ADVERTISEMENT

ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಬಾಲಕನಿಂದ ವಿವಾಹಿತೆಯ ಹತ್ಯೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 16:40 IST
Last Updated 20 ಅಕ್ಟೋಬರ್ 2021, 16:40 IST
   

ಬೆಂಗಳೂರು: ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ವಿವಾಹಿತ ಮಹಿಳೆಯನ್ನು ಆಕೆಯ ಸಂಬಂಧಿಯೇ ಆಗಿರುವ ಬಾಲಕನೊಬ್ಬ ಹತ್ಯೆ ಮಾಡಿದ್ದು, ಬನಶಂಕರಿ ಪೊಲೀಸರು ಆರೋಪಿಯನ್ನು ಬುಧವಾರ ಬಂಧಿಸಿದ್ದಾರೆ.

ಆಫ್ರಿನಾ ಖಾನಂ (28) ಕೊಲೆಯಾದ ಮಹಿಳೆ.

‘17 ವರ್ಷ ವಯಸ್ಸಿನ ಆರೋಪಿ ಜೊತೆ ಮೃತ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದರು. ಮದುವೆಯಾಗುವಂತೆ ಪೀಡಿಸುತ್ತಿದ್ದ ಆಕೆ, ಬೇರೆ ಮನೆಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸುತ್ತಿದ್ದಳು. ಇದರಿಂದ ಬೇಸತ್ತು ಆಕೆಯ ಹತ್ಯೆ ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ಟೈಲರಿಂಗ್‌ ಕೆಲಸ ಮಾಡುತ್ತಿದ್ದ ಆಫ್ರಿನಾ, ಪತಿ ಲಾಲು ಖಾನ್‌ ಹಾಗೂ ಇಬ್ಬರು ಮಕ್ಕಳ ಜೊತೆಯಾರಬ್‌ ನಗರದಲ್ಲಿ ವಾಸವಿದ್ದರು. ಲಾಲು ಅವರ ಸಹೋದರಿಯ ಮಗನಾಗಿರುವ ಆರೋಪಿ, ಆಗಾಗ ಮನೆಗೆ ಬರುತ್ತಿದ್ದ. ಆಫ್ರಿನಾ ಜೊತೆ ಸಲುಗೆಯಿಂದಲೇ ಇರುತ್ತಿದ್ದ. ಹತ್ತಿರದ ಸಂಬಂಧಿಯೇ ಆಗಿದ್ದರಿಂದ ಇಬ್ಬರ ನಡುವೆ ಅಕ್ರಮ ಸಂಬಂಧ ಏರ್ಪಟ್ಟಿರುವ ಬಗ್ಗೆ ಯಾರಿಗೂ ಅನುಮಾನ ಮೂಡಿರಲಿಲ್ಲ’ ಎಂದು ತಿಳಿಸಿದ್ದಾರೆ.

‘ಪತ್ನಿಯ ಶೀಲ ಶಂಕಿಸಿ ಲಾಲು ಆಗಾಗ ಜಗಳವಾಡುತ್ತಿದ್ದರು. ಸೋಮವಾರ ರಾತ್ರಿಯೂ ಇಬ್ಬರ ನಡುವೆ ಜಗಳ ನಡೆದಿತ್ತು. ಹೀಗಾಗಿ ಆಫ್ರಿನಾ, ಇಬ್ಬರೂ ಮಕ್ಕಳನ್ನು ತಾಯಿಯ ಮನೆಗೆ ಕಳುಹಿಸಿದ್ದರು. ಗುರಪ್ಪನಪಾಳ್ಯದ ಟಿಂಬರ್‌ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಲಾಲು ಖಾನ್‌, ಮಂಗಳವಾರ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಆಫ್ರಿನಾ ಏಕಾಂಗಿಯಾಗಿ ಇರುವುದನ್ನು ಗಮನಿಸಿದ್ದ ಆರೋಪಿ ಮನೆಗೆ ಹೋಗಿದ್ದ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಕೋಪಗೊಂಡ ಆರೋಪಿ, ಕತ್ತರಿಯಿಂದ ಮಹಿಳೆಯ ದೇಹಕ್ಕೆ ಮನಬಂದಂತೆ ಚುಚ್ಚಿದ್ದ. ಚಾಕುವಿನಿಂದ ಇರಿದು ಕೊಲೆ ಮಾಡಿದ್ದ’ ಎಂದು ವಿವರಿಸಿದ್ದಾರೆ.

‘ಕೊಲೆ ಮಾಡಿರುವುದು ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಆರೋಪಿಯು ಬಟ್ಟೆಯೊಂದಕ್ಕೆ ಬೆಂಕಿ ಹಚ್ಚಿ ಅದನ್ನು ಮೃತದೇಹದ ಮೇಲೆ ಎಸೆದಿದ್ದ. ಬಳಿಕ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದ. ಸಂಜೆ 4.30ರ ಸುಮಾರಿಗೆ ಮನೆಯೊಳಗಿಂದ ಹೊಗೆ ಬರುತ್ತಿದ್ದುದ್ದನ್ನು ಗಮನಿಸಿದ್ದ ನೆರೆಹೊರೆಯವರು ಆಫ್ರಿನಾ ಸಹೋದರರಿಗೆ ವಿಷಯ ತಿಳಿಸಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಅವರು ಮನೆ ಬಾಗಿಲು ಒಡೆದು ಒಳ ನುಗ್ಗಿದ್ದರು. ಕೊಠಡಿಯಲ್ಲಿದ್ದ ಮಂಚದ ಮೇಲೆ ಮೃತದೇಹ ಕಂಡುಬಂದಿತ್ತು. ಈ ವಿಚಾರವನ್ನು ಆಕೆಯ ಪತಿಗೆ ತಿಳಿಸಿದ್ದ ಅವರು ಬಳಿಕ ನಮಗೂ ಮಾಹಿತಿ ಮುಟ್ಟಿಸಿದ್ದರು’ ಎಂದು ತಿಳಿಸಿದ್ದಾರೆ.

‘ಬೆಂಕಿಯಿಂದಾಗಿ ಹಾಸಿಗೆಯ ಒಂದು ಭಾಗ ಹಾಗೂ ಮೃತದೇಹದ ಮೇಲಿದ್ದ ಬಟ್ಟೆ ಸುಟ್ಟಿದೆ. ಆರೋಪಿಯು ಕೋಣನಕುಂಟೆ ನಿವಾಸಿ ಎಂಬುದು ತಿಳಿದುಬಂದಿದೆ. ಆತ ಅಪ್ರಾಪ್ತನಾಗಿರುವುದರಿಂದ ಕಾನೂನು ಪ್ರಕ್ರಿಯೆ ಮುಗಿಸಿ ಬಾಲಾಪರಾಧ ಕೇಂದ್ರಕ್ಕೆ ಕಳುಹಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.