ADVERTISEMENT

ಸಿಗರೇಟ್ ವಿಚಾರಕ್ಕೆ ಗಲಾಟೆ; ರೌಡಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 4:00 IST
Last Updated 28 ಮಾರ್ಚ್ 2021, 4:00 IST
ಸಿಗರೇಟ್‌
ಸಿಗರೇಟ್‌   

ಬೆಂಗಳೂರು: ಸಿಗರೇಟ್ ವಿಚಾರಕ್ಕಾಗಿ ನಡೆದ ಗಲಾಟೆಯಿಂದಾಗಿ ರೌಡಿ ಸೈಯದ್ ವಸೀಂ ಅಲಿಯಾಸ್ ಬೋಡ್ಕಾನ ಹತ್ಯೆಯಾಗಿದ್ದು, ಈ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ವಸೀಂ, ಜೈಲಿಗೂ ಹೋಗಿ ಬಂದಿದ್ದ. ಜಗಜೀವನರಾಮ್ ನಗರ ಹಾಗೂ ಬ್ಯಾಟರಾಯನಪುರ ಠಾಣೆ ರೌಡಿಪಟ್ಟಿಯಲ್ಲಿ ಆತನ ಹೆಸರಿತ್ತು. ಶುಕ್ರವಾರ ರಾತ್ರಿ ಆತನನ್ನು ಕೊಲೆ ಮಾಡಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಗಂಗೊಂಡಹಳ್ಳಿ ನಿವಾಸಿಗಳಾದ ಅರ್ಬಾಜ್ ಖಾನ್ ಹಾಗೂ ಸೈಫುಲ್ಲಾ ನಡುವೆ ಸಿಗರೇಟ್ ವಿಚಾರವಾಗಿ ಗಲಾಟೆ ಆಗಿತ್ತು. ಅರ್ಬಾಜ್‌ಖಾನ್ ತನ್ನ ಸ್ನೇಹಿತ ಅಬ್ದುಲ್ ಅಲಿಯಾಸ್ ಡಿಂಗ್ ಡಿಂಗ್ ಮೂಲಕ ರೌಡಿ ವಸೀಂಗೆ ಮಾಹಿತಿ ನೀಡಿದ್ದ. ಸೈಫುಲ್ಲಾ ಜೊತೆ ಮಾತನಾಡಿ ಬುದ್ಧಿ ಕಲಿಸುವಂತೆ ಹೇಳಿದ್ದ.’

ADVERTISEMENT

‘ಸೈಫುಲ್ಲಾ ಅಣ್ಣ ಶೇಕ್ ಬರ್ಕತ್‌ಗೆ ಕರೆ ಮಾಡಿದ್ದ ಡಿಂಗ್ ಡಿಂಗ್, ಜಗಳ ಸಂಬಂಧ ಮಾತನಾಡಬೇಕೆಂದು ಹೇಳಿ ಮದೀನಾ ಮಸೀದಿ ಬಳಿ ಕರೆಸಿಕೊಂಡಿದ್ದ. ರಾತ್ರಿ ಮಸೀದಿ ಬಳಿಯೇ ಎಲ್ಲರೂ ಸೇರಿದ್ದರು. ಅದೇ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಶೇಕ್ ಬರ್ಕತ್ ಹಾಗೂ ಆತನ ಸಹಚರರು, ಮಾರಕಾಸ್ತ್ರಗಳಿಂದ ವಸೀಂ ಮೇಲೆ ಹಲ್ಲೆ ಮಾಡಿ ಕೊಂದು ಪರಾರಿಯಾಗಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.

ವಿಶೇಷ ತಂಡ ರಚನೆ: ’ಹತ್ಯೆ ಸಂದರ್ಭದಲ್ಲಿ ಶೇಕ್ ಬರ್ಕತ್‌ ಜೊತೆಯಲ್ಲಿ ನ್ಯಾಮತ್, ಜೀಯಾವುಲ್ಲಾ, ಸೈಫುಲ್ಲಾ, ಮೊಹಮ್ಮದ್ ಅಹ್ಮದ್ ಹಾಗೂ ಇತರರು ಇದ್ದರೆಂಬ ಮಾಹಿತಿ ಇದೆ. ಅವರೆಲ್ಲರೂ ತಲೆಮರೆಸಿಕೊಂಡಿದ್ದು, ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.