ADVERTISEMENT

ಆಟದ ಮೈದಾನ ಕಬಳಿಸಲು ಹುನ್ನಾರ ಆರೋಪ: ಜೆಸಿಬಿ ಯಂತ್ರ ಏರಿ ಮಕ್ಕಳ ಪ್ರತಿಭಟನೆ

ನಂದಿನಿ ಲೇಔಟ್‌

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2019, 19:29 IST
Last Updated 9 ಫೆಬ್ರುವರಿ 2019, 19:29 IST
ಮೈದಾನದಲ್ಲಿ ಜೆಸಿಬಿ ಯಂತ್ರ ಏರಿ ಪ್ರತಿಭಟನೆ ನಡೆಸಿದ ಮಕ್ಕಳು 
ಮೈದಾನದಲ್ಲಿ ಜೆಸಿಬಿ ಯಂತ್ರ ಏರಿ ಪ್ರತಿಭಟನೆ ನಡೆಸಿದ ಮಕ್ಕಳು    

ಬೆಂಗಳೂರು: ‘ನಂದಿನಿ ಲೇಔಟ್‌ನ ರಾಮಕೃಷ್ಣ ನಗರದಲ್ಲಿರುವ ಮಕ್ಕಳ ಆಟದ ಮೈದಾನವನ್ನು ಕಬಳಿಸಲು ಕೆಲವು ರಾಜಕಾರಣಿಗಳು ಪ್ರಯತ್ನಿಸುತ್ತಿದ್ದು, ಅದಕ್ಕೆ ಬಿಡಿಎ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಹಾಗೂ ಶಾಲಾ ಮಕ್ಕಳು ಶನಿವಾರ ಪ್ರತಿಭಟನೆ ನಡೆಸಿದರು.

ಮೈದಾನದ ಜಾಗ ತಮ್ಮದೆಂದು ಹೇಳಿಕೊಂಡು ಶುಕ್ರವಾರ ಬಂದಿದ್ದ ಕೆಲವರು, ಜೆಸಿಬಿ ಯಂತ್ರದ ಮೂಲಕ ತಂತಿಬೇಲಿ ಕಿತ್ತು ಹಾಕಿದ್ದರು. ಶನಿವಾರ ಬೆಳಿಗ್ಗೆ ಮೈದಾನದೊಳಗೆ ಯಂತ್ರವನ್ನು ತೆಗೆದುಕೊಂಡು ಹೋಗಿ ಗುಂಡಿ ತೋಡಲಾರಂಭಿಸಿದ್ದರು. ಅದನ್ನು ಗಮನಿಸಿದ ಸ್ಥಳೀಯರು ಹಾಗೂ ಮಕ್ಕಳು, ಮೈದಾನಕ್ಕೆ ಬಂದು ‘ರಾಮಕೃಷ್ಣನಗರ ಮಕ್ಕಳ ಆಟದ ಮೈದಾನ ರಕ್ಷಣಾ ಸಮಿತಿ’ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಿದರು. ಸ್ಥಳಕ್ಕೆ ಭೇಟಿ ನೀಡಿದ ನಟ ಚೇತನ್‌ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.‌

‘ನಿತ್ಯ ಇದೇ ಮೈದಾನದಲ್ಲಿ ಆಟವಾಡುತ್ತೇವೆ. ಮೈದಾನವನ್ನು ಕಬಳಿಸಲು ಬಿಡುವುದಿಲ್ಲ’ ಎಂದು ಘೋಷಣೆ ಕೂಗಿದ ಮಕ್ಕಳು, ಜೆಸಿಬಿ ಯಂತ್ರ ಏರಿ ಕುಳಿತು ಆಕ್ರೋಶ ಹೊರಹಾಕಿದರು. ನಂತರ, ಮಕ್ಕಳು ಹಾಗೂ ನಿವಾಸಿಗಳು ಮೈದಾನದ ಎದುರಿನ ರಸ್ತೆಯಲ್ಲಿ ಕುಳಿತು ವಾಹನಗಳ ಸಂಚಾರ ತಡೆದರು. ಮೈದಾನ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಘೋಷಣೆ ಕೂಗಿದರು.

ADVERTISEMENT

ಬಳಿಕ ಚಾಲಕ ಹಾಗೂ ಸಿಬ್ಬಂದಿ, ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದರು.

ಅಕ್ರಮ ಹಂಚಿಕೆ: ‘ರಾಮಕೃಷ್ಣನಗರದ ರೈಲ್ವೆಮೆನ್ ಎಚ್‌.ಬಿ.ಸಿ.ಎಸ್. ಲೇಔಟ್‌ನಲ್ಲಿರುವ ಬಿಡಿಎ ನಿವೇಶನವನ್ನು 30 ವರ್ಷಗಳಿಂದ ಆಟದ ಮೈದಾನವಾಗಿ ಬಳಕೆ ಮಾಡಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳೇ ಮೈದಾನದಲ್ಲಿ ಆಟದ ವಸ್ತುಗಳನ್ನು ಅಳವಡಿಸಿ, ಸುತ್ತಲು ತಂತಿಬೇಲಿ ಅಳವಡಿಸಿದ್ದಾರೆ. ಇದೇ ಮೈದಾನದ ಜಾಗವನ್ನು ಬಿಡಿಎ ಅಧಿಕಾರಿಗಳು ತುಂಗಭದ್ರಾ ವಿದ್ಯಾಸಂಸ್ಥೆ, ಮಹಾಲಕ್ಷ್ಮಿಪುರ ಬ್ರಾಹ್ಮಣ ಸಭಾ ಹಾಗೂ ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ ‘ನಾಗರಿಕ ಮೂಲಸೌಕರ್ಯ’ ನಿವೇಶನವೆಂದು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ’ ಎಂದು ಸಮಿತಿ ಸದಸ್ಯ ಲೋಕೇಶ್‌ ದೂರಿದರು.

‘ಮೈದಾನದ ಅಕ್ಕ–ಪಕ್ಕದಲ್ಲಿ ಕರ್ನಾಟಕ ಹರಿಜನ ಗಿರಿಜನ ಪ್ರಾಥಮಿಕ ಶಾಲೆ, ಮುಳಗಲ್‌ವ್ಯಾಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಜರಾಜೇಶ್ವರಿ ಆಂಗ್ಲ ಶಾಲೆ, ಪರಿಕ್ರಮ ಶಾಲೆ, ಶಿಕ್ಷಾ ನಿಕೇತನ, ಸ್ಮಾರ್ಟ್‌ ಪರ್ಲ್ಸ್‌ ಹಾಗೂ ನಂದಿನಿ ಲೇಔಟ್ ಪಬ್ಲಿಕ್ ಶಾಲೆಗಳಿವೆ. ಅಲ್ಲಿಯ ಮಕ್ಕಳು, ಆಟವಾಡಲು ಈ ಮೈದಾನವನ್ನು ಬಳಸುತ್ತಿದ್ದಾರೆ. ಈಗ ಅದನ್ನೂ ಕಿತ್ತುಕೊಂಡರೆ ಮಕ್ಕಳು ಎಲ್ಲಿ ಆಟವಾಡಬೇಕು’ ಎಂದು ಅವರು ಪ್ರಶ್ನಿಸಿದರು.

‘ಅಕ್ರಮ ಹಂಚಿಕೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಅದರ ನಡುವೆಯೇ ಕೆಲವು ರಾಜಕಾರಣಿಗಳು ತಮ್ಮ ಪ್ರಭಾವ ಬಳಸಿಕೊಂಡು ಬಿಡಿಎ ಅಧಿಕಾರಿಗಳು ಹಾಗೂ ಪೊಲೀಸರ ಸಹಕಾರದಿಂದ ಮೈದಾನವನ್ನು ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಿದ್ದಾರೆ’ ಎಂದು ಹೇಳಿದರು.

ಸಮಿತಿಯ ಇನ್ನೊಬ್ಬ ಸದಸ್ಯ ಜ್ಞಾನಮೂರ್ತಿ, ‘ಮೈದಾನದ ಉಳಿವಿಗಾಗಿ ಬಿಡಿಎ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದೇವೆ. ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.