ADVERTISEMENT

‘ಕಾರ್ಮಿಕ ವರ್ಗ ಸರಕು ಅಲ್ಲ’

ಎಂ.ಸಿ. ನರಸಿಂಹನ್‌, ಕೋ. ಚೆನ್ನಬಸಪ್ಪ ಸ್ಮರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 21:55 IST
Last Updated 26 ಜೂನ್ 2022, 21:55 IST
ನಗರದಲ್ಲಿ ಭಾನುವಾರ ಎಂ.ಸಿ. ನರಸಿಂಹನ್ ಮತ್ತು ಕೋ. ಚೆನ್ನಬಸಪ್ಪ ಅವರ ಸ್ಮರಣಾರ್ಥ ಆಯೋಜಿಸಿದ್ದ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ, ಹಿರಿಯ ವಕೀಲ ಕೆ. ಸುಬ್ಬರಾವ್, ಎಂ.ಎಸ್‌. ಕೃಷ್ಣನ್‌ ಸ್ಮರಣ ಸಂಸ್ಥೆಯ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ, ಡಾ.ಬದರಿನಾಥ್ ರಾವ್ ಭಾಗವಹಿಸಿದ್ದರು     –ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ ಎಂ.ಸಿ. ನರಸಿಂಹನ್ ಮತ್ತು ಕೋ. ಚೆನ್ನಬಸಪ್ಪ ಅವರ ಸ್ಮರಣಾರ್ಥ ಆಯೋಜಿಸಿದ್ದ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ, ಹಿರಿಯ ವಕೀಲ ಕೆ. ಸುಬ್ಬರಾವ್, ಎಂ.ಎಸ್‌. ಕೃಷ್ಣನ್‌ ಸ್ಮರಣ ಸಂಸ್ಥೆಯ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲ ಗೌಡ, ಡಾ.ಬದರಿನಾಥ್ ರಾವ್ ಭಾಗವಹಿಸಿದ್ದರು     –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಾರ್ಮಿಕ ವರ್ಗ ಸರಕು ಅಲ್ಲ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್‌ ಬಂಡವಾಳಶಾಹಿಯಿಂದ ಶೋಷಣೆ ನಡೆಯುತ್ತಿದೆ’ ಎಂದು ಅಮೆರಿಕದ ಕೆಟರಿಂಗ್‌ ವಿಶ್ವವಿದ್ಯಾಲಯದ ಸಮಾಜವಿಜ್ಞಾನ ಮತ್ತು ಏಷ್ಯನ್‌ ಅಧ್ಯಯನಗಳ ಸಹ ಪ್ರಾಧ್ಯಾಪಕ
ಡಾ. ಬದರಿನಾಥ್‌ ರಾವ್‌ ವಿಶ್ಲೇಷಿಸಿದರು.

ಎಂ.ಎಸ್‌. ಕೃಷ್ಣನ್‌ ಸ್ಮಾರಕ ಸಂಸ್ಥೆ, ಇಂಡಿಯನ್‌ ಅಸೋಸಿಯೇಷನ್‌ ಆಫ್‌ ಲಾಯರ್ಸ್‌, ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ ಆಶ್ರಯದಲ್ಲಿ ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ದಿವಂಗತಎಂ.ಸಿ. ನರಸಿಂಹನ್‌ ಹಾಗೂ ಸಾಹಿತಿ ದಿವಂಗತ ಕೋ. ಚೆನ್ನಬಸಪ್ಪ ಅವರ ಸ್ಮರಣಾರ್ಥ ಭಾನುವಾರ ಆಯೋಜಿಸಿದ್ದ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ದುಡಿಯುವ ವರ್ಗವನ್ನು ಸರಕುಎಂದು ಪರಿಗಣಿಸಿದರೆ ಸಾಮಾಜಿಕ ಅವ್ಯವಸ್ಥೆಗಳು ಹೆಚ್ಚಾಗುತ್ತವೆ. ಹೀಗಾಗಿ, ಇಂತಹ ಅಭಿಪ್ರಾಯವನ್ನು ಬಂಡವಾಳಶಾಹಿ ಮನಃಸ್ಥಿತಿಯಿಂದ ತೆಗೆದುಹಾಕಬೇಕಾಗಿದೆ’ ಎಂದು ತಿಳಿಸಿದರು.

ADVERTISEMENT

ಚೀನಾ, ಅಮೆರಿಕ ಸೇರಿ ವಿವಿಧ ದೇಶಗಳಲ್ಲಿ ಕಾರ್ಮಿಕರ ಪರಿಸ್ಥಿತಿ ಮತ್ತು ಕಾನೂನುಗಳನ್ನು ವಿಶ್ಲೇಷಿಸಿದ ಅವರು, ‘ಇಂದು ಆಧುನಿಕ ರೂಪದ ಗುಲಾಮಗಿರಿ ಹೆಚ್ಚುತ್ತಿದೆ. ಗುಲಾಮಗಿರಿ ಇಲ್ಲದ ಬಂಡವಾಳಶಾಹಿ ವ್ಯವಸ್ಥೆ ಎಲ್ಲಿಯೂ ಇಲ್ಲ. ಇಂತಹ ಗುಲಾಮಗಿರಿ ವ್ಯವಸ್ಥೆಯಲ್ಲಿ ಲಕ್ಷಾಂತರ ಮಂದಿ ಸಿಲುಕಿದ್ದಾರೆ’ ಎಂದು ವಿವರಿಸಿದರು.

‘ಜಗತ್ತಿನಾದ್ಯಂತ ನಿರುದ್ಯೋಗ ಹೆಚ್ಚಾಗುತ್ತಿದೆ. ಆದರೆ, ಅಧಿಕಾರದಲ್ಲಿರುವವರು ನಿರ್ಲಕ್ಷ್ಯ ಮನೋಭಾವ ಹೊಂದಿದ್ದಾರೆ.ಜಗತ್ತಿನಾದ್ಯಂತ 200 ಕೋಟಿಗೂ ಹೆಚ್ಚು ಜನ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಇವರ ದುಡಿಮೆಗೆ ಬೆಲೆ ಇಲ್ಲ. ಇವರಲ್ಲಿ ಮಹಿಳೆಯರೇ ಹೆಚ್ಚಾಗಿದ್ದು, ಇವರ ಕಾರ್ಯವನ್ನು ಗುರುತಿಸುತ್ತಿಲ್ಲ’ ಎಂದರು.

‘ಅಮೆರಿಕದಲ್ಲಿ ಕಾರ್ಮಿಕ ಕಾನೂನುಗಳು ಪರಿಣಾಮಕಾರಿಯಾಗಿಲ್ಲ. ವಕೀಲರು ದುಬಾರಿ ಶುಲ್ಕ ವಿಧಿಸುತ್ತಿರುವುದರಿಂದ ತಮ್ಮ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಬಹುತೇಕ ಮಂದಿ ನ್ಯಾಯಾಲಯದ ಮೊರೆಹೋಗುತ್ತಿಲ್ಲ. ಹೀಗಾಗಿ, ಹಕ್ಕುಗಳಿಗೆ ಬೆಲೆ ಇಲ್ಲದಂತಾಗಿದೆ. ಕಾರ್ಮಿಕರ ಯೂನಿಯನ್‌ಗಳ ಸದಸ್ಯತ್ವವೂ ಕಡಿಮೆಯಾಗುತ್ತಿದೆ. ಕಾರ್ಮಿಕರ ಹಕ್ಕುಗಳಿಗೆ ಚ್ಯುತಿಯಾಗುತ್ತಿದೆ. ಹೊಸ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು’ ಎಂದು ವಿವರಿಸಿದರು.

ಹಿರಿಯ ವಕೀಲ ಕೆ. ಸುಬ್ಬರಾವ್‌ ಮಾತನಾಡಿ, ‘ಕಮ್ಯುನಿಸ್ಟ್‌ ಪಕ್ಷದಿಂದ ವಿಧಾನಸಭೆಗೆ ಒಬ್ಬ ಶಾಸಕರನ್ನು ಸಹ ಆಯ್ಕೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ.ಎಡಪಂಥೀಯರು ಈ ಹಿಂದೆ ಮಾಡಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ. ದುಡಿಯುವ ವರ್ಗ ಒಗ್ಗಟ್ಟಾದರೆ ಬದಲಾವಣೆ ಸಾಧ್ಯ’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.