ADVERTISEMENT

ಸ್ನೇಹಿತನ ಕೊಂದು, ಆತ್ಮಹತ್ಯೆ ಕಥೆ ಕಟ್ಟಿದರು!

ರೈಲ್ವೆ ಹಳಿ ಮೇಲೆ ಸಿಕ್ಕಿದ್ದ ಮೃತದೇಹ; ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 19:43 IST
Last Updated 14 ಜನವರಿ 2021, 19:43 IST

ಬೆಂಗಳೂರು: ಸಲಿಂಗಕಾಮಕ್ಕೆ ಒತ್ತಾಯಿಸುತ್ತಿದ್ದ ಎಂಬ ಕಾರಣಕ್ಕೆ ಅಫ್ರೋಜ್ (35) ಎಂಬುವರನ್ನು ಕೊಲೆ ಮಾಡಿದ್ದ ಆರೋಪದಡಿ ಮೂವರು ಸ್ನೇಹಿತರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

‘ಪಾದರಾಯನಪುರದ ನಿವಾಸಿಗಳಾದ ಮೊಹಮ್ಮದ್ ಸಿದ್ದಿಕ್ (26), ಮುಬಾರಕ್ ಪಾಷಾ (21) ಹಾಗೂ ಖಲೀಲ್ ಅಹಮ್ಮದ್ (23) ಬಂಧಿತರು. ಅಫ್ರೋಜ್‌ನನ್ನು ಕೊಂದಿದ್ದ ಇವರು, ಮೃತದೇಹವನ್ನು ರೈಲ್ವೆ ಹಳಿ ಮೇಲೆ ಇಟ್ಟಿದ್ದರು. ಅದೇ ಮೃತದೇಹದ ಮೇಲೆ ರೈಲು ಹರಿದು ಹೋಗಿತ್ತು. ಸ್ನೇಹಿತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಆರೋಪಿಗಳು ಕಥೆ ಕಟ್ಟಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರ್‌ಎಂಸಿ ಯಾರ್ಡ್‌ನಲ್ಲಿ ಹೋಟೆಲ್ ಇಟ್ಟುಕೊಂಡಿದ್ದ ಅಫ್ರೋಜ್, ಮೂವರು ಸ್ನೇಹಿತರನ್ನು ಪದೇ ಪದೇ ಸಲಿಂಗಕಾಮಕ್ಕೆ ಒತ್ತಾಯಿಸುತ್ತಿದ್ದರು. ಅದಕ್ಕೆ ಒಪ್ಪದಿದ್ದಾಗ ಕಿರುಕುಳ ನೀಡುತ್ತಿದ್ದರು. ಅದರಿಂದ ಕೋಪಗೊಂಡ ಆರೋಪಿಗಳು, ಕೊಲೆ ಸಂಚು ರೂಪಿಸಿ
ದ್ದರು’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

‘ಜ. 2ರಂದು ಅಫ್ರೋಜ್‌ ಅವರನ್ನು ಕರೆದುಕೊಂಡು ರೈಲ್ವೆ ಹಳಿ ಬಳಿ ಹೋಗಿದ್ದ ಆರೋಪಿಗಳು, ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದರು. ರುಂಡ ಹಾಗೂ ಮುಂಡ ಬೇರೆಯಾಗಿದ್ದ ಮೃತದೇಹ, ನಗರ ನಿಲ್ದಾಣ ಹಾಗೂ ನಾಯಂಡಹಳ್ಳಿ ನಿಲ್ದಾಣಗಳ ನಡುವಿನ ಹಳಿ ಮೇಲೆ ಸಿಕ್ಕಿತ್ತು. ಅದರ ಪಕ್ಕದಲ್ಲೇ ಮೊಬೈಲ್ ಸಹ ದೊರಕಿತ್ತು. ಕರೆ ವಿವರ ಸಂಗ್ರಹಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.