವವಾಗುತ್ತಿದೆ ಎಂದು ಶನಿವಾರ ರಾತ್ರಿ 9.30ರ ವೇಳೆ 70ಕ್ಕೂ ಹೆಚ್ಚು ನಿವಾಸಿಗಳು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ನಂತರ, 300ಕ್ಕೂ ಹೆಚ್ಚು ಜನ ಸೇರಿದ್ದಾರೆ. ಮನೆಗಳಿಗೆ ಹಾನಿಯಾಗುವ ಆತಂಕದಲ್ಲಿ ಹೊರಬಂದಿದ್ದ ನಿವಾಸಿಗಳು, ಜನಪ್ರತಿನಿಧಿಗಳಿಗೆ ಸಹಾಯಕ್ಕಾಗಿ ಕರೆ ಮಾಡಿದ್ದಾರೆ.

‘ಮೊದಲು ದೊಡ್ಡ ಶಬ್ದ ಕೇಳಿಸಿತು. ನಂತರ, ಇಡೀ ಕಟ್ಟಡವೇ ಅಲ್ಲಾಡಲು ಆರಂಭವಾಯಿತು. ಹೊರಗಡೆ ಓಡಿ ಬಂದು ಸಂಬಂಧಿಕರು, ಸ್ನೇಹಿತರಿಗೆ ಕರೆ ಮಾಡೆದೆವು’ ಎಂದು ತಿಮ್ಮಯ್ಯ ರಸ್ತೆ ನಿವಾಸಿ ಮಹಬೂಬ್‌ ಖಾನ್‌ ಹೇಳಿದರು.

ADVERTISEMENT

‘ಶಾಸಕ ರಿಜ್ವಾನ್‌ ಆರ್ಷದ್‌ಗೆ ಕರೆ ಮಾಡಿದ ನಂತರ, ಅವರ ಮಧ್ಯಪ್ರವೇಶದಿಂದ ರಾತ್ರಿ 2 ಗಂಟೆಗೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿತು’ ಎಂದು ನಿವಾಸಿ ಹಸೀಬ್ ಅಹ್ಮದ್ ಹೇಳಿದರು.

‘ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮನವಿ ಮಾಡಲಾಯಿತು. ಅಲ್ಲದೆ, ಯಾವುದೇ ಮನೆಗೆ ಹಾನಿಯಾಗಿದ್ದರೆ ನೆರವು ನೀಡುವ ಭರವಸೆಯನ್ನೂ ಶಾಸಕರು ನೀಡಿದರು’ ಎಂದು ಶಾಸಕರ ವಕ್ತಾರರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.