ADVERTISEMENT

ಶುರುವಾಯ್ತು ಕಾಮಗಾರಿ; ಬದಲಾಯ್ತು ದಾರಿ

ಗೊಟ್ಟಿಗೆರೆ–ಸ್ವಾಗತ್‌ ಕ್ರಾಸ್‌ ಮೆಟ್ರೊದ ಎತ್ತರಿಸಿದ ಮಾರ್ಗ ನಿರ್ಮಾಣ ಕೆಲಸ ಆರಂಭ : ಸಿಲ್ಕ್‌ಬೋರ್ಡ್‌ ಸರ್ವಿಸ್‌ ರಸ್ತೆ ಬಂದ್‌

ಪೀರ್‌ ಪಾಶ, ಬೆಂಗಳೂರು
Published 20 ಡಿಸೆಂಬರ್ 2018, 1:50 IST
Last Updated 20 ಡಿಸೆಂಬರ್ 2018, 1:50 IST
ಮೆಟ್ರೊ ಕಾಮಗಾರಿಗಾಗಿ ಜಯದೇವ್‌ ಜಂಕ್ಷನ್‌ನಲ್ಲಿನ ಸರ್ವಿಸ್‌ ರಸ್ತೆಯನ್ನು ಬಂದ್ ಮಾಡಲಾಗಿದೆ.
ಮೆಟ್ರೊ ಕಾಮಗಾರಿಗಾಗಿ ಜಯದೇವ್‌ ಜಂಕ್ಷನ್‌ನಲ್ಲಿನ ಸರ್ವಿಸ್‌ ರಸ್ತೆಯನ್ನು ಬಂದ್ ಮಾಡಲಾಗಿದೆ.   

ಬೆಂಗಳೂರು: ಗೊಟ್ಟಿಗೆರೆ–ಸ್ವಾಗತ್‌ ಕ್ರಾಸ್‌ ಮೆಟ್ರೊ ಮಾರ್ಗ(ರೀಚ್‌ 6) ನಿರ್ಮಾಣಕ್ಕಾಗಿ ಸಿಲ್ಕ್‌ಬೋರ್ಡ್‌ಗೆ ತಲುಪಲು ಜಯದೇವ ಆಸ್ಪತ್ರೆಯ ಎದುರಿನ ಸರ್ವಿಸ್‌ ರಸ್ತೆಯನ್ನು ಬುಧವಾರದಿಂದ ಬಂದ್‌ ಮಾಡಲಾಗಿದೆ.

ಈ ಕುರಿತು ಹಾಕಿರುವ ಮಾರ್ಗ ಬದಲಾವಣೆಯ ಫಲಕವನ್ನು ಗಮನಿಸದೆಯೇ ವಾಹನ ಸವಾರರು ಸರ್ವಿಸ್‌ ರಸ್ತೆವರೆಗೂ ಬಂದು ಹಿಂದಿರುಗುತ್ತಿದ್ದ ದೃಶ್ಯ ಬುಧವಾರ ಸಾಮಾನ್ಯವಾಗಿತ್ತು. ಕೆಲವರು ಬನ್ನೇರುಘಟ್ಟ ರಸ್ತೆಯಲ್ಲಿ ಸಾಗಿ,ಮೈಕೋ ಲೇಔಟ್‌ ಸಂಚಾರ ಪೊಲೀಸ್‌ ಠಾಣೆಯಿಂದ ಎಡ ತಿರುವು ಪಡೆದು, ಸಿಲ್ಕ್‌ಬೋರ್ಡ್‌ ಕಡೆಗಿನ ರಸ್ತೆಗೆ ತಲುಪುತ್ತಿದ್ದಾರೆ. ಗುರಪ್ಪನಪಾಳ್ಯದ ಸಿಗ್ನಲ್‌ನಲ್ಲಿ ಅಳವಡಿಸಿರುವ ಮಾರ್ಗ ಬದಲಾವಣೆ ಸೂಚನಾ ಫಲಕದ ಗಾತ್ರವೂ ಚಿಕ್ಕದಾಗಿದೆ. ಇದರಿಂದಾಗಿ ಸವಾರರಿಗೆ ಬದಲಾವಣೆಯ ಮಾಹಿತಿ ತಲುಪುತ್ತಿಲ್ಲ.

ಈ ಸರ್ವಿಸ್‌ ರಸ್ತೆಯಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಇರುವುದಿಲ್ಲವಾದರೂ, ಸಿಲ್ಕ್‌ಬೋರ್ಡ್‌ ತಲುಪುವ ವಾಹನ ಸವಾರರುಈಗ ಈಸ್ಟ್‌ ಎಂಡ್‌ ರಸ್ತೆ ಬಳಸಬೇಕಿದೆ. ಮಾರ್ಗ ಬದಲಾವಣೆಗೆ ಸ್ಥಳೀಯರು ಮತ್ತು ಈ ರಸ್ತೆ ಬಳಸುವವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಮೆಟ್ರೊ ಸಾರಿಗೆಗಾಗಿ ಕೆಲವು ತಿಂಗಳುಗಳ ಕಾಲ ತೊಂದರೆಯಾದರೂ ಸಹಿಸಲು ಸಿದ್ಧ ಎಂಬ ಅಭಿಪ್ರಾಯ ಸ್ಥಳೀಯರಿಂದ ಕೇಳಿಬಂತು.

ADVERTISEMENT

‘ಬದಲಾದ ಮಾರ್ಗದಲ್ಲಿ ಉಪರಸ್ತೆಗಳು ಇವೆ. ಸಂಚಾರ ದಟ್ಟಣೆಯು ಹೆಚ್ಚಿರುವುದಿಲ್ಲ. ಹಾಗಾಗಿ ಜಯದೇವ ಆಸ್ಪತ್ರೆಗೆ ಹೋಗುವ ಅಂಬುಲೆನ್ಸ್‌ಗಳಿಗೆ ಯಾವುದೇ ಅಡಚಣೆ ಆಗುವುದಿಲ್ಲ’ ಎಂದು ಸಂಚಾರ ಪೊಲೀಸರು ತಿಳಿಸಿದರು.

ಸ್ಥಳ ಕಾಮಗಾರಿ: ಬಂದ್‌ ಮಾಡಿರುವ ರಸ್ತೆಯನ್ನು ಮೆಟ್ರೊ ನಿಗಮ 2.5 ಮೀ.ನಷ್ಟು ಅಗೆಯಲಿದೆ. ಅಲ್ಲಿ ಒಳಚರಂಡಿ, ನೀರು ಸರಬರಾಜು ಕೊಳವೆ, ಕೇಬಲ್‌ ಸಂಪರ್ಕದ ಮಾರ್ಗಗಳಿದ್ದರೆ, ಸಂಬಂಧಿಸಿದ ಆಡಳಿತ ಸಂಸ್ಥೆಗಳ ಸಹಯೋಗದೊಂದಿಗೆ ಸ್ಥಳಾಂತರಿಸಲಿದೆ. ಬಳಿಕ ಇಲ್ಲಿ, ಮೆಟ್ರೊ ಮಾರ್ಗದ ಎಂಟು ಸ್ತಂಭಗಳ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಅದರಲ್ಲಿನ ನಾಲ್ಕು ಸ್ತಂಭಗಳು ನಿಲ್ದಾಣದೊಳಗೆ ಇರಲಿವೆ.

ಆರ್‌.ವಿ.ರಸ್ತೆಯಿಂದ ಎಲೆಕ್ಟ್ರಾನಿಕ್‌ ಸಿಟಿಗೆ ಸಂಪರ್ಕ ಕಲ್ಪಿಸುವ ಮೆಟ್ರೊ ಮಾರ್ಗದ ಕಾಮಗಾರಿ ಕೂಡ ಮಾರೇನಹಳ್ಳಿಯ ರಸ್ತೆಯಲ್ಲಿ ನಡೆದಿದೆ. ಈ ಮಾರ್ಗವು ಗೊಟ್ಟಿಗೆರೆ–ಸ್ವಾಗತ್‌ ಕ್ರಾಸ್‌ನ ಮಾರ್ಗವನ್ನು ಜಯದೇವ ಜಂಕ್ಷನ್‌ನಲ್ಲಿ ಸಂಧಿಸಲಿದೆ. ಇಲ್ಲಿ ಸದ್ಯ ಇರುವ ಮೇಲ್ಸೇತುವೆಯನ್ನು ಕೆಡವಿ, ಮೆಟ್ರೊ ನಿಲ್ದಾಣ ಮತ್ತು ರಸ್ತೆ ಮಾರ್ಗಗಳು ಜತೆಯಾಗಿ ಇರುವ ರಚನೆ ನಿರ್ಮಿಸಲು ಯೋಜಿಸಲಾಗಿದೆ.

ಕಾಮಗಾರಿ ಎಷ್ಟು ವರ್ಷ ನಡೆಯುತ್ತೋ?
‘ಬದಲಾವಣೆ ಮಾರ್ಗದಲ್ಲಿ ಹೋದರೆ, ಸುಮಾರು 2 ಕಿ.ಮೀ. ಸುತ್ತಿ ಬರಬೇಕು. ಮಾರೇನಹಳ್ಳಿ ತಿರುವಿನಲ್ಲಿ ಕೆಲವೊಮ್ಮೆ ಸಂಚಾರ ದಟ್ಟಣೆ ಇರುತ್ತದೆ. ಹಾಗಾಗಿ ಸಮಯ ಮತ್ತು ಇಂಧನವು ವ್ಯಯವಾಗುತ್ತದೆ’ ಎಂದು ಪ್ರತಿದಿನ ಸರ್ವಿಸ್‌ ರಸ್ತೆ ಮೂಲಕ ದ್ವಿಚಕ್ರ ವಾಹನದಲ್ಲಿ ಸಾಗುವ ವೈದ್ಯ ಗೋಪಾಲ ಹೇಳಿದರು.

‘ಮಳೆ ಬಂತು, ಅನುದಾನ ಇಲ್ಲ ಅಂತ ಕೆಲವು ಮೆಟ್ರೊ ಮಾರ್ಗದ ಕಾಮಗಾರಿಗಳನ್ನು ನಿಧಾನವಾಗಿ ನಡೆಸಿದ ಉದಾಹರಣೆಗಳು ನಮ್ಮ ಮುಂದಿವೆ. ಈಗ ಶುರು ಮಾಡಿರುವ ಕೆಲಸವನ್ನು ಆದಷ್ಟು ಬೇಗ ಮುಗಿಸಿದರೆ, ಸಾರ್ವಜನಿಕರಿಗೆ ಬಹಳ ಅನುಕೂಲವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಮೆಟ್ರೊ ಬಿರುಕು: ತಡರಾತ್ರಿ ರಿಪೇರಿ ಕೆಲಸ
ಟ್ರಿನಿಟಿ ಮೆಟ್ರೊ ನಿಲ್ದಾಣ ಸಮೀಪದ ವಯಾಡಕ್ಟ್‌ನಲ್ಲಿ ಕಾಣಿಸಿಕೊಂಡಿರುವ ಬಿರುಕು ಹೆಚ್ಚದಂತೆ ನೋಡಿಕೊಳ್ಳುವ ಕೆಲಸ ಪ್ರತಿನಿತ್ಯ ತಡರಾತ್ರಿ 11ರ ನಂತರ ನಡೆಯುತ್ತಲೇ ಇದೆ. ಮೆಟ್ರೊ ನಿಗಮದ ಹಿರಿಯ ಅಧಿಕಾರಿಗಳು ನಿದ್ದೆಗೆಟ್ಟು ಕೆಲಸದ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಈ ಬಿರುಕನ್ನು ಸರಿಪಡಿಸುವ ಮುಖ್ಯ ಕಾಮಗಾರಿ ಡಿ.22 ಮತ್ತು 23ರಂದು ನಡೆಯಲಿದೆ. ಈ ದಿನಗಳಂದು ಟ್ರಿನಿಟಿ ನಿಲ್ದಾಣದಿಂದ ಎಂ.ಜಿ.ರಸ್ತೆಯವರೆಗೆ ಮೆಟ್ರೊ ಸಂಚಾರ ಸೇವೆ ಇರುವುದಿಲ್ಲ. ‘ಕ್ರಿಸ್‌ಮಸ್‌ ವೇಳೆಗೆ ಎಲ್ಲ ರಿಪೇರಿ ಕೆಲಸವನ್ನು ಮುಗಿಸಿ, ಮೆಟ್ರೊವನ್ನು ಜನಬಳಕೆಗೆ ಮುಕ್ತಗೊಳಿಸುತ್ತೇವೆ. ಡಿ.31ರಂದು ಮಧ್ಯರಾತ್ರಿಯ ವರೆಗೂ ಮೆಟ್ರೊ ಸೇವೆಯನ್ನು ವಿಸ್ತರಿಸಿ, ಹೊಸ ವರ್ಷಾಚರಣೆ ಹರ್ಷಕ್ಕೆ ಅವಕಾಶ ಮಾಡಿಕೊಡುತ್ತೇವೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದರು.

ಫಿಲ್ಟರ್‌ ಮರಳು ಬಳಕೆ ಆರೋಪ: ಮೆಟ್ರೊ ಕಾಮಗಾರಿ ವೇಳೆ ಕಡಿಮೆ ಗುಣಮಟ್ಟದ ಮರಳನ್ನು ಬಳಕೆ ಮಾಡಿದ ಕಾರಣ ವಯಾಡಕ್ಟ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಕರ್ನಾಟಕ ದಲಿತ ಮತ್ತು ಅಲ್ಪಸಂಖ್ಯಾತರ ಸೇನೆ ಆರೋಪಿಸಿದೆ.

ಸಂಘಟನೆಯ ಮುಖ್ಯಸ್ಥ ಸದಾಖತ್‌‍ಪಾಷಮಾಧ್ಯಮಗೋಷ್ಠಿಯಲ್ಲಿ ಬುಧವಾರ, ‘ಮೆಟ್ರೊ ನಿಗಮದವರು ಒಂದನೇ ಹಂತ ಮಾರ್ಗದ ಕಾಮಗಾರಿ ವೇಳೆ ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ಅರ್ಧ ಬೆಲೆಗೆಮಾರಿಕೊಳ್ಳುತ್ತಿದ್ದರು. ಲೋಕಾಯುಕ್ತಕ್ಕೆ2012ರಲ್ಲಿಯೇ ದೂರು ನೀಡಿದ್ದೆವು. ಲೋಕಾಯುಕ್ತ ಸಂಸ್ಥೆ ಈ ವಿಷಯ ವ್ಯಾಪ್ತಿಗೆ ಬರುವುದಿಲ್ಲವೆಂದು11 ತಿಂಗಳ ಬಳಿಕ ದೂರನ್ನು ಮುಕ್ತಾಯಗೊಳಿಸಿತು’ ಎಂದು ಹೇಳಿದರು.

*
ತ್ವರಿತ ಸಾರಿಗೆಯಾದ ಮೆಟ್ರೊ ನಮ್ಮ ಪ್ರದೇಶಕ್ಕೆ ಬರುತ್ತಿದೆ. ಬದಲಾದ ಮಾರ್ಗದಲ್ಲಿ ಹೋದರೆ ಹತ್ತು ನಿಮಿಷ ತಡವಾಗಬಹುದು. ಸರ್ವಿಸ್‌ ರಸ್ತೆಯಲ್ಲಿನ ಕಾಮಗಾರಿಯಿಂದ ಹೆಚ್ಚೇನು ತೊಂದರೆಯಾಗುತ್ತಿಲ್ಲ.
-ಮಹದೇವ್, ಸ್ಥಳೀಯ

*
ನಮ್ಮ ಪ್ರದೇಶಕ್ಕೆ ಮೆಟ್ರೊ ಮಾರ್ಗ ನಿರ್ಮಿಸಿ, ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಇದರಿಂದ ವಾಹನಗಳ ಓಡಾಟಕ್ಕೆ ಕೆಲವು ತಿಂಗಳುಗಳ ಕಾಲ ತೊಂದರೆಯಾದರೂ, ನಾವು ಸಹಿಸಿಕೊಳ್ಳುತ್ತೇವೆ.
-ಉಮೇಶ್‌ ರಾಜ್‌ ಕೋಟಾ, ಸ್ಥಳೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.