ಬೆಂಗಳೂರು: ‘ನಾಡಿನ ಜನರ ಬೆವರ ಶ್ರಮದ ಹಣವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೋಜಿಗೆ ಬಳಸುತ್ತಿದ್ದು, ಇಲ್ಲದ ಹುದ್ದೆಗಳನ್ನು ಸೃಷ್ಟಿಸಿ ಸಂಪುಟ ದರ್ಜೆ ಸಚಿವರ ಸ್ಥಾನಮಾನ ಒದಗಿಸಲಾಗಿದೆ. ಈ ಮೂಲಕ ಖಜಾನೆಯಲ್ಲಿನ ಹಣವನ್ನು ದುಂದುವೆಚ್ಚ ಮಾಡಲಾಗುತ್ತಿದೆ’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಮೋಚ್ಚ ಅಧಿಕಾರ ಬಳಸಿ, ಇಷ್ಟ ಬಂದಂತೆ ಹಣ ಖರ್ಚು ಮಾಡುವ ಧೋರಣೆ ಸರಿಯಲ್ಲ. ಸದನದ ಒಪ್ಪಿಗೆಯಿಲ್ಲದೆ ಹಣ ಖರ್ಚು ಮಾಡಲು ಯಾರಿಗೂ ಅಧಿಕಾರವಿಲ್ಲ. ಆದರೆ, ಸಂಪುಟದಲ್ಲಿ 34 ಸಚಿವರ ಜತೆಗೆ ಹೆಚ್ಚುವರಿಯಾಗಿ 64 ಮಂದಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಲಾಗಿದೆ. ಮುಖ್ಯಮಂತ್ರಿ ಅವರ ಕಚೇರಿಯಲ್ಲಿಯೇ 250 ಸಿಬ್ಬಂದಿ ಇದ್ದಾರೆ. ಮುಖ್ಯಮಂತ್ರಿ ಸಚಿವಾಲಯದಲ್ಲೇ ಹಲವರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಲಾಗಿದೆ. ಮಂತ್ರಿಗಳ ಮನೆಗೆಲಸದವರೂ ಕಚೇರಿಗಳಲ್ಲಿ ಇದ್ದಾರೆ. ಅವರ ಸಂಬಳ, ಸಾರಿಗೆ, ಮತ್ತಿತರ ಸೌಲಭ್ಯಗಳಿಗೆ ಸದನ ಅಧಿಕಾರ ನೀಡಿಲ್ಲ. ವಿರೋಧ ಪಕ್ಷದವರು ಇದನ್ನು ಪ್ರಶ್ನಿಸದ ಕಾರಣ ದುಂದುವೆಚ್ಚ ಮುಂದುವರಿದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಅಮೆರಿಕದಂತಹ ದೈತ್ಯ ಆರ್ಥಿಕ ಶಕ್ತಿಯೇ ಅನವಶ್ಯಕ ವೆಚ್ಚಕ್ಕೆ ಕಡಿವಾಣ ಹಾಕಿದೆ. ರಾಜ್ಯದ ಆಡಳಿತ ನಮ್ಮದು ಎಂದೋ, ನಮ್ಮನ್ನು ಪ್ರಶ್ನಿಸುವವರು ಯಾರೂ ಇಲ್ಲವೆಂದೋ ಸರ್ಕಾರ ನಡೆಯುತ್ತಿದೆ. ಬಜೆಟ್ ಮಂಡನೆಯಾಗುವ ಮುನ್ನ ವಿಧಾನಸಭೆ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸಭಾಪತಿ ಅವರು ತಮ್ಮ ವಿವೇಚನೆಯಲ್ಲಿ ಸಂವಿಧಾನಾತ್ಮಕ ಕೆಲವು ತೀರ್ಮಾನಗಳನ್ನು ತೆಗೆದುಕೊಂಡು, ಜನಹಿತ ಕಾಪಾಡಬೇಕು’ ಎಂದು ಆಗ್ರಹಿಸಿದರು.
‘ಜಿಎಸ್‌ಟಿ ಸಭೆಯಲ್ಲಿ ಪಾಲ್ಗೊಳ್ಳದ ಸಿಎಂ’
‘ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಪಾಲು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಕುಳಿತು ಹೇಳಿಕೆ ನೀಡುತ್ತಾರೆ. ಅಷ್ಟಕ್ಕೂ ಅವರು ಒಂದೇ ಒಂದು ಜಿಎಸ್‌ಟಿ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ. ಜಿಎಸ್‌ಟಿ ಪಾಲಿಗೆ ಸಂಬಂಧಿಸಿದಂತೆ ನವದೆಹಲಿಗೆ ತೆರಳಿ ಲಾಬಿ ನಡೆಸದ ಈ ಬಗ್ಗೆ ಪಟ್ಟು ಹಿಡಿಯದ ಅವರು ಬೇಜವಬ್ದಾರಿ ಆರ್ಥಿಕ ಸಚಿವರಾಗಿದ್ದಾರೆ’ ಎಂದು ಎಚ್. ವಿಶ್ವನಾಥ್ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.