ADVERTISEMENT

ಮದುವೆಯಾಗಿ 15 ದಿನಕ್ಕೆ ಪತಿಯನ್ನು ತೊರೆದಿದ್ದ ಯುವತಿಯ ಪ್ರಿಯಕರನ ಹತ್ಯೆ

ದೇವಸ್ಥಾನದಲ್ಲಿ ಎರಡನೇ ಮದುವೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 20:18 IST
Last Updated 16 ಫೆಬ್ರುವರಿ 2021, 20:18 IST
   

ಬೆಂಗಳೂರು: ‘ಮದುವೆಯಾದ ಹದಿನೈದು ದಿನಕ್ಕೆ ಪತಿ ಮನೆ ತೊರೆದು ಪ್ರಿಯಕರನ ಜೊತೆ ಎರಡನೇ ಮದುವೆಯಾಗಿ ಕುಟುಂಬದ ಗೌರವ ಕಳೆದಳು’ ಎಂಬ ಕಾರಣಕ್ಕೆ ಸಿಟ್ಟಾದ ಯುವತಿ ಸಂಬಂಧಿಕರು, ಆಕೆಯ ಪ್ರಿಯಕರನನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.

‘ಲಗ್ಗೆರೆಯಲ್ಲಿ ವಾಸವಿದ್ದ ಚೇತನ್ (27) ಎಂಬುವರನ್ನು ಕೊಲೆ ಮಾಡಲಾಗಿದೆ. ಅವರ ಜೊತೆ ಎರಡನೇ ಮದುವೆಯಾಗಿದ್ದ ಯುವತಿ ಭೂಮಿಕಾ ಸಂಬಂಧಿಕರೇ ಕೃತ್ಯ ಎಸಗಿರುವ ಮಾಹಿತಿ ಇದೆ. ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ಹೇಳಿದರು.

‘ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಚೇತನ್ ಮತ್ತು ಯುವತಿ, ಒಂದೇ ಸಮುದಾಯಕ್ಕೆ ಸೇರಿದವರು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅದಕ್ಕೆ ಕುಟುಂಬದವರ ವಿರೋಧವಿತ್ತು. ಕುಟುಂಬದವರ ಒತ್ತಾಯಕ್ಕೆ ಮಣಿದು ಮದುವೆಯಾಗಿದ್ದ ಯುವತಿ, ಪತಿ ಮನೆಯಿಂದಲೇ ಪರಾರಿಯಾಗಿ ಚೇತನ್‌ ಅವರನ್ನು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಳು. ನಂತರ, ಬೆಂಗಳೂರಿಗೆ ಬಂದು ಲಗ್ಗೆರೆಯಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರೂ ವಾಸವಿದ್ದರು’ ಎಂದೂ ತಿಳಿಸಿದರು.

ADVERTISEMENT

ಹುಟ್ಟುಹಬ್ಬದ ಶುಭಾಶಯ ಕೋರುವ ನೆಪ: ‘ಚೇತನ್ ಹಾಗೂ ಯುವತಿ ಮನೆ ಎಲ್ಲಿದೆ ಎಂಬುದು ಸಂಬಂಧಿಕರಿಗೆ ಗೊತ್ತಿರಲಿಲ್ಲ. ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರು. ಸ್ನೇಹಿತರೊಬ್ಬರ ಮೂಲಕ ಮನೆ ವಿಳಾಸ ಸಿಕ್ಕಿತ್ತು. ಫೆ. 17ರಂದು ಚೇತನ್ ಅವರ ಹುಟ್ಟುಹಬ್ಬ ಇತ್ತು. ಶುಭಾಶಯ ಕೋರುವ ನೆಪದಲ್ಲಿ ಯುವತಿಯ ಸೋದರ ಆಕಾಶ್, ಚಿಕ್ಕಪ್ಪ ನಂಜೇಗೌಡ ಹಾಗೂ ಚಿಕ್ಕಪ್ಪನ ಮಗ ದಿಲೀಪ್ ಮನೆಗೆ ಬಂದಿದ್ದರು. ರಾತ್ರಿ ಹುಟ್ಟುಹಬ್ಬದ ಪಾರ್ಟಿ ಮಾಡೋಣವೆಂದು ಹೇಳಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಭೂಮಿಕಾ ಅವರು ಟಿ.ವಿ ನೋಡಲೆಂದು ಪಕ್ಕದ ಮನೆಗೆ ಹೋಗಿದ್ದರು. ಚೀಲದಲ್ಲಿ ತಂದಿದ್ದ ಲಾಂಗು–ಮಚ್ಚುಗಳನ್ನು ಹೊರಗೆ ತೆಗೆದಿದ್ದ ಆರೋಪಿಗಳು, ಚೇತನ್ ಅವರನ್ನು ಕೊಚ್ಚಿ ಪರಾರಿಯಾಗಿದ್ದಾರೆ. ಚೀರಾಟ ಕೇಳಿ ಪತ್ನಿ ಮನೆಗೆ ಬಂದು ನೋಡಿದಾಗಲೇ ವಿಷಯ ಗೊತ್ತಾಗಿದೆ’ ಎಂದೂ ವಿವರಿಸಿದರು.

ಎಚ್ಚರಿಕೆ ನೀಡಿದ್ದ ಸಂಬಂಧಿಕರು: ‘ಚೇತನ್, ಎಲೆಕ್ಟ್ರಿಷಿಯನ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ರೈತರಾಗಿರುವ ಅವರ ತಂದೆ, ಗ್ರಾ.ಪಂ. ಸದಸ್ಯ. ಪ್ರೀತಿ ವಿಷಯ ತಿಳಿದ ಯುವತಿ ಸಂಬಂಧಿಕರು, ಚೇತನ್‌ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಅದೇ ವಿಚಾರವಾಗಿ ಜಗಳ ನಡೆದು, ಸಂಧಾನವೂ ಆಗಿತ್ತು’ ಎಂದು ಪೊಲೀಸರು ಹೇಳಿದರು.

‘ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದ ನೌಕರನ ಜೊತೆ ಯುವತಿಯನ್ನು ಮದುವೆ ಮಾಡಿಕೊಡಲಾಗಿತ್ತು. 15 ದಿನ ಪತಿ ಜೊತೆಗಿದ್ದ ಯುವತಿ, ಮನೆ ಬಿಟ್ಟು ಪರಾರಿಯಾಗಿದ್ದರು. ಯುವತಿಯ ನಡತೆ ಸರಿ ಇಲ್ಲವೆಂದು ಊರಿನವರು ಮಾತನಾಡಿಕೊಳ್ಳುತ್ತಿದ್ದರು. ಇದರಿಂದ ಸಿಟ್ಟಾದ ಸಂಬಂಧಿಕರು, ಈ ಕೃತ್ಯ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದೂ ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.