ADVERTISEMENT

ಬೈಕ್ ಅಡ್ಡಗಟ್ಟಿ 22 ಸಲ ಇರಿದು ಕೊಂದರು!

ಎಂಟು ತಾಸು ಬಾರ್‌ನಲ್ಲಿ ಪಾರ್ಟಿ: ಗೆಳೆಯರಿಂದಲೇ ಹತ್ಯೆಯಾದ ನರಸಿಂಹ?

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 19:51 IST
Last Updated 3 ಏಪ್ರಿಲ್ 2019, 19:51 IST
ನರಸಿಂಹ
ನರಸಿಂಹ   

ಬೆಂಗಳೂರು: ರಾಜಗೋಪಾಲನಗರ ಸಮೀಪದ ಅನ್ನಪೂರ್ಣೇಶ್ವರಿನಗರ 2ನೇ ಮುಖ್ಯರಸ್ತೆಯಲ್ಲಿ ಮಂಗಳವಾರ ರಾತ್ರಿ ನರಸಿಂಹ ಅಲಿಯಾಸ್ ಚೌಕಿ (25) ಎಂಬಾತನ ಮೇಲೆರಗಿದ ದುಷ್ಕರ್ಮಿಗಳು, 22 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ತುರುವೇಕೆರೆಯ ನರಸಿಂಹ, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ರಾಜಗೋಪಾಲನಗರದಲ್ಲಿ ನೆಲೆಸಿದ್ದ. ಮಧ್ಯಾಹ್ನ 3.30ರ ಸುಮಾರಿಗೆ ಗೆಳೆಯರೊಂದಿಗೆ ನಂದಿನಿ ಲೇಔಟ್‌ನ ‘ಸಿಕೆಎಂ ಬಾರ್‌’ಗೆ ತೆರಳಿದ್ದ ಆತ, ಪಾನಮತ್ತನಾಗಿ ರಾತ್ರಿ 11.30ರ ಸುಮಾರಿಗೆ ಬಾರ್‌ನಿಂದ ಆಚೆ ಬಂದಿದ್ದ. ನಂತರ ಬೈಕ್‌ನಲ್ಲಿ ಮನೆಗೆ ಮರಳುವಾಗ ಬೈಕ್‌ಗಳಲ್ಲಿ ಬಂದ ಐವರು, ಚಾಕುವಿನಿಂದ ಮನಸೋಇಚ್ಛೆ ಇರಿದು ಪರಾರಿಯಾಗಿದ್ದಾರೆ.

ಗೆಳೆಯರ ಮೇಲೆಶಂಕೆ: ಹಿರಿಯೂರಿನ ಬಳಿ ಹೆದ್ದಾರಿಯಲ್ಲಿ ವಾಹನ ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣದಲ್ಲಿ ಎಂಟು ತಿಂಗಳ ಹಿಂದೆ ಜೈಲು ಸೇರಿದ್ದ ನರಸಿಂಹ, ವಾರದ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರಬಂದ ಖುಷಿಯಲ್ಲಿ ಗೆಳೆಯರಿಗೆ ಮಂಗಳವಾರ ತಾನೇ ಪಾರ್ಟಿ ಕೊಡಿಸಿದ್ದ.

ADVERTISEMENT

ಕಂಠಪೂರ್ತಿ ಕುಡಿದ ಗೆಳೆಯರು, ಇತ್ತೀಚೆಗೆ ಕಳವು ಮಾಡಿದ್ದ ಬೈಕ್‌ಗಳ ವಿಚಾರವಾಗಿ ನರಸಿಂಹನ ಜತೆ ಜಗಳ ತೆಗೆದಿದ್ದರು. ‘ನೀನು ನಮಗೆಲ್ಲ ಮೋಸ ಮಾಡುತ್ತಿದ್ದೀಯಾ. ಬೈಕ್‌ಗಳನ್ನು ಮಾರಿದ ಹಣದಲ್ಲಿ ನಮಗೆ ಪಾಲು ಕೊಟ್ಟಿಲ್ಲ’ ಎಂದಿದ್ದರು. ಅದಕ್ಕೆ ನರಸಿಂಹ, ‘ನಿಮಗೆ ಊಟ–ಎಣ್ಣೆ ಕೊಡಿಸೋದಲ್ಲದೆ, ದುಡ್ಡು ಬೇರೆ ಕೊಡಬೇಕಾ’ ಎಂದಿದ್ದ. ಹೀಗೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆಗ ಬಾರ್ ನೌಕರರು ‌ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಈ ಗಲಾಟೆಯ ಬೆನ್ನಲ್ಲೇ ಹತ್ಯೆ ನಡೆದಿರುವುದರಿಂದ ಗೆಳೆಯರ ಮೇಲೇ ಅನುಮಾನ ದಟ್ಟವಾಗಿದೆ. ಅವರೆಲ್ಲ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ರಾಜಗೋಪಾಲನಗರ ಪೊಲೀಸರು ಹೇಳಿದರು.

‘ಮೊದಲು ಕುತ್ತಿಗೆಗೆ ಇರಿದಿರುವ ಹಂತಕರು, ಕುಸಿದು ಬೀಳುತ್ತಿದ್ದಂತೆಯೇ ಹೊಟ್ಟೆ ಹಾಗೂ ಎದೆಗೆ ಮನಸೋಇಚ್ಛೆ ಚುಚ್ಚಿದ್ದಾರೆ. ಆ ದೃಶ್ಯ ಸಮೀಪದ ಕಟ್ಟಡ ಒಂದರ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೇಹದ 22 ಕಡೆ ಇರಿದಿರುವುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

‘ಮೊದಲು ಪುರುಷೋತ್ತಮ್ ಎಂಬುವರ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ನರಸಿಂಹ, ದರೋಡೆ ಕೃತ್ಯಕ್ಕೆ ಇಳಿದ ಬಳಿಕ ಆ ಕೆಲಸ ತೊರೆದಿದ್ದ. ಹಿರಿಯೂರು ಮಾತ್ರವಲ್ಲದೆ, ನಗರದ ಕೆಂಗೇರಿ ಹಾಗೂ ರಾಜಗೋಪಾಲನಗರ ಠಾಣೆಗಳಲ್ಲೂ ಈತನ ವಿರುದ್ಧ ದರೋಡೆ ಪ್ರಕರಣಗಳು ದಾಖಲಾಗಿದ್ದವು. ಹಂತಕರ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಚಿಲ್ಲರೆ’ ವಿಚಾರಕ್ಕೆ ಜಗಳ

‘ಚಿಲ್ಲರೆ’ ವಿಚಾರಕ್ಕೆ ಜಗಳವಾಗಿ ತನ್ನ ಹತ್ತು ವರ್ಷದ ಸ್ನೇಹಿತ ಪ್ರತಾಪ್ ಅಲಿಯಾಸ್ ಬ್ಲಡ್ ಬಾಬು (36) ಅವರನ್ನು ಮೂಗಿಗೆ ಗುದ್ದಿ ಕೊಂದ ಆರೋಪದಡಿಶ್ರೀನಿವಾಸ್ ಮೂರ್ತಿ ಅಲಿಯಾಸ್ ಚಿನ್ನು (32) ಎಂಬಾತನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಕೂಲಿ ಕೆಲಸ ಮಾಡುವ ಇಬ್ಬರೂ, ಜಾಲಹಳ್ಳಿ ಸಮೀಪದ ರಾಮಚಂದ್ರಾಪುರದಲ್ಲಿ ನೆಲೆಸಿದ್ದರು. ಸೋಮವಾರ ರಾತ್ರಿ ಪ್ರತಾಪ್ ಮದ್ಯ ತರುವಂತೆ ಗೆಳೆಯನಿಗೆ ₹ 500 ಕೊಟ್ಟು ಕಳುಹಿಸಿದ್ದರು. ಅಂತೆಯೇ ಶ್ರೀನಿವಾಸ್ ಸಮೀಪದ ಬಾರ್‌ಗೆ ಹೋಗಿ ಮದ್ಯ ತಂದಿದ್ದ. ನಂತರ ಇಬ್ಬರೂ ಒಟ್ಟಿಗೇ ಪಾನಮತ್ತರಾಗಿದ್ದರು.

ಕೊನೆಗೆ ಪ್ರತಾಪ್ ಚಿಲ್ಲರೆ ಕೇಳಿದಾಗ, ಆತ ‘ಚಿಲ್ಲರೆ ಉಳಿಯಲಿಲ್ಲ’ ಎಂದಿದ್ದ. ಇದೇ ವಿಚಾರಕ್ಕೆ ಮಾತಿನ ಚಕಮಕಿ ನಡೆದು, ಶ್ರೀನಿವಾಸ್ ಗೆಳೆಯನ ಮೂತಿಗೆ ಮುಷ್ಟಿಯಿಂದ ಗುದ್ದಿದ್ದ. ಕುಸಿದು ಬಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಸಂಜೆವರೆಗೂ ಚೆನ್ನಾಗಿದ್ದ ಪ್ರತಾಪ್, ರಾತ್ರಿ ಪುನಃ ಮೂಗಿನಿಂದ ರಕ್ತ ಸ್ರಾವ ತೀವ್ರಗೊಂಡಿದ್ದರಿಂದ ಮೃತಪಟ್ಟರು’ ಎಂದು ವಿದ್ಯಾರಣ್ಯಪುರ ಪೊಲೀಸರು ಹೇಳಿದರು.

‘ಪ್ರತಾಪ್‌ ಹೀಮೋಫಿಲಿಯಾ (ರಕ್ತಸ್ರಾವದ ಸಮಸ್ಯೆ) ಕಾಯಿಲೆಯಿಂದ ಬಳಲುತ್ತಿದ್ದರು. ಮಂಗಳವಾರ ಬೆಳಿಗ್ಗೆ ನಮ್ಮೊಂದಿಗೆ ಮಾತನಾಡಿದ್ದ ಅವರು, ‘ಶ್ರೀನಿವಾಸ್ ನನ್ನ ಗೆಳೆಯ. ನಮ್ಮಿಬ್ಬರ ನಡುವೆ ಜಗಳ ಮಾಮೂಲಿ. ಯಾವುದೇ ಕೇಸ್ ಮಾಡ್ಬೇಡಿ ಸರ್’ ಎಂದಿದ್ದರು. ಆದರೆ, ರಾತ್ರಿ ‌ಕೊನೆಯುಸಿರೆಳೆದರು. ಅವರ ಪತ್ನಿ ಕೊಟ್ಟ ದೂರಿನ ಮೇರೆಗೆ ಕೊಲೆ (ಐಪಿಸಿ 302) ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ವಶಕ್ಕೆ ಪಡೆದೆವು’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.