ADVERTISEMENT

ಮೊಬೈಲ್‌ ನಿಷ್ಕ್ರಿಯವೆಂದು ಹೇಳಿ ₹ 1.23 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 17 ಮೇ 2021, 2:51 IST
Last Updated 17 ಮೇ 2021, 2:51 IST

ಬೆಂಗಳೂರು: ಬಿಎಸ್‌ಎನ್‌ಎಲ್‌ ಕಂಪನಿ ಪ್ರತಿನಿಧಿ ಸೋಗಿನಲ್ಲಿ ನಗರದ ನಿವಾಸಿಯೊಬ್ಬರಿಗೆ ಕರೆ ಮಾಡಿದ್ದ ಸೈಬರ್ ವಂಚಕರು, ಬ್ಯಾಂಕ್‌ ಖಾತೆಯಿಂದ ₹ 1.23 ಲಕ್ಷ ಡ್ರಾ ಮಾಡಿಕೊಂಡು ವಂಚಿಸಿದ್ದಾರೆ.

ಇಸ್ರೊ ಲೇಔಟ್ ನಿವಾಸಿಯಾದ 59 ವರ್ಷದ ಎಂಜಿನಿಯರ್ ವಂಚನೆ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

‘ಮೇ 3ರಂದು ದೂರುದಾರರ ಮೊಬೈಲ್‌ಗೆ ಕರೆ ಮಾಡಿದ್ದ ಆರೋಪಿ, ಬಿಎಸ್‌ಎನ್‌ಎಲ್‌ ಕಂಪನಿ ಪ್ರತಿನಿಧಿಯೆಂದು ಹೇಳಿದ್ದ. ‘ನಿಮ್ಮ ಮೊಬೈಲ್ ಸಂಖ್ಯೆ ಸದ್ಯದಲ್ಲೇ ನಿಷ್ಕ್ರಿಯವಾಗಲಿದೆ. ಆ ರೀತಿ ಆಗಬಾರದೆಂದರೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಮೊಬೈಲ್‌ ಆ್ಯಪ್‌ನಲ್ಲಿ ಭರ್ತಿ ಮಾಡಿ ₹ 10 ಶುಲ್ಕ ಪಾವತಿ ಮಾಡಬೇಕು’ ಎಂಬುದಾಗಿ ಆರೋ‍‍ಪಿ ತಿಳಿಸಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಆರೋಪಿ ಮಾತು ನಂಬಿದ್ದ ದೂರುದಾರ, ಎನಿ ಡೆಸ್ಕ್‌ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡಿದ್ದರು. ನಂತರ, ಅದರಲ್ಲಿ ತಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ಭರ್ತಿ ಮಾಡಿ ₹ 10 ಶುಲ್ಕವನ್ನೂ ಪಾವತಿಸಿದ್ದರು. ಅದಾದ ಕೆಲ ಸಮಯಗಳ ನಂತರ ಆರೋಪಿಗಳು, ದೂರುದಾರರ ಖಾತೆಯಿಂದ ಹಂತ ಹಂತವಾಗಿ ₹ 1.23 ಲಕ್ಷ ಡ್ರಾ ಮಾಡಿಕೊಂಡಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.