ADVERTISEMENT

ವಾರಾಂತ್ಯದಲ್ಲಿ ಸಮಸ್ಯೆ ಎದುರಿಸಿದ ಮೆಟ್ರೊ ಪ್ರಯಾಣಿಕರು

ನಮ್ಮ ಮೆಟ್ರೊ ಟ್ರಿನಿಟಿ ನಿಲ್ದಾಣದ ಬಳಿ ದುರಸ್ತಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 20:26 IST
Last Updated 29 ಡಿಸೆಂಬರ್ 2018, 20:26 IST
ಟ್ರಿನಿಟಿ ವೃತ್ತದ ಬಳಿ ಮೆಟ್ರೊ ಹಳಿ ದುರಸ್ತಿ ಕಾಮಗಾರಿ ನಡೆಯಿತು    –ಪ್ರಜಾವಾಣಿ ಚಿತ್ರ
ಟ್ರಿನಿಟಿ ವೃತ್ತದ ಬಳಿ ಮೆಟ್ರೊ ಹಳಿ ದುರಸ್ತಿ ಕಾಮಗಾರಿ ನಡೆಯಿತು    –ಪ್ರಜಾವಾಣಿ ಚಿತ್ರ   

ಬೆಂಗಳೂರು: ಟ್ರಿನಿಟಿ ನಿಲ್ದಾಣದ ಬಳಿ ವಯಡಕ್ಟ್‌ನಲ್ಲಿ ಕಾಣಿಸಿಕೊಂಡ ಬಿರುಕು ಸರಿಪಡಿಸುವ ಕಾರ್ಯ ಹಗಲೂ ರಾತ್ರಿ ನಡೆಯುತ್ತಿದೆ.

ದುರಸ್ತಿ ಕಾರ್ಯದ ಸಲುವಾಗಿ ಎಂ.ಜಿ.ರಸ್ತೆ– ಇಂದಿರನಗರನಿಲ್ದಾಣಗಳ ನಡುವೆ ಮೆಟ್ರೊ ಸೇವೆ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸಿದರು. ಮೆಟ್ರೊ ಪ್ರಯಾಣಿಕರಿಗೆ ಕಬ್ಬನ್‌ಪಾರ್ಕ್‌ ನಿಲ್ದಾಣ– ಬೈಯಪ್ಪನಹಳ್ಳಿ ನಿಲ್ದಾಣದ ನಡುವೆ ಉಚಿತ ಬಸ್‌ ವ್ಯವಸ್ಥೆ ಒದಗಿಸಲಾಗಿತ್ತು. ಮೆಟ್ರೊ ನಿಲ್ದಾಣದಲ್ಲಿ ಇಳಿದ ಬಹುತೇಕ ಪ್ರಯಾಣಿಕರು ಬಸ್‌ಗಳ ಮೊರೆ ಹೋದರು. ಬಸ್‌ಗಳು ಅರೆ ಕ್ಷಣದಲ್ಲೇ ತುಂಬಿದ್ದರಿಂದ ಕೆಲವು ಪ್ರಯಾಣಿಕರು ಮುಂದಿನ ಬಸ್‌ಗಾಗಿ ಕಾಯಬೇಕಾಯಿತು.

ಮೆಟ್ರೊ ಮಾರ್ಗದ ದುರಸ್ತಿ ಸಲುವಾಗಿ ಸೇವೆ ವ್ಯತ್ಯಯವಾಗಿರುವ ಬಗ್ಗೆ ಮೆಟ್ರೊ ರೈಲಿನಲ್ಲೂಪ್ರಕಟಣೆ ನೀಡಲಾಗುತ್ತಿತ್ತು.

ADVERTISEMENT

ವಾರಾಂತ್ಯದಲ್ಲಿ ಸಾಮಾನ್ಯವಾಗಿ ಎಂ.ಜಿ.ರಸ್ತೆ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರ ಸಂಖ್ಯೆ ಅಧಿಕವೇ ಇರುತ್ತದೆ. ಅದರಲ್ಲೂ ಹೊಸ ವರ್ಷಾಚರಣೆ ಸಮೀಪಿಸುತ್ತಿದ್ದಂತೆಯೇ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್‌ ರಸ್ತೆ ಆಸುಪಾಸಿನ ಶಾಪಿಂಗ್‌ ಮಳಿಗೆಗಳಲ್ಲಿ ಗ್ರಾಹಕರ ದಟ್ಟಣೆ ಹೆಚ್ಚುತ್ತದೆ. ಬೈಯಪ್ಪನಹಳ್ಳಿ ಕಡೆಯಿಂದ ಮೆಟ್ರೊದಲ್ಲಿ ಬರುವ ಪ್ರಯಾಣಿಕರು ನೇರವಾಗಿ ಎಂ.ಜಿ.ರಸ್ತೆ ತಲುಪಲಾಗದೆ ತುಸು ಸಮಸ್ಯೆ ಎದುರಿಸಿದರು.

‘ವರ್ಷಾಂತ್ಯದಲ್ಲಿ ಎಂ.ಜಿ.ರಸ್ತೆ ಆಸುಪಾಸಿನ ಶಾಪಿಂಗ್‌ ಮಳಿಗೆಗಳು ಅನೇಕ ರಿಯಾಯಿತಿಗಳನ್ನು ಪ್ರಕಟಿಸುತ್ತವೆ. ಇಲ್ಲಿನ ಪಬ್‌ ಮತ್ತು ರೆಸ್ಟೋರೆಂಟ್‌ಗಳಲ್ಲೂ ರಿಯಾಯಿತಿ ದರದ ಮಾರಾಟ ಇರುತ್ತದೆ. ಹಾಗಾಗಿ ವರ್ಷಾಂತ್ಯದಲ್ಲಿ ಇಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಮೆಟ್ರೊ ಆರಂಭವಾದ ಬಳಿಕ ನಾನು ಇಲ್ಲಿಗೆ ಬರಲು ಕಾರು ಬಳಸುತ್ತಿಲ್ಲ. ಈ ಬಾರಿ ಮೆಟ್ರೊ ಇಲ್ಲದ ಕಾರಣ ಸ್ವಲ್ಪ ಸಮಸ್ಯೆ ಆಗಿದೆ’ ಎಂದು ಸಿ.ವಿರಾಮನ್‌ ನಗರದ ನಿವಾಸಿ ಪ್ರಣವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.