ADVERTISEMENT

ಸಚಿವರ ಮನೆ ಎದುರು ಪ್ರತಿಭಟನೆ ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 21:25 IST
Last Updated 18 ಆಗಸ್ಟ್ 2020, 21:25 IST

ಬೆಂಗಳೂರು: ‘ಬಿಸಿಯೂಟ ನೌಕರರ ಬಾಕಿ ವೇತನ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿ ಸಚಿವ ಎಸ್‌.ಸುರೇಶ್ ಕುಮಾರ್ ಮನೆ ಎದುರು ಪ್ರತಿಭಟನೆ ನಡೆಸಿದ್ದ 65 ಮಂದಿ ವಿರುದ್ಧ ಬಸವೇಶ್ವರ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬಸವೇಶ್ವರ ನಗರದ ಶಾರದಾ ಕಾಲೊನಿಯಲ್ಲಿರುವ ಸಚಿವರ ಮನೆ ಎದುರು ಸೋಮವಾರ ಬೆಳಿಗ್ಗೆ ಸೇರಿದ್ದ ಕೆಲ ನೌಕರರು ಪ್ರತಿಭಟನೆ ನಡೆಸಿದ್ದರು. ಅದರ ನೇತೃತ್ವ ವಹಿಸಿದ್ದ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಗೌರವ ಅಧ್ಯಕ್ಷೆ ಎಸ್‌. ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತಾ ಸೇರಿ 65 ಮಂದಿಯನ್ನು ಆರೋಪಿಯನ್ನಾಗಿ ಮಾಡಲಾಗಿದೆ.

‘ಪ್ರತಿಭಟನೆಗೆ ಅನುಮತಿ ಪಡೆದಿ ರಲಿಲ್ಲ. ಜನವಸತಿ ಪ್ರದೇಶದಲ್ಲಿ ಸಂಚಾರಕ್ಕೆ ಅಡ್ಡಿಯಾಗುವಂತೆ ಪ್ರತಿಭಟನಕಾರರು ಗುಂಪಾಗಿ ಸೇರಿದ್ದರು. ಕೊರೊನಾ ಸೋಂಕು ಹರಡುವಿಕೆ ಸಮಯದಲ್ಲಿ ಸರ್ಕಾರದ ನಿಯಮ ವನ್ನೂ ಉಲ್ಲಂಸಿದ್ದಾರೆ’ ಎಂದು ಪೊಲೀಸರು ಹೇಳಿದರು.

ADVERTISEMENT

ಎಫ್‌ಐಆರ್ ಬಗ್ಗೆ ಪ್ರತಿಕ್ರಿ ಯಿಸಿದ ವರಲಕ್ಷ್ಮಿ, ‘4ತಿಂಗಳಿನಿಂದ ಸಂಬಳ ಬಂದಿಲ್ಲ. ಅಧಿಕಾರಿಗಳಿಗೆ ಮನವಿ ನೀಡಿದರೂ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ, ಸಂಬಳ ಕೇಳಲು ಸಚಿ ವರ ಮನೆ ಬಳಿ ಹೋಗಿದ್ದೆವು. ಯಾವುದೇ ಗಲಾಟೆಯಾಗಲಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸವಾಗಲಿ ನಾವು ಮಾಡಿಲ್ಲ. ಬೆಳಿಗ್ಗೆ 7.30ಕ್ಕೆ ಮನೆಗೆ ಹೋಗಿದ್ದೆವು. ಆದರೆ, ಸಚಿವರು ಇರಲಿಲ್ಲ. ವಿಧಾನಸೌಧಕ್ಕೆ ಹೋಗಿರು ವುದಾಗಿ ಗೊತ್ತಾಯಿತು. ಅವರು ಬೆಳಿಗ್ಗೆಯೇ ಮಾತುಕತೆ ನಡೆಸಿ ವಾಪಸು ಕಳುಹಿಸಬಹುದಿತ್ತು. ಹೀಗೆ, ‍ಪ್ರಕರಣ ದಾಖಲಿಸುವ ಅಗತ್ಯ ಇರಲಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.