ADVERTISEMENT

ಹಳದಿ ಮಾರ್ಗ: ಸುರಕ್ಷತಾ ಪರಿಶೀಲನೆಗೆ ಚಾಲನೆ

ಅಂತಿಮ ವರದಿ ಸಲ್ಲಿಕೆ ನಂತರ ವಾರದಲ್ಲಿ ಸಂಚಾರಕ್ಕೆ ‘ಅನುಮತಿ’ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 0:01 IST
Last Updated 23 ಜುಲೈ 2025, 0:01 IST
ಆರ್‌.ವಿ. ರಸ್ತೆ ನಿಲ್ದಾಣದಿಂದ– ಬೊಮ್ಮಸಂದ್ರದವರೆಗಿನ ಮಾರ್ಗದ ಸುರಕ್ಷತೆ ಪರಿಶೀಲನೆ ನಡೆಸುತ್ತಿರುವ ಸಿಎಂಆರ್‌ಎಸ್‌ ಅಧಿಕಾರಿಗಳು
ಆರ್‌.ವಿ. ರಸ್ತೆ ನಿಲ್ದಾಣದಿಂದ– ಬೊಮ್ಮಸಂದ್ರದವರೆಗಿನ ಮಾರ್ಗದ ಸುರಕ್ಷತೆ ಪರಿಶೀಲನೆ ನಡೆಸುತ್ತಿರುವ ಸಿಎಂಆರ್‌ಎಸ್‌ ಅಧಿಕಾರಿಗಳು   

ಬೆಂಗಳೂರು: ‘ನಮ್ಮ ಮೆಟ್ರೊ’ ಹಳದಿ ಮಾರ್ಗದ ಮೊದಲ ಹಂತದ ಸುರಕ್ಷತಾ ಪರಿಶೀಲನೆ ಕಾರ್ಯ ಮಂಗಳವಾರ ಆರಂಭವಾಗಿದ್ದು, ಜುಲೈ 25ರವರೆಗೆ ಮುಂದುವರಿಯಲಿದೆ.

ಮೆಟ್ರೊ ರೈಲ್ವೆ ಸುರಕ್ಷತಾ ಆಯುಕ್ತರ(ಸಿಎಂಆರ್‌ಎಸ್‌) ಅಧಿಕಾರಿಗಳ ತಂಡ, ಮೊದಲ ದಿನ ಆರ್‌.ವಿ.ರಸ್ತೆ– ಬೊಮ್ಮಸಂದ್ರದ ಮಾರ್ಗದಲ್ಲಿ ಸುರಕ್ಷತಾ ಪರೀಕ್ಷೆ ಕೈಗೊಂಡಿತು. 19.15 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಮೂರರಿಂದ ನಾಲ್ಕು ನಿಲ್ದಾಣಗಳು ಹಾಗೂ ಮಾರ್ಗದಲ್ಲಿ ಅಳವಡಿಸಿರುವ ಹಳಿ, ಅದಕ್ಕೆ ಹೊಂದಿಕೊಂಡಿರುವ ವಿದ್ಯುತ್ ಸಂಪರ್ಕ, ಸಿಗ್ನಲಿಂಗ್‌ ವ್ಯವಸ್ಥೆ, ನಿಲ್ದಾಣಗಳಲ್ಲಿರುವ ಸೌಲಭ್ಯ, ತುರ್ತು ನಿರ್ಗಮನ ಸೇರಿದಂತೆ ಸಿವಿಲ್ ಕಾಮಗಾರಿಯಿಂದ ಹಿಡಿದು ಎಲ್ಲ ರೀತಿಯ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿತು. 

ಪರಿಶೀಲನಾ ಕಾರ್ಯ ಪೂರ್ಣಗೊಂಡ ನಂತರ ವಾಣಿಜ್ಯ ಸೇವೆಗೆ ಅನುಮತಿ ನೀಡಲಾಗುತ್ತದೆ. ಪರಿಶೀಲನೆ ನಂತರ ಅಗತ್ಯವಿದ್ದರೆ ಸಣ್ಣಪುಟ್ಟ ಮಾರ್ಪಾಡು ಅಥವಾ ಸೂಚನೆಗಳೊಂದಿಗೆ ಸಿಎಂಆರ್‌ಎಸ್‌ ಅನುಮತಿ ನೀಡಬಹುದು. ‘ಪರಿಶೀಲನೆ ನಂತರ ಗರಿಷ್ಠ ಒಂದು ವಾರದಲ್ಲಿ ಸಿಎಂಆರ್‌ಎಸ್‌ನಿಂದ ಹಸಿರು ನಿಶಾನೆ ಸಿಗುವ ಸಾಧ್ಯತೆಗಳಿವೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಮೂಲಗಳು ತಿಳಿಸಿವೆ.

ADVERTISEMENT

‘ಪರಿಶೀಲನಾ ವರದಿ ಬಂದ ನಂತರವೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಿ, ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗುತ್ತದೆ’ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಹಳದಿ ಮಾರ್ಗದ ಉದ್ಘಾಟನೆ ನಡೆಯುವ ಸಾಧ್ಯತೆಯಿದೆ. ಈ ಮಾರ್ಗದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವ ಆಲೋಚನೆ ಇದೆ. ‘ಆದರೆ ಕಾರ್ಯಕ್ರಮದ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ’ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.

ಆದರೆ, ಈ ಮಾರ್ಗದ ಮೆಟ್ರೊ ಸಂಚಾರಕ್ಕೆ ಅದ್ಧೂರಿ ಚಾಲನೆ ನೀಡಲು ಬಿಎಂಆರ್‌ಸಿಎಲ್‌ ಸಿದ್ಧತೆ ನಡೆಸಿದ್ದು, ಈಗಾಗಲೇ ಈ ಮಾರ್ಗದಲ್ಲಿನ ಪ್ರಯಾಣ, ನಿಲ್ದಾಣಗಳ ದೃಶ್ಯಗಳ ವಿಡಿಯೊ ಮತ್ತು ಡ್ರೋನ್ ದೃಶ್ಯಗಳೊಂದಿಗೆ ಸಾಕ್ಷ್ಯಚಿತ್ರ ನಿರ್ಮಿಸಲು ಖಾಸಗಿ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ. ಈ ವಿಡಿಯೊವನ್ನು ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶಿಸುವ ನಿರೀಕ್ಷೆಯಿದೆ. 

16 ನಿಲ್ದಾಣಗಳನ್ನೊಳಗೊಂಡ, ಸಂಪೂರ್ಣ ಎತ್ತರಿಸಿದ ಮಾರ್ಗವಾಗಿರುವ ಈ ಹಳದಿ ಮಾರ್ಗದಲ್ಲಿ ಹಲವು ಬಡಾವಣೆಗಳ ಜೊತೆಗೆ, ಐ.ಟಿ.ಕಾರಿಡಾರ್‌ಗೂ ವಿಸ್ತರಿಸುತ್ತದೆ. ನಗರದ ಕೇಂದ್ರ ಭಾಗಕ್ಕೆ ಸಂಪರ್ಕ ಕಲ್ಪಿಸಲು ಇದು ಸಹಕಾರಿಯಾಗಲಿದೆ. ಪ್ರಸ್ತುತ ಈ ಮಾರ್ಗದಲ್ಲಿ ಕಾರ್ಯಾಚರಣೆಗಾಗಿ ಮೂರು ರೈಲುಗಳು ಬಂದಿಳಿದಿವೆ. 

ಆರ್‌.ವಿ. ರಸ್ತೆ ನಿಲ್ದಾಣದಿಂದ– ಬೊಮ್ಮಸಂದ್ರದವರೆಗಿನ ಮಾರ್ಗದ ಸುರಕ್ಷತೆ ಪರಿಶೀಲನೆ ನಡೆಸುತ್ತಿರುವ ಸಿಎಂಆರ್‌ಎಸ್‌ ಅಧಿಕಾರಿಗಳು

* ಸಿಎಂಎಸ್‌ಆರ್‌ ಆಯುಕ್ತರಿಂದ ಪರಿಶೀಲನೆ

* ಪರಿಶೀಲನಾ ವರದಿ ನಂತರ ಉದ್ಘಾಟನೆಗೆ ದಿನ ನಿಗದಿ

* ಕೇಂದ್ರ–ರಾಜ್ಯ ಸರ್ಕಾರಗಳಿಗೆ ಕಾರ್ಯಕ್ರಮದ ವರದಿ ಸಲ್ಲಿಕೆ

ಹಳದಿ ಮಾರ್ಗದ ನಿಲ್ದಾಣಗಳು ಬೊಮ್ಮಸಂದ್ರ ಹೆಬ್ಬಗೋಡಿ ಹುಸ್ಕೂರು ರಸ್ತೆ ಇನ್ಫೊಸಿಸ್‌ ಫೌಂಡೇಷನ್‌ (ಕೋನಪ್ಪನ ಅಗ್ರಹಾರ) ಎಲೆಕ್ಟ್ರಾನಿಕ್‌ ಸಿಟಿ ಬೆರಟೇನ ಅಗ್ರಹಾರ ಹೊಸ ರಸ್ತೆ ಸಿಂಗಸಂದ್ರ ಕೂಡ್ಲು ಗೇಟ್‌ ಹೊಂಗಸಂದ್ರ ಬೊಮ್ಮನಹಳ್ಳಿ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ಬಿಟಿಎಂ ಲೇಔಟ್‌ ಜಯದೇವ ಆಸ್ಪತ್ರೆ ರಾಗಿಗುಡ್ಡ ಆರ್‌.ವಿ. ರಸ್ತೆ ನಿಲ್ದಾಣಗಳನ್ನು ಹೊಂದಿದೆ. ದಕ್ಷಿಣ ಬೆಂಗಳೂರನ್ನು (ಎಲೆಕ್ಟ್ರಾನಿಕ್‌ ಸಿಟಿ) ನಗರದ ಕೇಂದ್ರಕ್ಕೆ ಸಂಪರ್ಕಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.