ADVERTISEMENT

ಮುನಿರತ್ನ ಪ್ರಕರಣ: ಅಸಿಂಧು ಕೋರಿದ ಅರ್ಜಿ ವಜಾ

ಮುನಿರತ್ನ ಪ್ರಕರಣ: ತಿದ್ದುಪಡಿ ದಾವೆ ವಿಚಾರಣೆಗೆ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2020, 23:03 IST
Last Updated 20 ಮಾರ್ಚ್ 2020, 23:03 IST
ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಎನ್.ಮುನಿರತ್ನ
ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಎನ್.ಮುನಿರತ್ನ   

ಬೆಂಗಳೂರು: ‘2018ರ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್‌ನ ವಿಜೇತ ಅಭ್ಯರ್ಥಿ ಎನ್. ಮುನಿರತ್ನ (ಸದ್ಯ ಅನರ್ಹ ಶಾಸಕ) ಚುನಾವಣಾ ಅಕ್ರಮ ಎಸಗಿದ್ದು, ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ನನ್ನನ್ನೇ ಆಯ್ಕೆ ಮಾಡಬೇಕು’ ಎಂದು ಕೋರಿ ತುಳಸಿ ಮುನಿರಾಜುಗೌಡ ಸಲ್ಲಿಸಿರುವ ಮಧ್ಯಂತರ ಮನವಿಯನ್ನು ವಜಾ ಮಾಡಿರುವ ಹೈಕೋರ್ಟ್, ತಿದ್ದುಪಡಿ ಮಾಡಿದ ಮೂಲ ದಾವೆ ವಿಚಾರಣೆಗೆ ಸಮ್ಮತಿಸಿದೆ.

ಈ ಕುರಿತಂತೆ ತುಳಸಿ ಮುನಿರಾಜು ಗೌಡ ಸಲ್ಲಿಸಿದ್ದ ಎರಡು ಮಧ್ಯಂತರ ಅರ್ಜಿಗಳಲ್ಲಿ ಒಂದನ್ನು ತಿರಸ್ಕರಿಸಲಾಗಿದೆ. ಮುನಿರತ್ನ ಸಲ್ಲಿಸಿದ್ದ ಮೂರು ಮಧ್ಯಂತರ ಅರ್ಜಿಗಳಲ್ಲಿ ಒಂದನ್ನು ಅಂಗೀಕರಿಸಿದ್ದು ಎರಡನ್ನು ತಿರಸ್ಕರಿಸಲಾಗಿದೆ.

ಈ ಕುರಿತಂತೆ ಮಧ್ಯಂತರ ಅರ್ಜಿಗಳ ಮೇಲಿನ ವಿಚಾರಣೆ ಪೂರೈಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಕಲಬುರ್ಗಿ ಪೀಠದಿಂದ ಶುಕ್ರವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಕಟಿಸಿದೆ.

ADVERTISEMENT

ಇದರಿಂದಾಗಿ 2018ರ ಜುಲೈ 8 ರಂದು ತುಳಸಿ ಮುನಿರಾಜುಗೌಡ ಸಲ್ಲಿಸಿರುವ ಮೂಲ ಚುನಾವಣಾ ತಕರಾರು ಅರ್ಜಿಯಲ್ಲಿ ಈಗಿನ ಮಧ್ಯಂತರ ಅರ್ಜಿಯ ತಿದ್ದುಪಡಿ ಕೋರಿಕೆ ಅಡಕವಾಗಲಿದೆ. ಇದರ ಆಧಾರದಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.

ಚುನಾವಣಾ ಅಕ್ರಮ ಎಸಗಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಒದಗಿಸಲು ಕೋರಿದ ಅಂಶವನ್ನು ತಿದ್ದುಪಡಿ ಅರ್ಜಿಯಲ್ಲಿ ಸೇರಿಸಲು ನ್ಯಾಯಪೀಠ ಅವಕಾಶ ಕಲ್ಪಿಸಿದೆ. ಮೂಲ ಅರ್ಜಿಯಲ್ಲಿ ಈ ಅಂಶ ಇರಲಿಲ್ಲ ಎಂಬ ಕಾರಣಕ್ಕೆ ಈಗ ಅದನ್ನು ಸೇರ್ಪಡೆ ಮಾಡಿ ವಿಚಾರಣೆ ನಡೆಸಬೇಕು ಎಂಬ ತುಳಸಿ ಮುನಿರಾಜು ಗೌಡರ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.