ADVERTISEMENT

ನಾಗನಾಥೇಶ್ವರ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 19:41 IST
Last Updated 22 ಏಪ್ರಿಲ್ 2019, 19:41 IST
ಪಾರ್ವತಿ–ನಾಗನಾಥೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವದಲ್ಲಿ ಭಾಗಿಯಾದ ಭಕ್ತರು
ಪಾರ್ವತಿ–ನಾಗನಾಥೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವದಲ್ಲಿ ಭಾಗಿಯಾದ ಭಕ್ತರು   

ಬೊಮ್ಮನಹಳ್ಳಿ: ನಿಂಬಾಪುರಿ ಭಾಸ್ಕರ ಕ್ಷೇತ್ರದ ಪಾರ್ವತಿ–ನಾಗನಾಥೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಬೇಗೂರಿನಲ್ಲಿಸೋಮವಾರ ಅದ್ದೂರಿಯಾಗಿ ನಡೆಯಿತು.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ರಥಕ್ಕೆ ಬಾಳೆಹಣ್ಣಿನ ಜವನ ಅರ್ಪಿಸಿದರು. ಉತ್ಸವದ ಅಂಗವಾಗಿ ಬೆಳಿಗ್ಗೆ ಸುಪ್ರಭಾತ ಸೇವೆ ಸಲ್ಲಿಸಿ, ಗರ್ಭಗುಡಿಯ ಮೂಲ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡಲಾಯಿತು. ಸುದರ್ಶನ ಹೋಮ, ಮಹಾಮಂಗಳಾರತಿ ಮಾಡಿದ ಆಗಮಿಕರು ರಾಜಬೀದಿಯಲ್ಲಿ ರಥಬಲಿ ಸಮರ್ಪಿಸಿದರು.

ಶಿವ-ಪಾರ್ವತಿಯರ ವಿವಾಹವೇ ಈ ಹಬ್ಬದ ವಿಶೇಷ. ಉತ್ಸವದ ಹಿಂದಿನ ದಿನವೇ ಅರ್ಚಕರ ತಂಡ ಪೂಜಾ–
ಕೈಂಕರ್ಯಗಳನ್ನು ಆರಂಭಿಸಿ ವಿವಾಹ ನೆರವೇರಿಸಿದರು. ರಥೋತ್ಸವದಲ್ಲಿ ಶಿವ-ಪಾರ್ವತಿಯರ ಮೆರವಣಿಗೆ ಮಾಡಲಾಯಿತು.

ADVERTISEMENT

‘ತಲಕಾಡಿನ ಗಂಗರು ಮತ್ತು ತಂಜಾವೂರಿನ ಚೋಳರು ಈ ದೇವಸ್ಥಾನ ಕಟ್ಟಿಸಿದ್ದಾರೆ’ ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

ಜಾತ್ರೆಗೆ ಬಂದ ಭಕ್ತರಿಗೆ ಪಾನಕ, ನೀರು, ಮಜ್ಜಿಗೆ, ಕೋಸಂಬರಿಗಳನ್ನು ಬೇಗೂರಿನ ಗ್ರಾಮಸ್ಥರು ನೀಡಿದರು. ಏಳು ಗ್ರಾಮಗಳಹೂವುಗಳಿಂದ ಅಲಂಕೃತಗೊಂಡ ಪಲ್ಲಕ್ಕಿಗಳ ಉತ್ಸವ ಸೋಮವಾರ ರಾತ್ರಿ 8ಕ್ಕೆ ಆರಂಭವಾಗಿ ಬೆಳಗಿನ ಜಾವದವರೆಗೂ ನಡೆಯಿತು.

ಆಂಧ್ರಪ್ರದೇಶದ ಚಿತ್ತೂರಿನ ಕನ್ನಯ್ಯ ಅವರು ಜಾತ್ರೆಯಲ್ಲಿ ಗಾಂಧಿವೇಷ ಧರಿಸಿಕೊಂಡು, ಸ್ತಬ್ಧವಾಗಿ ನಿಂತುಕೊಂಡು ಜನರ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.