ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ದಿನ ಸಾಧಾರಣ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೆಲ ದಿನಗಳಿಂದ ರಾಜ್ಯದ ಹಲವೆಡೆ ಸುರಿಯುತ್ತಿದ್ದ ಮಳೆಯ ಆರ್ಭಟ ಸೋಮವಾರ ತಗ್ಗಿದೆ. ಮಂಗಳವಾರ, ಬುಧವಾರ, ಗುರುವಾರ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.
ಕರಾವಳಿಯಲ್ಲಿ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಹೋಗಬಾರದು ಎಂದು ಸೂಚಿಸಲಾಗಿದೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗಲಿದೆ ಎಂದು ತಿಳಿಸಿದೆ.
ಮರ ಬಿದ್ದು ಸಂಚಾರಕ್ಕೆ ಅಡ್ಡಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು–ಉಡುಪಿ ನಗರ ಸೇರಿದಂತೆ ಕರಾವಳಿಯಲ್ಲಿ ಸೋಮವಾರವೂ ಮಳೆಯ ಪ್ರಮಾಣ ಕಡಿಮೆಯಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಲ್ಲಲ್ಲಿ ಒಂದೆರಡು ಬಾರಿ ಸಾಮಾನ್ಯ ಮಳೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಒಟ್ಟಾರೆ 1.40 ಸೆಂ.ಮೀ ಮಳೆಯಾಗಿದೆ ಎಂದು ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕನ್ನು ಕರಾವಳಿಯೊಂದಿಗೆ ಸಂಪರ್ಕಿಸುವ ಚಾರ್ಮಾಡಿ ಘಾಟಿ ಹೆದ್ದಾರಿಯಲ್ಲಿ ಬೃಹತ್ ಮರವೊಂದು ಬಿದ್ದ ಕಾರಣ ಕಲೆಕಾಲ ಸಂಚಾರಕ್ಕೆ ಅಡ್ಡಿಯಾಯಿತು.
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ 3ನೇ ತಿರುವಿನ ಬಳಿ ಮರ ಬಿದ್ದಿತ್ತು. ಮೂಡಿಗೆರೆಯತ್ತ ವಾಹನಗಳಿಗೆ ಸಾಗಲು ಸಾಧ್ಯವಾಗದ ಕಾರಣ ಚಿಕ್ಕಮಗಳೂರು ಭಾಗಕ್ಕೆ ತೆರಳುವ ಪ್ರಯಾಣಿಕರು ಪರದಾಡಿದರು. ಕೆಲವು ಬಸ್‌ಗಳನ್ನು ಕೊಟ್ಟಿಗೆಹಾರದಲ್ಲೇ ನಿಲ್ಲಿಸಲಾಯಿತು. ಘಾಟಿಯಲ್ಲಿ ಸುಮಾರು 3 ಕಿ.ಮೀಗಳಷ್ಟು ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಳೆಯ ನಡುವೆಯೇ ಪೊಲೀಸ್ ಮತ್ತು ಅರಣ್ಯ ಇಲಾಖೆಯವರು ಮರ ತೆರವುಗೊಳಿಸಿದರು. ಮಂಗಳೂರಿನ ಫಲ್ಗುಣಿ ನದಿಯ ಅಳಿವೆಬಾಗಿಲು ನದಿಯ ದಡದಲ್ಲಿ ಮೇ 30ರಂದು ಬೆಳಿಗ್ಗಿನ ಜಾವ ಮೀನು ಹಿಡಿಯಲು ತೆರಳಿ ನಾಪತ್ತೆಯಾಗಿರುವ ತೋಟ ಬೆಂಗರೆ ನಿವಾಸಿಗಳಾದ ಯಶವಂತ ಕರ್ಕೇರಾ ಮತ್ತು ಕಮಲಾಕ್ಷ ಸಾಲಿಯಾನ್ ಅವರಿಗಾಗಿ ಹುಡುಕಾಟ ಸೋಮವಾರವೂ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.