ADVERTISEMENT

ಕೋವಿಡ್‌: ನಗರದಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿ?

ಕಂದಾಯ ಸಚಿವ ಆರ್. ಅಶೋಕ್ ಸುಳಿವು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 17:54 IST
Last Updated 13 ಆಗಸ್ಟ್ 2021, 17:54 IST

ಬೆಂಗಳೂರು: ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಮತ್ತು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿ ಮಾಡುವ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಸುಳಿವು ನೀಡಿದ್ದಾರೆ.

‘ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಸೋಂಕು ಹರಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ, ರಾಜ್ಯ ರಾಜಧಾನಿ ಮತ್ತು ಇತರೆ ಜಿಲ್ಲೆಗಳಲ್ಲಿ ಆ. 15ರ ನಂತರ ಕಟ್ಟುನಿಟ್ಟಿನ ಮಾರ್ಗಸೂಚಿ ಅಥವಾ ನಿರ್ಬಂಧಗಳನ್ನು ಘೋಷಿಸಲಾಗುತ್ತದೆ’ ಎಂದು ಅವರು ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದರು.

‘ಕೋವಿಡ್ ನಿಯಂತ್ರಣಕ್ಕೆ ಕರ್ಫ್ಯೂ ಒಂದೇ ಪರಿಹಾರವಲ್ಲ. ಆದರೆ, ಲಾಕ್‌ಡೌನ್‌ ಮತ್ತು ಇತರೆ ನಿರ್ಬಂಧಗಳಿಂದ ಜನರೂ ಸಂಕಷ್ಟಕ್ಕೆ ಈಡಾಗುತ್ತಾರೆ. ಹೀಗಾಗಿ, ನಿಧಾನ ಔಷಧಿಯಂತಹ ಕ್ರಮಗಳನ್ನು (ಕಟ್ಟುನಿಟ್ಟಿನ ನಿರ್ಬಂಧಗಳು) ಜಾರಿಗೊಳಿಸುವ ಚಿಂತನೆ ಇದೆ’ ಎಂದು ಹೇಳಿದರು.

ADVERTISEMENT

‘ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರಕರಣಗಳು ಏರಿಕೆಯಾದರೆ, ವಾರಾಂತ್ಯ ಕರ್ಫ್ಯೂನಂತಹ ನಿರ್ಬಂಧಗಳನ್ನು ವಿಧಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ‘ ಎಂದೂ ಹೇಳಿದರು.

‘ಮುಂದೆ ಮೊಹರಂ, ಗಣೇಶ ಚತುರ್ಥಿ, ರಾಘವೇಂದ್ರ ಆರಾಧನೆ ಸೇರಿದಂತೆ ಐದಕ್ಕೂ ಹೆಚ್ಚು ಹಬ್ಬ ಅಥವಾ ಉತ್ಸವಗಳು ಇವೆ. ಈ ಸಂದರ್ಭದಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಮುಖ್ಯಮಂತ್ರಿ ನೇತೃತ್ವದ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ‘ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.