ADVERTISEMENT

ಪರಿಚಯಸ್ಥ ಮಹಿಳೆಯ ನಗ್ನ ದೃಶ್ಯ ಸೆರೆ: ಆರೋಪಿ ಬಂಧನ

‘ಮೊಬೈಲ್ ಚಾರ್ಜರ್‌’ ಕ್ಯಾಮೆರಾದಿಂದ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದ ಯುವಕ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 17:24 IST
Last Updated 20 ಆಗಸ್ಟ್ 2022, 17:24 IST
ಮಹೇಶ್
ಮಹೇಶ್   

ಬೆಂಗಳೂರು: ಪರಿಚಯಸ್ಥ ಮಹಿಳೆಯ ನಗ್ನ ದೃಶ್ಯಗಳನ್ನು ರಹಸ್ಯ ಕ್ಯಾಮೆರಾ ಮೂಲಕ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ವಿ. ಮಹೇಶ್ (30) ಎಂಬುವರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮೈಸೂರು ಜಿಲ್ಲೆಯ ಟಿ. ನರಸೀಪುರದ ಮಹೇಶ್, ಈಶಾನ್ಯ ವಿಭಾಗ ವ್ಯಾಪ್ತಿಯಲ್ಲಿ ವಾಸವಿದ್ದ ಮಹಿಳೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಮಹಿಳೆ ನೀಡಿದ್ದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಮೊಬೈಲ್ ಚಾರ್ಜರ್ ಮಾದರಿಯ ರಹಸ್ಯ ಕ್ಯಾಮೆರಾ, ಲ್ಯಾಪ್‌ಟಾಪ್, 2 ಮೆಮೂರಿ ಕಾರ್ಡ್, ಪೆನ್‌ ಡ್ರೈವ್ ಹಾಗೂ ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದೂರುದಾರ ಮಹಿಳೆಗೆ ಪರಿಚಯಸ್ಥನಾಗಿದ್ದ ಆರೋಪಿ, ಆಗಾಗ ಮನೆಗೂ ಬಂದು ಹೋಗುತ್ತಿದ್ದ. ಮಹಿಳೆ ಜೊತೆ ಲೈಂಗಿಕವಾಗಿ ಸಲುಗೆ ಬೆಳೆಸಿಕೊಳ್ಳಲು ಮುಂದಾಗಿದ್ದ. ಆದರೆ, ಮಹಿಳೆ ನಿರಾಕರಿಸಿದ್ದರು. ಇದರಿಂದ ಸಿಟ್ಟಾದ ಆರೋಪಿ, ಮಹಿಳೆಯ ನಗ್ನ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಸಂಚು ರೂಪಿಸಿದ್ದ’ ಎಂದು ತಿಳಿಸಿವೆ.

ADVERTISEMENT

ಚಾರ್ಜರ್ ಮಾದರಿ ಕ್ಯಾಮೆರಾ ಖರೀದಿ: ‘ಮೊಬೈಲ್ ಚಾರ್ಜರ್ ಮಾದರಿಯ ರಹಸ್ಯ ಕ್ಯಾಮೆರಾವನ್ನು ಆನ್‌ಲೈನ್‌ನಲ್ಲಿ ಖರೀದಿಸಿದ್ದ ಆರೋಪಿ, ಅದರ ಮೂಲಕವೇ ಮಹಿಳೆಯ ನಗ್ನ ದೃಶ್ಯಗಳನ್ನು ಚಿತ್ರೀಕರಿಸಲು ಸಿದ್ಧತೆ ಮಾಡಿಕೊಂಡಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಹಿಳೆ ಹಾಗೂ ಅವರ ಕುಟುಂಬದವರನ್ನು ಮಾತನಾಡಿಸುವ ಸೋಗಿನಲ್ಲಿ ಆರೋಪಿ ಮನೆಗೆ ತೆರಳಿದ್ದ. ಮಹಿಳೆ ಮಲಗುತ್ತಿದ್ದ ಕೊಠಡಿ ಸ್ವಿಚ್ ಬೋರ್ಡ್‌ಗೆ ಮೊಬೈಲ್ ಜಾರ್ಜರ್‌ ಹಾಕಿ ವಾಪಸು ಹೋಗಿದ್ದ. ಇದೇ ಸಂದರ್ಭದಲ್ಲೇ ಮಹಿಳೆಯ ನಗ್ನ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಕೆಲ ದಿನ ಬಿಟ್ಟು ಮನೆಗೆ ಪುನಃ ತೆರಳಿದ್ದ ಆರೋಪಿ, ಚಾರ್ಜರ್‌ ತೆಗೆದುಕೊಂಡು ಹೋಗಿದ್ದ’ ಎಂದು ತಿಳಿಸಿವೆ.

ನಕಲಿ ಖಾತೆ ತೆರೆದು ಸಂದೇಶ: ‘ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ ಆ್ಯಪ್‌ನಲ್ಲಿ ನಕಲಿ ಖಾತೆ ತೆರೆದಿದ್ದ ಆರೋಪಿ, ಮಹಿಳೆಯ ಖಾತೆಗೆ ಸಂದೇಶ ಕಳುಹಿಸುತ್ತಿದ್ದ. ಅಪರಿಚಿತನ ಖಾತೆ ಆಗಿದ್ದರಿಂದ ಮಹಿಳೆ ಬ್ಲಾಕ್ ಮಾಡಿದ್ದರು. ಆರೋಪಿಯು ಮತ್ತೊಂದು ನಕಲಿ ಖಾತೆ ತೆರೆದು ಸಂದೇಶ ಕಳುಹಿಸಲಾರಂಭಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನನ್ನ ಜೊತೆ ಲೈಂಗಿಕವಾಗಿ ಸಲುಗೆ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ, ನಿಮ್ಮ ನಗ್ನ ವಿಡಿಯೊಗಳು ನನ್ನ ಬಳಿ ಇವೆ. ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ’ ಎಂದು ಆರೋಪಿ ಹೇಳಿದ್ದ. ಅದಕ್ಕೆ ತಲೆಕೆಡಿಸಿಕೊಳ್ಳದ ಮಹಿಳೆಯು ಸಂದೇಶಕ್ಕೆ ಉತ್ತರ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಆರೋಪಿ, ನಗ್ನ ದೃಶ್ಯದ ತುಣುಕು ಕಳುಹಿಸಿದ್ದ. ಹೆದರಿದ್ದ ಮಹಿಳೆ, ಕುಟುಂಬದವರಿಗೆ ವಿಷಯ ತಿಳಿಸಿ ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿವೆ.

‘ಅಪರಿಚಿತ ವ್ಯಕ್ತಿ ವಿರುದ್ಧ ಮಹಿಳೆ ದೂರು ನೀಡಿದ್ದರು. ಆರೋಪಿಯನ್ನು ಪತ್ತೆ ಮಾಡಿದಾಗ, ಆತ ಪರಿಚಿತನೆಂಬುದು ತಿಳಿಯಿತು’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.