ADVERTISEMENT

’ಗೋಲ್ಡನ್ ಸೇವಿಂಗ್ಸ್’ ಹೆಸರಿನಲ್ಲಿ ₹ 9.55 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 1 ಮೇ 2021, 16:23 IST
Last Updated 1 ಮೇ 2021, 16:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ಗೋಲ್ಡನ್ ಸೇವಿಂಗ್ಸ್’ ಹೆಸರಿನಲ್ಲಿ ₹ 9.55 ಲಕ್ಷ ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದ್ದು, ಈ ಸಂಬಂಧ ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಭಾರತಿನಗರದ 33 ವರ್ಷದ ನಿವಾಸಿ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರರ ಮೊಬೈಲ್‌ಗೆ ಕರೆ ಮಾಡಿದ್ದ ಆರೋಪಿ, ‘ನಮ್ಮದು ಹಣ ಉಳಿತಾಯ ಕಂಪನಿ ಇದೆ. ಹಣ ದ್ವಿಗುಣಗೊಳಿಸುವ ಯೋಜನೆಗಳಿದ್ದು, ನೀವು ಹಣ ಹೂಡಿಕೆ ಮಾಡಬಹುದು. ಹಣವನ್ನು ಯಾವಾಗ ಬೇಕಾದರೂ ಬಡ್ಡಿ ಸಮೇತ ವಾಪಸು ಪಡೆಯಬಹುದು’ ಎಂದಿದ್ದರು. ಅದನ್ನು ನಂಬಿದ್ದ ದೂರುದಾರ, ಆರೋಪಿ ನೀಡಿದ್ದ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ ₹ 9.55 ಲಕ್ಷ ಜಮೆ ಮಾಡಿದ್ದ’ ಎಂದೂ ತಿಳಿಸಿದರು.

ADVERTISEMENT

‘ಕೆಲ ದಿನ ಬಿಟ್ಟು ಪುನಃ ಕರೆ ಮಾಡಿದ್ದ ಆರೋಪಿ ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದ. ಅನುಮಾನಗೊಂಡಿದ್ದ ದೂರುದಾರ, ಈಗಾಗಲೇ ಪಾವತಿಸಿರುವ ಹಣವನ್ನು ವಾಪಸು ನೀಡುವಂತೆ ಒತ್ತಾಯಿಸಿದ್ದರು. ಅದಾದ ನಂತರ ಆರೋಪಿ ನಾಪತ್ತೆಯಾಗಿದ್ದಾನೆ. ಆರೋಪಿ ಹಲವರನ್ನು ವಂಚಿಸಿರುವ ಮಾಹಿತಿ ಇದೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.