ಬೆಂಗಳೂರು: ನಮ್ಮ ಕ್ಲಿನಿಕ್‌ಗಳಲ್ಲಿ ಕಾರ್ಯನಿರ್ವಹಿಸಲು ವೈದ್ಯರು, ಶುಶ್ರೂಷಕರು ಹಾಗೂ ಪ್ರಯೋಗಾಲಯ ತಂತ್ರಜ್ಞರು ನಿರಾಸಕ್ತಿ ತೋರಿದ್ದು, ರಾಜ್ಯದಲ್ಲಿನ ಹಲವು ಚಿಕಿತ್ಸಾ ಕೇಂದ್ರಗಳಲ್ಲಿ ಈ ಹುದ್ದೆಗಳಿಗೆ ಈವರೆಗೂ ನೇಮಕಾತಿ ನಡೆದಿಲ್ಲ. ಇದರಿಂದಾಗಿ ಕ್ಲಿನಿಕ್‌ಗಳಲ್ಲಿ ವೈದ್ಯಕೀಯ ಸೇವೆ ವ್ಯತ್ಯಯವಾಗುತ್ತಿದೆ.
ರಾಜ್ಯದಲ್ಲಿ 415 ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಮೊದಲ ಹಂತದಲ್ಲಿ ಕಳೆದ ಫೆಬ್ರುವರಿ ತಿಂಗಳಲ್ಲಿ ನೂರಕ್ಕೂ ಅಧಿಕ ಕ್ಲಿನಿಕ್‌ಗಳಿಗೆ ಚಾಲನೆ ನೀಡಲಾಗಿತ್ತು. ಇನ್ನುಳಿದ ಕ್ಲಿನಿಕ್‌ಗಳು ತದನಂತರ ಕಾರ್ಯಾರಂಭಿಸಿವೆ. ಜ್ವರದಂತಹ ಸಾಮಾನ್ಯ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸುವ ಜತೆಗೆ ರಕ್ತ ಸೇರಿ ವಿವಿಧ ಪರೀಕ್ಷೆಗಳನ್ನೂ ನಡೆಸುವ ವ್ಯವಸ್ಥೆ ಇಲ್ಲಿದೆ. ಈ ಕ್ಲಿನಿಕ್‌ಗಳಲ್ಲಿ ತಲಾ ಒಬ್ಬರು ವ್ಯೆದ್ಯಾಧಿಕಾರಿ, ಶುಶ್ರೂಷಕರು, ಪ್ರಯೋಗಶಾಲಾ ತಂತ್ರಜ್ಞರು, ಡಿ-ದರ್ಜೆ ನೌಕರರು ಕಾರ್ಯನಿರ್ವಹಿಸಬೇಕು. ಆದರೆ, ಧಾರವಾಡ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಸೇರಿ 15ಕ್ಕೂ ಅಧಿಕ ಜಿಲ್ಲೆಗಳಲ್ಲಿನ ಕ್ಲಿನಿಕ್‌ಗಳಲ್ಲಿ ವೈದ್ಯಾಧಿಕಾರಿ ಸೇರಿ ವಿವಿಧ ಹುದ್ದೆಗಳು ಖಾಲಿಯಿವೆ. ಇದರಿಂದಾಗಿ ಕೆಲವೆಡೆ ಶುಶ್ರೂಷಕರೇ ತಪಾಸಣೆ ಮಾಡಿ, ಔಷಧ ನೀಡುತ್ತಿದ್ದಾರೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ರಾಯಚೂರು ಹಾಗೂ ಬಳ್ಳಾರಿಯಲ್ಲಿ ತಲಾ 8 ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಎರಡೂ ಜಿಲ್ಲೆಗಳಲ್ಲಿ ತಲಾ ನಾಲ್ಕು ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ನಾಲ್ಕು ಕ್ಲಿನಿಕ್‌ಗಳಲ್ಲಿ ಮೂರು ಕೇಂದ್ರಗಳಿಗೆ ವೈದ್ಯರಿಲ್ಲ. ಧಾರವಾಡದಲ್ಲಿ 6 ಕ್ಲಿನಿಕ್‌ಗಳಲ್ಲಿ ಮೂರು ಕ್ಲಿನಿಕ್‌ಗಳಿಗೆ ಮಾತ್ರ ವೈದ್ಯರ ನೇಮಕಾತಿ ನಡೆದಿದೆ. ಕೋಲಾರದಲ್ಲಿ ಮೂರು ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ವೈದ್ಯಾಧಿಕಾರಿ ಹುದ್ದೆಗೆ ಇತ್ತೀಚೆಗೆ ಸಂದರ್ಶನ ನಡೆಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಮೂರು ಕ್ಲಿನಿಕ್‌ಗಳಲ್ಲಿ ಒಂದು ಕ್ಲಿನಿಕ್‌ಗೆ ಮಾತ್ರ ವೈದ್ಯರು ನೇಮಕರಾಗಿದ್ದಾರೆ. ಬೆಳಗಾವಿಯಲ್ಲಿ 21 ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, 7 ಕ್ಲಿನಿಕ್‌ಗಳಿಗೆ ಮಾತ್ರ ವೈದ್ಯರ ನೇಮಕಾತಿ ನಡೆದಿದೆ. ಇದೇ ರೀತಿ ಹಲವೆಡೆ ವೈದ್ಯಾಧಿಕಾರಿ ಹುದ್ದೆ ಖಾಲಿಯಿದೆ.
ಶುಶ್ರೂಷಕರಿಂದ ಚಿಕಿತ್ಸೆ: ನಮ್ಮ ಕ್ಲಿನಿಕ್‌ಗಳು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9 ರಿಂದ ಸಂಜೆ 4.30ರವರೆಗೆ ಕಾರ್ಯನಿರ್ವಹಿಸುತ್ತಿವೆ. ಈ ಕ್ಲಿನಿಕ್‌ಗಳಿಗೆ ತಲಾ ಒಬ್ಬರು ವೈದ್ಯರನ್ನು ಒಂದು ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಎಂಬಿಬಿಎಸ್ ಮುಗಿಸಿದ ವೈದ್ಯಾಧಿಕಾರಿಗೆ ₹ 47,250 ವೇತನ ನಿಗದಿಪಡಿಸಲಾಗಿದೆ. ವೇತನ ಕಡಿಮೆ, ಗ್ರಾಮೀಣ ಭಾಗದಲ್ಲಿ ಸೇವೆ ಸೇರಿ ವಿವಿಧ ಕಾರಣಗಳಿಂದ ಈ ಕ್ಲಿನಿಕ್‌ಗಳಲ್ಲಿ ಕಾರ್ಯನಿರ್ವಹಿಸಲು ಎಂಬಿಬಿಎಸ್ ಮುಗಿಸಿದವರು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವವರು ರಜಾ ಹಾಕಿದಲ್ಲಿ ಶುಶ್ರೂಷಕರೇ ತಪಾಸಣೆ ನಡೆಸಿ, ಔಷಧಗಳನ್ನು ವಿತರಿಸುತ್ತಿದ್ದಾರೆ.
‘ಹಳೆಯ ಕಟ್ಟಡಗಳಲ್ಲಿಯೇ ನಮ್ಮ ಕ್ಲಿನಿಕ್ ಪ್ರಾರಂಭಿಸಿರುವುದರಿಂದ ಹಲವೆಡೆ ಯೋಗ ಕೊಠಡಿ, ಆಸ್ಪತ್ರೆ ಸಿಬ್ಬಂದಿ, ಮಹಿಳಾ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಸೇರಿ ವಿವಿಧ ಸೌಲಭ್ಯ ಸಾಧ್ಯವಾಗಿಲ್ಲ. ಒಂದು ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ, ಕಡಿಮೆ ವೇತನದ ಕಾರಣ ವೈದ್ಯರು, ಶುಶ್ರೂಷಕರು ಆಸಕ್ತಿ ತೋರುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ವೈದ್ಯರ ಕೊರತೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಡ್ಡಾಯ ಗ್ರಾಮೀಣ ಸೇವೆಯಡಿ ಸಾಕಷ್ಟು ವೈದ್ಯರು ಲಭ್ಯವಾಗುತ್ತಾರೆ. ಕ್ಲಿನಿಕ್‌ಗಳಲ್ಲಿ ಸಂಜೆಯೂ ಸೇವೆ ಒದಗಿಸಲು ಕ್ರಮವಹಿಸಲಾಗುತ್ತಿದೆ.
-ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
₹ 15 ಸಾವಿರ ವೇತನ
ನಮ್ಮ ಕ್ಲಿನಿಕ್‌ಗಳಲ್ಲಿ ಶುಶ್ರೂಷಕ ಹುದ್ದೆಗೆ ಬಿಎಸ್‌ಸಿ ನರ್ಸಿಂಗ್‌ನಲ್ಲಿ ಡಿಪ್ಲೊಮಾ ಮಾಡಿದವರನ್ನು ನೇಮಿಸಿಕೊಳ್ಳಲಾಗಿದೆ. ವೈದ್ಯರ ಗೈರು ಹಾಜರಿಯಲ್ಲಿ ಶುಶ್ರೂಷಕರೇ ತಪಾಸಣೆ ನಡೆಸುತ್ತಿದ್ದಾರೆ. ಗರ್ಭಿಣಿಯರಿಗೆ ಸೂಕ್ತ ಆರೈಕೆ ಮಾಡಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರಿಗೆ ₹ 15750 ನಿಗದಿಪಡಿಸಲಾಗಿದೆ. ಪ್ರಯೋಗಾಲಯ ತಂತ್ರಜ್ಞ ಹುದ್ದೆಗೆ ಪ್ರಯೋಗಶಾಲೆ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಪದವಿ ಪಡೆದಿರಬೇಕು. ಅವರಿಗೆ ಮಾಸಿಕ ₹ 14609 ನಿಗದಿಪಡಿಸಲಾಗಿದೆ. ರಾಜ್ಯದ ಹಲವು ನಮ್ಮ ಕ್ಲಿನಿಕ್‌ಗಳಲ್ಲಿ ಶುಶ್ರೂಷಕರು ಹಾಗೂ ಪ್ರಯೋಗಾಲಯ ತಂತ್ರಜ್ಞ ಹುದ್ದೆ ಖಾಲಿಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.