ADVERTISEMENT

ಮಸೀದಿ ಧ್ವನಿವರ್ಧಕ: ಪರವಾನಗಿ ಹಾಜರುಪಡಿಸಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 20:34 IST
Last Updated 10 ಫೆಬ್ರುವರಿ 2020, 20:34 IST
   

ಬೆಂಗಳೂರು: ‘ನಮಾಜ್ ವೇಳೆ ಧ್ವನಿವರ್ಧಕದಿಂದ ಹೊರಹೊಮ್ಮುವ ಶಬ್ದ ತರಂಗಗಳ ತೀವ್ರತೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದೆ ಎಂಬ ಆಕ್ಷೇಪಕ್ಕೆ ಸಂಬಂಧಿಸಿದಂತೆ ಧ್ವನಿವರ್ಧಕ ಬಳಸಲು ಪಡೆದಿರುವ ಪರವಾನಗಿ ಕೋರ್ಟ್‌ಗೆ ಹಾಜರುಪಡಿಸಿ’ ಎಂದು ಗೋವಿಂದರಾಜ ನಗರದ ಕಾರ್ಪೊರೇಷನ್‌ ಕಾಲೋನಿಯ ಆಯಷಾ ಮಸೀದಿ ಮುಖ್ಯಸ್ಥರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಈ ಕುರಿತಂತೆ ವಕೀಲೆ ಸುಮಂಗಲಾ ಎ.ಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿ, ‘ಒಂದು ವೇಳೆ ಧ್ವನಿ ತರಂಗಗಳ ತೀವ್ರತೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದ್ದರೆ ನಿಯಂತ್ರಿಸಲು ಕ್ರಮ ಕೈಗೊಳ್ಳಿ’ ಎಂದು ವಿಜಯನಗರ ಪೊಲೀಸ್ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಅವರಿಗೆ ನಿರ್ದೇಶಿಸಿದೆ.

ಆರೋಪ ಏನು?: ‘ಗೋವಿಂದರಾಜ ನಗರದಲ್ಲಿ ಎರಡು ಮಸೀದಿಗಳಿದ್ದು, ದಿನಕ್ಕೆ ಐದು ಬಾರಿ ನಮಾಜ್ ಮಾಡಲಾಗುತ್ತದೆ. ಈ ವೇಳೆ ಧ್ವನಿವರ್ಧಕಗಳಿಂದ ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಶಬ್ದ ಉಂಟಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯವಾಗುತ್ತಿದೆ’ ಎಂಬುದು ಅರ್ಜಿದಾರರ ಆರೋಪ. ‘ಕ್ರಮ ಕೈಗೊಳ್ಳಲು ಪೊಲೀಸರಿಗೆ ಮನವಿ ಮಾಡಿದ್ದರೂ, ಇಂತಹ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸುವುದು ಸಾಧ್ಯವಿಲ್ಲ ಎನ್ನುತ್ತಾರೆ. ಹೀಗಾಗಿ ಸಂಬಂಧಿಸಿದ ಪ್ರಾಧಿಕಾರಕ್ಕೆ ಸೂಕ್ತ ನಿರ್ದೇಶನ ನೀಡಿ’ ಎಂಬುದು ಕೋರಿಕೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.