ADVERTISEMENT

ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣದ ಆರೋಪಿಯ ಕೊಲೆ: ಎಸ್‌ಡಿಪಿಐನ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 15:54 IST
Last Updated 25 ಏಪ್ರಿಲ್ 2025, 15:54 IST
ಅಬ್ದುಲ್‌ ಅಲೀಂ 
ಅಬ್ದುಲ್‌ ಅಲೀಂ    

ಬೆಂಗಳೂರು: ಡಿ.ಜಿ.ಹಳ್ಳಿ ಠಾಣೆಗೆ ಬೆಂಕಿ ಹಚ್ಚಿದ್ದ ಪ್ರಕರಣದ ಆರೋಪಿಯನ್ನು ಕೊಲೆ ಮಾಡಿ ಪರಾರಿ ಆಗಿದ್ದ ಮೂವರು ಆರೋಪಿಗಳನ್ನು ಗೋವಿಂದಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರಾದ ಮೊಹಮ್ಮದ್ ಓವೈಸ್, ಅಬ್ದುಲ್ ಅಲೀಮ್ ಹಾಗೂ ಮೊಹಮ್ಮದ್ ಹನೀಫ್‌ ಬಂಧಿತರು.

ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಏಪ್ರಿಲ್‌ 22ರ ರಾತ್ರಿ ಆಟೊದಲ್ಲಿ ಬಂದಿದ್ದ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಇರ್ಫಾನ್‌ನನ್ನು ಕೊಲೆ ಮಾಡಿ ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.

ಇರ್ಫಾನ್‌ ಅಂದು ರಾತ್ರಿ 11 ಗಂಟೆಯ ಸುಮಾರಿಗೆ ಪತ್ನಿಯನ್ನು ಬಿಟ್ಟು ಎಚ್‌ಬಿಆರ್ ಲೇಔಟ್ ಬಳಿ ನಡೆದುಕೊಂಡು ಹೋಗುತ್ತಿದ್ದ. ಆಗ ಆಟೊದಲ್ಲಿ ಬಂದ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು ಎಂದು ಪೊಲೀಸರು ಹೇಳಿದರು.

ಜೈಲಿನಲ್ಲೇ ಸಂಚು: ‘2020ರಲ್ಲಿ ಡಿ.ಜೆ.ಹಳ್ಳಿ–ಕೆ.ಜಿ.ಹಳ್ಳಿಯಲ್ಲಿ ಗಲಭೆ ನಡೆದಿತ್ತು. ಈ ಗಲಭೆ ಪ್ರಕರಣದ ಸಂಬಂಧ ಇರ್ಫಾನ್‌ನನ್ನು ಪೊಲೀಸರು ಬಂಧಿಸಿದ್ದರು. ಈತನ ಜತೆಗೆ ಅಬ್ಬಾಸ್ ಎಂಬಾತ ಸಹ ಜೈಲು ಸೇರಿದ್ದ. ಇಬ್ಬರೂ ಸ್ನೇಹಿತರಾಗಿದ್ದರು. ಕೆಲವು ತಿಂಗಳ ಹಿಂದೆ ಇರ್ಫಾನ್ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಜೈಲಿನಿಂದ ಹೊರಬಂದಿದ್ದ ಇರ್ಫಾನ್‌, ಅಬ್ಬಾಸ್‌ನ ಪತ್ನಿಯನ್ನು ಪರಿಚಯಿಸಿಕೊಂಡಿದ್ದ. ಆಕೆಯ ಜತೆಗೆ ಸ್ನೇಹ ಬೆಳೆಸಿದ್ದ. ಅಬ್ಬಾಸ್‌ನಿಂದ ವಿಚ್ಛೇದನ ಪಡೆಯುವಂತೆ ಇರ್ಫಾನ್‌ ಹೇಳುತ್ತಿದ್ದ. ಈ ವಿಷಯ ಜೈಲಿನಲ್ಲಿದ್ದ ಅಬ್ಬಾಸ್‌ಗೆ ಗೊತ್ತಾಗಿತ್ತು. ಜೈಲಿನಲ್ಲೇ ಕೊಲೆಗೆ ಸಂಚು ರೂಪಿಸಿದ್ದ’ ಎಂದು ಮೂಲಗಳು ತಿಳಿಸಿವೆ.

‘ಸ್ನೇಹಿತರಾಗಿದ್ದ ಮೂವರು ಆರೋಪಿಗಳಿಗೆ ಅಬ್ಬಾಸ್‌ ಸುಪಾರಿ ನೀಡಿದ್ದ. ಅವರು ಆಟೊದಲ್ಲಿ ಬಂದು ಇರ್ಫಾನ್‌ ಕೊಲೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

ಬಂಧಿತ ಆರೋಪಿಗಳೆಲ್ಲರೂ ನಿಷೇಧಿತ ಪಿಎಫ್ಐ ಸಂಘಟನೆ ಸದಸ್ಯರಾಗಿದ್ದರು. ಪ್ರಸ್ತುತ ಎಸ್‌ಡಿಪಿಐನಲ್ಲಿ ಇದ್ದರು. ಬಂಧಿತ ಮೂವರು ಆರೋಪಿಗಳು ಈ ಹಿಂದೆಯೂ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಮೊಹಮ್ಮದ್‌ ಓವೈಸ್‌
ಮೊಹಮ್ಮದ್ ಹನೀಫ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.