ADVERTISEMENT

ಮಿತ್ರನ ಪತ್ನಿಯನ್ನು ಒಲಿಸಿಕೊಳ್ಳಲು ಹತ್ಯೆ; ನಾಲ್ವರ ಸೆರೆ

ನಗ್ನ ವಿಡಿಯೊ ಫೇಸ್‌ಬುಕ್‌ಗೆ ಹಾಕಿ ಕಿರುಕುಳ

​ಪ್ರಜಾವಾಣಿ ವಾರ್ತೆ
Published 22 ಮೇ 2019, 19:54 IST
Last Updated 22 ಮೇ 2019, 19:54 IST
ಪೊಲೀಸರ ಬಲೆಗೆ ಬಿದ್ದಿರುವ ಆರೋಪಿಗಳು
ಪೊಲೀಸರ ಬಲೆಗೆ ಬಿದ್ದಿರುವ ಆರೋಪಿಗಳು   

ಬೆಂಗಳೂರು: ತನಗೆ ಆಶ್ರಯ ಕೊಟ್ಟಿದ್ದ ಗೆಳೆಯನ ಪತ್ನಿ ಮೇಲೆ ಕಣ್ಣು ಹಾಕಿದ್ದ ಕಿಶೋರ್ ಎಂಬಾತ, ಅವರನ್ನು ಒಲಿಸಿಕೊಳ್ಳಲು ಸಹಚರರೊಂದಿಗೆ ಸೇರಿ ಗೆಳೆಯನನ್ನೇ ಬರ್ಬರವಾಗಿ ಕೊಂದಿದ್ದ. ಇದೀಗ ಆ ಸಹಚರರನ್ನು ಸೆರೆ ಹಿಡಿದಿರುವ ರಾಜಗೋಪಾಲನಗರ ಪೊಲೀಸರು, ತಲೆಮರೆಸಿಕೊಂಡಿರುವ ಕಿಶೋರ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಹೆಗ್ಗನಹಳ್ಳಿಯ ರವೀಶ್ ಅಲಿಯಾಸ್ ರವಿ (44), ಜಿತೇಂದ್ರ ಅಲಿಯಾಸ್ ಜೀತು (30), ಅಂದ್ರಹಳ್ಳಿಯ ಸುಮಂತ್ ರಾಜ್ (29) ಹಾಗೂ ಪ್ರದೀಪ್ (40) ಬಂಧಿತರು. ಮೇ 12ರಂದು ಕಿಶೋರ್ ಜತೆ ಶ್ರೀಗಂಧನಗರ 2ನೇ ಮುಖ್ಯರಸ್ತೆಗೆ ಬಂದಿದ್ದ ಇವರು, ಕಬಾಬ್ ಅಂಗಡಿ ಮಾಲೀಕ ಉಮೇಶ್ (37) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಾವಳಿ ಹಾಗೂ ಮೊಬೈಲ್ ಕರೆ ವಿವರದ (ಸಿಡಿಆರ್) ಸುಳಿವು ಆಧರಿಸಿ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್ ದಿನೇಶ್ ಪಾಟೀಲ್ ನೇತೃತ್ವದ ತಂಡ, ತುಮಕೂರು ಹಾಗೂ ಚಿತ್ರದುರ್ಗದ ಸಂಬಂಧಿಕರ ಮನೆಗಳಲ್ಲಿ ಅಡಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ಆತ್ಮೀಯತೆ ತಂದ ಆಪತ್ತು: 13 ವರ್ಷಗಳ ಹಿಂದೆ ತಮ್ಮೂರಿನ ಯುವತಿಯನ್ನೇ ವಿವಾಹವಾಗಿದ್ದ ಮದ್ದೂರಿನ ಉಮೇಶ್, ನಂತರ ನಗರಕ್ಕೆ ಬಂದು ಹೆಗ್ಗನಹಳ್ಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಇವರ ಮಗಳು ಓದುತ್ತಿರುವ ಶಾಲೆಯಲ್ಲೇ ಕಿಶೋರ್ ಒಂದೂವರೆ ವರ್ಷದಿಂದ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ಕಾರಣದಿಂದ ಉಮೇಶ್ ಅವರಿಗೆ ಆತನ ಜತೆ ಸ್ನೇಹ ಬೆಳೆದಿತ್ತು. ದಿನ ಕಳೆದಂತೆ ಇಬ್ಬರೂ ತುಂಬಾ ಆಪ್ತರಾಗಿದ್ದರು.

‘ನನಗೆ ಕಡಿಮೆ ಸಂಬಳ ಬರುತ್ತಿದ್ದು, ಮನೆ ಬಾಡಿಗೆ ಕಟ್ಟುವುದಕ್ಕೂ ಆಗುತ್ತಿಲ್ಲ’ ಎಂದು ಕಿಶೋರ್ ಹೇಳಿಕೊಂಡಾಗ, ಉಮೇಶ್ ಆರು ತಿಂಗಳ ಕಾಲ ತಮ್ಮ ಮನೆಯಲ್ಲೇ ಆತನಿಗೆ ಆಶ್ರಯ ಕೊಟ್ಟಿದ್ದರು. ಈ ವೇಳೆ ಗೆಳೆಯನ ಪತ್ನಿ ಮೇಲೆ ಕಣ್ಣು ಹಾಕಿದ್ದ ಆತ, ಅವರು ಸ್ನಾನ ಮಾಡುತ್ತಿರುವ ಹಾಗೂ ಬಟ್ಟೆ ಬದಲಿಸುತ್ತಿರುವ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ನಂತರ ಆ ದೃಶ್ಯಗಳನ್ನು ತೋರಿಸಿ, ‘ನನ್ನೊಂದಿಗೆ ಸಹಕರಿಸದಿದ್ದರೆ, ಈ ವಿಡಿಯೊಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡುತ್ತೇನೆ’ ಎಂದು ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ. ಇದರಿಂದ ದಿಕ್ಕು ತೋಚದಂತಾದ ಮಹಿಳೆ, ಕಿಶೋರ್‌ನ ಕಿರುಕುಳವನ್ನು ಗಂಡನ ಬಳಿ ಹೇಳಿಕೊಂಡಿದ್ದರು.

ಇದೇ ವಿಚಾರವಾಗಿ ಜ.13ರಂದು ಅವರಿಬ್ಬರ ನಡುವೆ ಜಗಳವಾಗಿತ್ತು. ಪರಿಚಿತರ ಎದುರೇ ಹೊಡೆದು ತನ್ನನ್ನು ಮನೆಯಿಂದ ಹೊರ ಹಾಕಿದ್ದರಿಂದ ಕುಪಿತಗೊಂಡ ಕಿಶೋರ್, ಜ.15ರಂದು ಎಲ್ಲ ವಿಡಿಯೊಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿಬಿಟ್ಟಿದ್ದ. ಅಲ್ಲದೆ, ಸ್ನೇಹಿತರ ಮೊಬೈಲ್‌ಗಳಿಗೂ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದ.

ಈ ವಿಚಾರ ಗೊತ್ತಾದ ಕೂಡಲೇ ಉಮೇಶ್ ಪತ್ನಿ ರಾಜಗೋಪಾಲನಗರ ಠಾಣೆಗೆ ದೂರು ಕೊಟ್ಟಿದ್ದರು. ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಜೈಲಿನಲ್ಲೇ ಸಂಚು: ದಂಪತಿ ವಿರುದ್ಧ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿಕೊಂಡೇ ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ಕಿಶೋರ್, ಇದೇ ಮೇ 1ರಿಂದ ಲಗ್ಗೆರೆ ಮುಖ್ಯರಸ್ತೆಯ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಅಲ್ಲೇ ದುಡಿಯುತ್ತಿದ್ದ ರವೀಶ್, ಜಿತೇಂದ್ರ, ಸುಮಂತ್ ಹಾಗೂ ಪ್ರದೀಪ್ ಅವರ ಸ್ನೇಹ ಸಂಪಾದಿಸಿಕೊಂಡ.

ಮೇ 12ರ ಸಂಜೆ ಬಾರ್‌ ಒಂದರಲ್ಲಿ ನಾಲ್ವರಿಗೂ ಕಂಠಪೂರ್ತಿ ಕುಡಿಸಿದ್ದ ಕಿಶೋರ್, ‘ಈ ರಾತ್ರಿ ಒಂದು ಕೊಲೆ ಮಾಡಬೇಕು. ನೀವು ನನಗೆ ಸಹಕಾರ ನೀಡಿದರೆ ಒಬ್ಬೊಬ್ಬರಿಗೆ ₹ 10 ಸಾವಿರ ಕೊಡುತ್ತೇನೆ’ ಎಂದು ಆಮಿಷವೊಡ್ಡಿದ್ದ. ಅದಕ್ಕೆ ಅವರು ಒಪ್ಪಿಕೊಂಡಿದ್ದರು. ನಂತರ ಮಚ್ಚು–ಲಾಂಗುಗಳೊಂದಿಗೆ ಉಮೇಶ್ ಅವರ ಅಂಗಡಿಗೇ ನುಗ್ಗಿದ್ದ ಆರೋಪಿಗಳು, ಮುಖಕ್ಕೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಮನೆ ಬಳಿ ಗಲಾಟೆ ಮಾಡಿದ್ದಕ್ಕೆ ಸಿಟ್ಟು

‘ಕಿಶೋರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಉಮೇಶ್ ಪತ್ನಿ ಆತನ ಮನೆ ಬಳಿ ಹೋಗಿ ಕೂಗಾಡಿದ್ದರು. ‘ನನ್ನ ವಿಡಿಯೊ ಫೇಸ್‌ಬುಕ್‌ಗೆ ಹಾಕ್ತೀಯಾ. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಲ್ವಾ’ ಎಂದು ಕೂಗಾಡಿದ್ದರು. ಅಲ್ಲದೇ, ಆತನ ತಾಯಿ–ತಂಗಿ ಮೇಲೂ ಹಲ್ಲೆ ನಡೆಸಿದ್ದರು. ಇದರಿಂದ ಕುಪಿತಗೊಂಡ ಕಿಶೋರ್, ‘ಗಂಡನನ್ನು ಮುಗಿಸಿದರೆ, ಇವಳಿಗೆ ಬೇರೆ ಯಾರೂ ಗತಿ ಇರುವುದಿಲ್ಲ. ಆಮೇಲೆ ನನ್ನ ಜತೆಗೇ ಇರುತ್ತಾಳೆ’ ಎಂದು ಭಾವಿಸಿ ಉಮೇಶ್ ಅವರನ್ನು ಮುಗಿಸಿದ್ದಾನೆ ಎಂಬುದು ಈವರೆಗಿನ ತನಿಖೆಯಿಂದ ಗೊತ್ತಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.