ADVERTISEMENT

ಯಶವಂತಪುರದಲ್ಲಿ ಬಹುಮಾದರಿ ಸಂಪರ್ಕ ವ್ಯವಸ್ಥೆ

ಮೆಟ್ರೊ–ನೈರುತ್ಯ ರೈಲ್ವೆ ನಿಲ್ದಾಣಗಳ ನಡುವೆ ಸುಗಮ ಸಂಚಾರಕ್ಕೆ ಹಲವು ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 21:17 IST
Last Updated 21 ಅಕ್ಟೋಬರ್ 2020, 21:17 IST
ಯಶವಂತಪುರ ರೈಲು ನಿಲ್ದಾಣ
ಯಶವಂತಪುರ ರೈಲು ನಿಲ್ದಾಣ   

ಬೆಂಗಳೂರು: ನಗರದ ಯಶವಂತಪುರದಲ್ಲಿನ ರೈಲು ಮತ್ತು ಮೆಟ್ರೊ ನಿಲ್ದಾಣದ ನಡುವೆ ಪ್ರಯಾಣಿಕರಿಗೆ ಬಹುಮಾದರಿ ಸಂಚಾರ ಸೌಲಭ್ಯ ಶೀಘ್ರದಲ್ಲಿಯೇ ದೊರಕಲಿದೆ. ಈ ಕುರಿತ ಒಪ್ಪಂದಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ನೈರುತ್ಯ ರೈಲ್ವೆಯೊಂದಿಗೆ ಬುಧವಾರ ಒಪ್ಪಂದಕ್ಕೆ ಸಹಿ ಹಾಕಿದೆ.

ಯಶವಂತಪುರವು ನೈರುತ್ಯ ರೈಲ್ವೆಯ ಪ್ರಮುಖ ನಿಲ್ದಾಣ. ಕೈಗಾರಿಕಾ, ವಾಣಿಜ್ಯ ಮತ್ತು ವಸತಿ ಪ್ರದೇಶಗಳ ಮಧ್ಯೆ ಈ ನಿಲ್ದಾಣವಿದೆ. ಮೆಟ್ರೊ ಮತ್ತು ಈ ನಿಲ್ದಾಣದ ನಡುವೆ ಹೆಚ್ಚು ಜನ ಪ್ರಯಾಣಿಸುತ್ತಾರೆ. ಒಪ್ಪಂದದ ಅನ್ವಯ, ಈ ನಿಲ್ದಾಣಗಳ ನಡುವೆ 82 ಮೀಟರ್‌ ಉದ್ದದ ಹೊಸ ಮೇಲ್ಸೇತುವೆ ನಿರ್ಮಿಸಲಾಗುತ್ತದೆ.

ನೈರುತ್ಯ ರೈಲ್ವೆ ಪ್ಲಾಟ್‌ಫಾರಂ ಮತ್ತು ಮೆಟ್ರೊ ನಿಲ್ದಾಣದೊಳಗೆ ನೇರವಾಗಿ ತಲುಪಲು ಮತ್ತೊಂದು ಮೇಲ್ಸೇತುವೆ ನಿರ್ಮಾಣವು ಸೇರಿದಂತೆ, ಉಭಯ ನಿಲ್ದಾಣಗಳ ನಡುವೆ ತಡೆರಹಿತ ಸಂಚಾರಕ್ಕಾಗಿ ಹಲವು ಕಾಮಗಾರಿಗಳನ್ನು ಉಭಯ ಸಂಸ್ಥೆಗಳು ಕೈಗೆತ್ತಿಕೊಳ್ಳಲಿವೆ.

ADVERTISEMENT

ಏನೇನು ಬರಲಿದೆ?

* ನೈರುತ್ಯ ರೈಲ್ವೆ ಪಾದಚಾರಿ ಮೇಲ್ಸೇತುವೆಯಿಂದ ಮೆಟ್ರೊ ನಿಲ್ದಾಣದ ಒಳಗಿನವರೆಗೆ 82 ಮೀಟರ್ ಉದ್ದದ ಮೇಲ್ಸೇತುವೆ

* ರೈಲ್ವೆ ನಿಲ್ದಾಣದ ಪಶ್ಚಿಮ ಭಾಗದಿಂದ ಪೂರ್ವ ಭಾಗಕ್ಕೆ 230 ಮೀಟರ್ ಉದ್ದದ ಹೊಸ ಪಾದಚಾರಿ ಮೇಲ್ಸೇತುವೆ

* ಮೆಟ್ರೊ ನಿಲ್ದಾಣದ ವಾಯವ್ಯ ಭಾಗದಿಂದ ರೈಲ್ವೆ ನಿಲ್ದಾಣಕ್ಕೆ ರಸ್ತೆಯಿಂದ ಪ್ರವೇಶ ಸೌಲಭ್ಯ

* ಬೆಂಗಳೂರು–ತುಮಕೂರು ರಸ್ತೆಯಿಂದ ರೈಲ್ವೆ ನಿಲ್ದಾಣವನ್ನು ಮೆಟ್ರೊ ನಿಲ್ದಾಣದ ಮಧ್ಯ ಭಾಗದಿಂದಲೇ ತಲುಪಲು ಅವಕಾಶ ಕಲ್ಪಿಸಲಾಗುತ್ತದೆ

* ಬಿಎಂಟಿಸಿ ಬಸ್‌ಗಳನ್ನು ನಿಲ್ಲಿಸಲು ತುಮಕೂರು–ಬೆಂಗಳೂರು ರಸ್ತೆಯ ನೈರುತ್ಯ ಮೂಲೆಯಲ್ಲಿ ಸ್ಥಳಾವಕಾಶ

* ಆಟೊ ನಿಲ್ದಾಣ ಸಾಮರ್ಥ್ಯ ವಿಸ್ತರಣೆ

* ಕಾರು, ಟ್ಯಾಕ್ಸಿ, ಆಟೊಗಳಿಗೆ ಪಿಕ್‌ ಅಪ್‌–ಡ್ರಾಪ್‌ ಸ್ಥಳಗಳು

* ಸೈಕಲ್‌ ಮತ್ತು ದ್ವಿಚಕ್ರ ಬಾಡಿಗೆ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳ

* ನಿಲ್ದಾಣಗಳ ಮುಂದಿನ ಖಾಲಿ ಜಾಗದ ಸೌಂದರ್ಯೀಕರಣಕ್ಕೆ ಒತ್ತು

ಹೈದರಾಬಾದ್ ಸಂಸ್ಥೆಗೆ ಗುತ್ತಿಗೆ

ಪಾದಚಾರಿ ಮೇಲ್ಸೇತುವೆ ಮತ್ತು ವಾಹನ ನಿಲುಗಡೆ ಸೌಲಭ್ಯಗಳ ವಿನ್ಯಾಸದ ಗುತ್ತಿಗೆಯನ್ನು ಹೈದರಾಬಾದ್‌ನ ಆರ್ವಿ ಸಂಸ್ಥೆಗೆ ಬಿಎಂಆರ್‌ಸಿಎಲ್ ನೀಡಿದೆ. ನೈರುತ್ಯ ರೈಲ್ವೆಯು ಈಗಾಗಲೇ ಇತರೆ ಸೌಲಭ್ಯಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಸೋಪ್‌ ಫ್ಯಾಕ್ಟರಿಯಿಂದ–ಟಿಟಿಎಂಸಿಯವರೆಗೆ ಮೇಲ್ಸೇತುವೆ

ಮೈಸೂರು ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿಯಿಂದ ಯಶವಂತಪುರದ ಬಿಎಂಟಿಸಿ ನಿಲ್ದಾಣದವರೆಗೆ 1,500 ಮೀಟರ್‌ ಉದ್ದದ ಪಾದಚಾರಿ ಮೇಲ್ಸೇತುವೆ ತಲೆ ಎತ್ತಲಿದೆ. ಇಲ್ಲಿಂದ, ಭಾರತೀಯ ವಿಜ್ಞಾನ ಸಂಸ್ಥೆಯವರೆಗೆ (ಐಐಎಸ್‌ಸಿ) ಸಂಪರ್ಕ ಕಲ್ಪಿಸುವ ಉದ್ದೇಶವಿದೆ. ಈ ಮೇಲ್ಸೇತುವೆಯ ವಿನ್ಯಾಸದ ಗುತ್ತಿಗೆಯನ್ನೂ ಆರ್ವೀ ಅಸೋಸಿಯೇಟ್ಸ್‌ಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.