ADVERTISEMENT

ದರಿದ್ರ ಸರ್ಕಾರ ವ್ಯಾಖ್ಯಾನ ಸಿದ್ದರಾಮಯ್ಯ ಮಾನಸಿಕ ಅವನತಿಗೆ ಸಾಕ್ಷಿ: ರವಿಕುಮಾರ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 16:25 IST
Last Updated 12 ಫೆಬ್ರುವರಿ 2020, 16:25 IST
ಎನ್‌.ರವಿಕುಮಾರ್
ಎನ್‌.ರವಿಕುಮಾರ್   

ಬೆಂಗಳೂರು: ಬಿಜೆಪಿ ಸರ್ಕಾರವನ್ನು ದರಿದ್ರ ಸರ್ಕಾರ ಎಂದು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ವ್ಯಾಖ್ಯಾನಿಸಿರುವುದು ಅವರ ಮಾನಸಿಕ ಅವನತಿಗೆ ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದ್ದಾರೆ.

ಕೆಟ್ಟ ಭಾಷೆ ಬಳಸುವ ಚಾಳಿ ಮುಂದುವರಿಸಿರುವ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ನಡೆಸಿದ ತುಘಲಕ್‌ ಸರ್ಕಾರಕ್ಕೆ ಆ ಪದವನ್ನು ಅನ್ವಯಿಸಬಹುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್ ಈಗ ಒಡೆದ ಮನೆಯಾಗಿದ್ದು, ಅವಸಾನದತ್ತ ಸಾಗಿದೆ. ಅತ್ಯಂತ ಹಳೆಯ ಪಕ್ಷವಾಗಿರುವ ಆ ಪಕ್ಷಕ್ಕೆ ಇನ್ನೂ ಸಾರಥಿ ಸಿಕ್ಕಿಲ್ಲ. ಇವೆಲ್ಲ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡು ಸಿದ್ದರಾಮಯ್ಯ ಮಾತನಾಡುವುದು ಸೂಕ್ತ ಎಂದು ರವಿಕುಮಾರ್‌ ಹೇಳಿದರು.

ADVERTISEMENT

ದೆಹಲಿಯಲ್ಲಿ ಬಿಜೆಪಿ ಸೋತಿರಬಹುದು. ಆದರೆ ಮತ ಪ್ರಮಾಣವನ್ನು ಶೇ 32 ರಿಂದ ಶೇ 38 ಕ್ಕೆ ಹೆಚ್ಚಿಸಿಕೊಂಡಿದೆ. ಆದರೆ,70 ರಲ್ಲಿ 67 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದೆ. ಎಎಪಿ ಗೆದ್ದಿರುವುದಕ್ಕೆ ಸಂತಸ ಪಡುವ ಕಾಂಗ್ರೆಸ್‌ ನಾಯಕರಿಗೆ ತಮ್ಮ ಪಕ್ಷ ಧೂಳಿಪಟವಾಗಿರುವ ಬಗ್ಗೆ ಕಿಂಚಿತ್ತು ಬೇಸರವೂ ಆಗಿಲ್ಲ. ಇದು ಅವರ ದಿವಾಳಿತನಕ್ಕೆ ನಿದರ್ಶನ ಎಂದು ಹರಿಹಾಯ್ದರು.

ರಾಜ್ಯದ ಬುಡಕಟ್ಟು ಸಮುದಾಯದ ಪರಿವಾರ, ತಳವಾರ ಹಾಗೂ ಸಿದ್ಧಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ. ಹಲವು ದಶಕಗಳ ಬೇಡಿಕೆಗೆ ಪ್ರಧಾನಿ ಮೋದಿ ಸ್ಪಂದಿಸಿದ್ದಾರೆ. ಇದಕ್ಕಾಗಿ ದಿವಂಗತ ಅನಂತಕುಮಾರ್‌ ಅವರು ಶ್ರಮವಹಿಸಿದ್ದರು ಎಂದು ಸ್ಮರಿಸಿದರು.

ಬಡ್ತಿಯಲ್ಲಿ ಮೀಸಲಾತಿ ಯಾರೊಬ್ಬರ ಮೂಲಭೂತ ಹಕ್ಕಲ್ಲ ಎಂದು 2012 ರಲ್ಲಿ ಉತ್ತರಖಂಡ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದೆ. 2012 ರಲ್ಲಿ ಉತ್ತರಖಂಡ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷವೇ ಅಧಿಕಾರದಲ್ಲಿತ್ತು. ಆಗ ಕಾಂಗ್ರೆಸ್‌ ನಾಯಕರು ಬಾಯಿ ಮುಚ್ಚಿಕೊಂಡು ಕೂತಿದ್ದು ಏಕೆ ಎಂದು ರವಿಕುಮಾರ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.